ಶನಿವಾರ, ಫೆಬ್ರವರಿ 27, 2021
31 °C
ಜಿಲ್ಲೆಯಲ್ಲಿ ಸಿದ್ಧರಾಮೇಶ್ವರ, ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

‘ತಾರತಮ್ಯ ವಿರುದ್ಧ ಹೋರಾಟ ನಿರಂತರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ತಾರತಮ್ಯ ವಿರುದ್ಧ ಹೋರಾಟ ನಿರಂತರ’

ಕಾರವಾರ: ಸಾಮಾಜಿಕ ಮತ್ತು ಲಿಂಗ ತಾರತಮ್ಯ ವಿರುದ್ಧ 12ನೇ ಶತಮಾನದಲ್ಲಿ ಶರಣರು ನಡೆಸಿದ ಹೋರಾಟವನ್ನು ಇಂದಿಗೂ ಮುಂದು ವರಿಸಿಕೊಂಡು ಹೋಗ ಬೇಕಾದ ಪರಿಸ್ಥಿತಿಯಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಹೇಳಿದರು. ಗುರುವಾರ ಶಿವಯೋಗಿ ಸಿದ್ಧರಾಮೇಶ್ವರ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ರಂಗಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿ ಜಾತಿ ತಾರತಮ್ಯದ ವಿರುದ್ಧದ ಧ್ವನಿಯಾಗಿತ್ತು. ಆದರೆ ಇಂದಿಗೂ ಜಾತಿ ಹಾಗೂ ಲಿಂಗ ತಾರತಮ್ಯ ಸಮಾಜದಲ್ಲಿ ಮುಂದುವರೆ ದಿದ್ದು, ಇದರ ವಿರುದ್ಧ ನಿರಂತರ ಹೋರಾಟ ನಡೆಯುವ ಅಗತ್ಯವಿದೆ. ಶರಣರು ವಚನಗಳ ಮೂಲಕ ಸಮಾನತೆ ಹಾಗೂ ಸಹೋದರತೆಯನ್ನು ಸಾರುವ ಕಾರ್ಯವನ್ನು ಮಾಡಿದರು. ಸಾಮಾಜಿಕ ದೋಷಗಳನ್ನು ಎತ್ತಿ ತೋರಿಸಿ ಅದಕ್ಕೆ ಪರಿಹಾರವನ್ನು ಸೂಚಿಸುವ ಕಾರ್ಯವನ್ನು ಮಾಡಿದರು. ಜೀತ ಪದ್ಧತಿ ವಿರುದ್ಧ ಜಾಗೃತಿ, ಅಂತರ್ ಜಾತೀಯ ವಿವಾಹಗಳ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯವಾಯಿತು ಎಂದರು.ಶರಣರ ತತ್ವಗಳನ್ನು, ವಚನಗಳ ಆಶಯವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ಬದಲಾವಣೆ ಉಂಟು ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಲೀಲಾಬಾಯಿ ಠಾಣೇಕರ್ ಮಾತನಾಡಿ, ಸಿದ್ದರಾಮೇಶ್ವರ ಶರಣರು ಹಾಗೂ ಅಂಬಿಗರ ಚೌಡಯ್ಯ ತಮ್ಮ ನಡೆನುಡಿ ಮೂಲಕ ಸುತ್ತಲಿನ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಸಾಮಾಜಿಕ ಬದಲಾವಣೆ ಪ್ರತಿಯೊಬ್ಬರ ಮನೆಯಿಂದ ಆರಂಭವಾಗಬೇಕಿದೆ. ಜಯಂತಿಗಳು ಮಹಾತ್ಮರ ಜೀವನವನ್ನು ಅರಿತುಕೊಳ್ಳುವ ಅವಕಾಶ ಕಲ್ಪಿಸುತ್ತದೆ ಎಂದರು.ಸಾಹಿತಿ ಬಾಳಣ್ಣ ಶಿಗೀಹಳ್ಳಿ ಅವರು ವಿಶೇಷ ಉಪನ್ಯಾಸ ನೀಡಿದರು. ಕಲಾವಿದೆ ರಾಧಾ ದೇಸಾಯಿ ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ.ಹಿರೇಗೌಡರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಪ್ರಾಣೇಶ್ ರಾವ್ ಉಪಸ್ಥಿತರಿದ್ದರು.ಆಕರ್ಷಕ ಮೆರವಣಿಗೆ: ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆಯನ್ನು ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉದ್ಘಾಟಿಸಿದರು. ವಿವಿಧ ಕಲಾತಂಡಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು. ವಿವಿಧ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕುಮಟಾ ವರದಿ

‘ತಮ್ಮ ವಚನಗಳ ಮೂಲಕ ಜನಸಾಮಾನ್ಯರಲ್ಲಿ ಆತ್ಮಾಭಿಮಾನ ಮೂಡಿಸುವಲ್ಲಿ ಯಶಸ್ವಿಯಾಗುವ ಮೂಲಕ  ಅಂಬಿಗರ ಚೌಡಯ್ಯ ಸಾಮಾಜಿಕ ಹರಿಕಾರ ಎನಿಸಿಕೊಂಡಿದ್ದಾರೆ’ ಎಂದು ಉಪವಿಭಾಗಾಧಿಕಾರಿ ಬಿ. ಶೋಭಾ ಹೇಳಿದರು. ಕುಮಟಾದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ ಅಂಬಿಗರ ಚೌಡಯ್ಯ ಈ ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗೆ ಪ್ರತಿಯಾಗಿ ಸರ್ಕಾರ ಅವರ ಜಯಂತಿ ಕಾರ್ಯಕ್ರಮವನ್ನು ಆಚರಿಸುತ್ತಿದೆ’ ಎಂದರು.ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಡಾ. ಅರವಿಂದ ನಾಯಕ, ‘ವಚನ ಸಾಹಿತ್ಯದಲ್ಲಿ ಅಂಬಿಗರ ಚೌಡಯ್ಯ ಜನಮಾನಸದಲ್ಲಿ ನಿಂತಿದ್ದಾರೆ.  ಶಾಲಾ, ಕಾಲೇಜು ಪಠ್ಯದಲ್ಲಿ ಅಂಬಿಗರ ಚೌಡಯ್ಯ ಅವರ ವಚನ ಕಡ್ಡಾಯವಾಗಿ ಸೇರಿಸುವಂತಾಗಬೇಕು. ಆದರೆ ಆ ಮಟ್ಟಿಗೆ ಮಂಗಳೂರು ವಿವಿ ಆ ಕೆಲಸವನ್ನು ಆಗಲೇ ಮಾಡಿದೆ’ ಎಂದರು.ಸಿದ್ದಾಪುರ ವರದಿ

ಶರಣರ ಸೇವಾ ಮನೋಭಾವನೆಯನ್ನು ಸರ್ಕಾರಿ ನೌಕರರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಡಿ.ಜಿ.ಹೆಗಡೆ ಹೇಳಿದರು. ತಾಲ್ಲೂಕು ಆಡಳಿತದ ಆಶ್ರಯದಲ್ಲಿ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಗುರುವಾರ ನಡೆದ  ಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸರೋಜಾ ಕಟ್ಟಿಮನಿ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯ್ತಿ ಇಓ ಶ್ರೀಧರ ಭಟ್, ಗ್ರೇಡ್ 2 ತಹಶೀಲ್ದಾರ್ ಎನ್‌.ಷಡಕ್ಷರಿ, ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಗೌಡರ್ ಮತ್ತಿತರರು ಉಪಸ್ಥಿತರಿದ್ದರು. ಉಪತಹಶೀಲ್ದಾರ್ ಡಿ.ಆರ್‌.ಬೆಳ್ಳಿಮನೆ ನಿರೂಪಿಸಿದರು. ನಾಗರಾಜ ನಾಯ್ಕಡ ವಂದಿಸಿದರು.ಯಲ್ಲಾಪುರ ವರದಿ

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ. ಡಿ. ಮುಲ್ಲಾ ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದರ್‌ ರಾಜಶೇಖರ ಡಂಬಳ ಅಧ್ಯಕ್ಷತೆ ವಹಿಸಿದ್ದರು.ಉಪನ್ಯಾಸಕ ಡಾ.ಡಿ.ಕೆ. ಗಾಂವ್ಕಾರ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯ್ತಿ ಇಓ ವಿಠ್ಠಲ ನಾಟೇಕರ್, ಲೋಕೋಪಯೋಗಿ ಇಲಾಖೆಯ ಎಇಇ ಎಸ್. ಎಸ್. ಜಗಳೂರ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಕೆ. ಬಿ. ತೀರ್ಥಪ್ರಸಾದ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ಕಾಪ್ಸೆ ನಿರ್ವಹಿಸಿದರು. ಗ್ರೇಡ್ 2 ತಹಶೀಲ್ದಾರ್‌ ಡಿ. ಜಿ. ಭಟ್ಟ ವಂದಿಸಿದರು. ಹಳಿಯಾಳ ವರದಿ

ಅಂಬಿಗರ ಚೌಡಯ್ಯ ನವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿ ಕೊಂಡು ಜೀವನದ ಮೌಲ್ಯವನ್ನು ಕಾಪಾಡಿ ಮೌಲ್ಯಾಧಾರಿತ ವಾಗಿ ನಡೆದುಕೊಳ್ಳಿ ಎಂದು ತಹಶೀಲ್ದಾರ್‌ ವಿದ್ಯಾಧರ ಗುಳಗುಳಿ ಹೇಳಿದರು. ಸ್ಥಳೀಯ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಅಂಬಿಗರ ಚೌಡಯ್ಯನವರ ವಚನಗಳ ಮೂಲಕ ವಿವರಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ನಾಯ್ಕ, ಪತ್ರಕರ್ತೆ ಸುಮಂಗಲಾ ಅಂಗಡಿ, ಕಂದಾಯ ಇಲಾಖೆಯ ಸಿಬ್ಬಂದಿ, ವಿವಿಧ ಇಲಾಖೆ  ಅಧಿಕಾರಿಗಳು ಉಪಸ್ಥಿತರಿದ್ದರು.ಬಾರದವರಿಗೆ ₹300 ದಂಡ!

‘ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೆ ನಮ್ಮ ಸಮಾಜದ ಹೆಚ್ಚಿನ ಜನರನ್ನು ಕರೆದುಕೊಂಡು ಬಂದಿದ್ದೇವೆ. ಕಾರ್ಯಕ್ರದ ಹಿಂದಿನ ದಿನ ಅಂಬಿಗರ ಸಮಾಜದ ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಚೌಡಯ್ಯ ಅವರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕಾರ್ಯಕ್ರಮಕ್ಕೆ ಬರಲು ವಿನಂತಿಸಿದ್ದೆವು. ಬಾರದಿದ್ದವರಿಗೆ ಸಮಾಜದ ವತಿಯಿಂದ ತಲಾ ₹ 300 ದಂಡ  ವಿಧಿಸಲಾಗಿದೆ’ ಎಂದು ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದ ಅಂಬಿಗರ ಸಮಾಜದ ಯಜಮಾನ ಗಣಪಯ್ಯ ಜಟ್ಟಪ್ಪ ಅಂಬಿಗ ಎನ್ನುವವರು ತಿಳಿಸಿದರು.***

ಪರೀಕ್ಷೆಗಾಗಿ ಪಠ್ಯಪುಸ್ತಕಗಳನ್ನು ಓದುವಂತೆ ಭಾಷಣಗಳು ಕೇವಲ ಶಬ್ದದ ಅಲಂಕಾರಕ್ಕೆ ಮಾತ್ರ ಸೀಮಿತವಾಗುತ್ತಿರುವುದು ವಿಷಾದನೀಯ.

-ಉಜ್ವಲ್‌ಕುಮಾರ್‌ ಘೋಷ್‌,
ಜಿಲ್ಲಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.