ಸೋಮವಾರ, ಜನವರಿ 20, 2020
20 °C

‘ಬಿಕಿನಿ ಕ್ಯಾಲೆಂಡರ್‌’ ಬೆಡಗಿಯ ವೃತ್ತಾಂತ

ನಿರೂಪಣೆ: ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಹಾಯ್‌... ನಾನು ಬೆಂಗಳೂರಿನ ಬೆಡಗಿ ನಿಕೋಲ್‌ ಫರಿಯಾ.ಅದೇ 2010ರಲ್ಲಿ ಮಿಸ್‌ ಅರ್ತ್‌ ಆಗಿ ಹೆಮ್ಮೆ ತಂದಿದ್ದೆನಲ್ಲ, ನೆನಪಿದೆ ತಾನೆ? ಫ್ಯಾಷನ್‌ ಗ್ಲಾಮರ್‌ ಕ್ಷೇತ್ರದಲ್ಲಿ ನನ್ನ ಸಾಧನೆ ಮುಂದುವರೆರಿದಿದೆ. ‘ಎಲ್ಲೆ’, ‘ಕಾಸ್ಮೊಪಾಲಿಟನ್’, ‘ವೋಗ್’ ಮುಂತಾದ ನಿಯತಕಾಲಿಕೆಗಳಲ್ಲಿ ಹಸಿಬಿಸಿಯಾಗಿ ಕಾಣಿಸಿಕೊಂಡು ಹುಡುಗರ ಎದೆಬಡಿತ ಏರಿಸಿದ್ದೆ.

ಇದೀಗ 2014ರ ಕಿಂಗ್‌ಫಿಷರ್‌ ಕ್ಯಾಲೆಂಡರ್‌ನಲ್ಲಿ ಕಾಣಿಸಿಕೊಂಡಿದ್ದೇನೆ, ಇನ್ನಷ್ಟು ಸೆಕ್ಸಿಯಾಗಿ. ನಿಮಗೂ ಗೊತ್ತೇ ಇದೆ ಈ ಕ್ಯಾಲೆಂಡರ್, ಬಿಕಿನಿ ಕ್ಯಾಲೆಂಡರ್

ಎಂದೇ ಕರೆಸಿಕೊಳ್ಳೋದು. ಫಿಲಿಪ್ಪೀನ್ಸ್‌ನ ಬೊರಾಕೆ ಹಾಗೂ ಕೆಬುವಿನ ಸಮುದ್ರ ತಟದಲ್ಲಿ ಸ್ವಿಮ್‌ ಸೂಟ್‌ ಕ್ಯಾಲೆಂಡರ್‌ಗಾಗಿ ನಾವು ಪೋಸ್‌ ನೀಡಿದ್ದು. 2003ರಿಂದ ಪ್ರಾರಂಭವಾದ ಈ ಕ್ಯಾಲೆಂಡರ್‌ಗೆ ಸಖತ್ ಬೇಡಿಕೆ ಗೊತ್ತಾ. ನನಗಂತೂ ಸೆಕ್ಸಿಯಾದ ಆ ಉಡುಗೆ ತೊಟ್ಟು ಪೋಸ್‌ ಕೊಡುವಾಗ ಏನೋ ಒಂದು ಥರ ಕಚಗುಳಿ.

ಅರೆಮುಚ್ಚಿದ ದೇಹವನ್ನು ಸೂರ್ಯನ ಬಿಸಿಲಿಗೆ ಸೋಕಿಸಿ ಸಮುದ್ರ ರಾಜನ ತೆಕ್ಕೆಯಲ್ಲಿ ಮಲಗಿದಾಗ ಮುತ್ತಿನ ಸುರಿಮಳೆಯೇ ಸಿಕ್ಕ ಅನುಭವ. ಅದರಲ್ಲೂ ಜನಪ್ರಿಯ ಛಾಯಾಗ್ರಾಹಕ ಅತುಲ್‌ ಕಸ್ಬೇಕರ್‌ ಅವರ ಕ್ಯಾಮೆರಾ ಕಣ್ಣಿಗೆ ಒಡ್ಡಿಕೊಳ್ಳುವ ಅನುಭವವೇ ಬೇರೆ. ನಾವು ಒಟ್ಟು ಆರು ಜನ ಇದ್ದೆವು. ಅವರಲ್ಲಿ ಒಬ್ಬಾಕೆ ಎನ್‌ಡಿಟಿವಿಯಲ್ಲಿ ನಡೆದ ಕಿಂಗ್‌ಫಿಷರ್‌ ಸೂಪರ್‌ ಮಾಡೆಲ್‌ ಸ್ಪರ್ಧೆಯಲ್ಲಿ ಗೆದ್ದವಳು. ಇನ್ನುಳಿದ ಐವರು– ಚೆನ್ನೈನ ರೋಶೆಲ್‌ ರಾವ್‌, ಆಂಧ್ರಪ್ರದೇಶದ ಶೋಭಿತಾ ಧುಲಿಪಾಲ್‌, ನಟಿ ಸಹಾರ್‌ ಬಿನಿಯಾಜ್‌, ಬೆಂಗಾಲಿ ಗೊಂಬೆ ರಿಕಿ ಚಟರ್ಜಿ– ಮಾಡೆಲಿಂಗ್‌ ಕ್ಷೇತ್ರದಲ್ಲಿ ಹೆಸರು ಮಾಡಿದವರೇ.

 

ಹದಿನೈದನೇ ವರ್ಷಕ್ಕೆ ನಾನು ರ್‍ಯಾಂಪ್‌ ಏರಿದ್ದು. ತಂಪು ಗಾಳಿಗೆ ಮೈಯೊಡ್ಡಿಕೊಳ್ಳುವಂಥ ದಿರಿಸು ಧರಿಸಿ ರೋಮಾಂಚನಗೊಳ್ಳುತ್ತಿದ್ದೆ. ಲೈಟ್‌, ಕ್ಯಾಮೆರಾ, ಶೂಟಿಂಗ್‌ ಅಂದರೆ ಮೊದಲಿನಿಂದಲೂ ಏನೋ ಒಂಥರಾ  ಸೆಳೆತ. ನಟಿಯಾಗಿ ಕಾಣಿಸಿಕೊಳ್ಳಬೇಕು ಎಂದು ಮಾಡೆಲಿಂಗ್‌, ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾದೆ. ಆಸೆ ಕೊನೆಗೂ ಫಲಿಸಿತು. ಇದೀಗ ಪಡ್ಡೆ ಹುಡುಗರ ನಿದ್ದೆ ಕೆಡಿಸುವ ‘ಯಾರಿಯಾ’ ಹಿಂದಿ ಸಿನಿಮಾದಲ್ಲಿ ನಾನೇ ನಾಯಕಿ. ಜಿಯಾ ಎಂಬ ಸುಂದರ ಕಾಲೇಜು ಯುವತಿಯ ಪಾತ್ರವದು. ಹುಡುಗರೆಲ್ಲಾ ಆಕೆಯ ಹಿಂದೆಯೇ ಸುತ್ತುತ್ತಾರೆ. ಹುಡುಗಿಯರಿಗೆ ಆಕೆಯಂತೆ ಆಗಬೇಕು ಎಂಬ ತವಕ. ಅಂಥ ಬೋಲ್ಡ್‌ ಹಾಗೂ ಆತ್ಮವಿಶ್ವಾಸದ ಬೆಡಗಿಯ ಪಾತ್ರವನ್ನು ನಿಭಾಯಿಸಿದ್ದೇನೆ ಎಂಬುದು ಸದ್ಯದ ಹೆಮ್ಮೆ ನನ್ನದು.ಸಿನಿಮಾ ಆಯ್ಕೆ ಪ್ರಕ್ರಿಯೆ ಬಗ್ಗೆ ನಿಮಗೆ ಹೇಳಲೇಬೇಕು. ಮಿಸ್‌ ಅರ್ತ್‌ ಸ್ಪರ್ಧೆಯಲ್ಲಿ ಟ್ಯಾಲೆಂಟ್‌ ರೌಂಡ್‌ಗಾಗಿ ಬೆಲ್ಲಿ ಡಾನ್ಸ್‌ ಮಾಡಿ ಗೆದ್ದಿದ್ದೆ. ಅದನ್ನು ಯುಟ್ಯೂಬ್‌ನಲ್ಲಿ ನೋಡಿದ ನಿರ್ದೇಶಕಿ ದಿವ್ಯಾ ಕೋಸಲ್‌ ಕುಮಾರ್‌ ಅವರಿಂದ ಮೊಬೈಲ್‌ ನಂಬರ್‌ ಕೊಡುವಂತೆ ಫೇಸ್‌ಬುಕ್‌ಗೆ ಸಂದೇಶ ಬಂತು. ನನಗೆ ಆತಂಕವಾಯಿತು. ಆದರೂ ನಂಬರ್‌ ಟೈಪ್‌ ಮಾಡಲು ಮುಂದಾದೆ. ಅಮ್ಮ ದಿಢೀರನೆ ಬಂದು ಅವರ ಮೊಬೈಲ್‌ ಸಂಖ್ಯೆ ನಮೂದಿಸಿ ಕಳುಹಿಸಿಬಿಟ್ಟರು.ಕೊನೆಗೆ ಆಡಿಶನ್‌. ಫ್ರೆಂಚ್, ಇಂಗ್ಲಿಷ್‌, ಹಿಂದಿಯಲ್ಲಿ ಆಡಿಶನ್‌ ನೀಡಿದೆ. ನಿರ್ದೇಶಕರೇ ನಟನೆ, ನನ್ನ ದಿರಿಸು, ಮೇಕಪ್‌ ಎಲ್ಲದರ ಬಗ್ಗೆ ಕಾಳಜಿ ವಹಿಸಿದ್ದನ್ನು ನೋಡಿ ಕ್ಲೀನ್‌ಬೋಲ್ಡ್‌ ಆದೆ. ಸಿನಿಮಾಕ್ಕೂ ಆಯ್ಕೆಯಾಗಿಬಿಟ್ಟೆ. ಆ ಸಿನಿಮಾ ಚಿತ್ರೀಕರಣದ ಮೊದಲ ದಿನವೇ ‘ಎಬಿಸಿಡಿ’ ಎಂಬ ಹಾಡಿನ ಚಿತ್ರೀಕರಣವಿತ್ತು. ಆ ದಿನವೇ ವೃತ್ತಿ ಬದುಕಿನ ಮರೆಯಲಾರದ ದಿನವಾಯಿತು.

ಅನೇಕರು ಮಿಸ್‌ ಅರ್ತ್ ಆಗಿಬಿಟ್ಟರೆ ಸಿನಿಮಾದಲ್ಲೇ ಮಿಂಚಬೇಕೆಂಬ ನಿಯಮವಿದೆಯೇ ಎಂದು ಕೇಳುತ್ತಾರೆ. ಆದರೆ ಫ್ಯಾಷನ್‌ ಕ್ಷೇತ್ರಕ್ಕೆ ಕಾಲಿಡುವುದೇ ಸಿನಿಮಾ ಕನಸನ್ನು ಹೊತ್ತು. ಸಿನಿಮಾ ಪುರುಷ ಪ್ರಧಾನ ಕ್ಷೇತ್ರ. ಅರೆಬರೆ ಉಡುಪು ತೊಟ್ಟು, ಬೆತ್ತಲಾಗುವ ಹೆಣ್ಣಿಗೆ ಮಾತ್ರ ಅಲ್ಲಿ ಅವಕಾಶ. ಆಕೆ ಎಂದರೆ ಸೆಕ್ಸ್ ಸಂಕೇತ, ಗ್ಲಾಮರ್‌ ಅಷ್ಟೆ. ಇನ್ಯಾವ ಮಹತ್ವವೂ ಆಕೆಯ ಪಾತ್ರಕ್ಕಿರುವುದಿಲ್ಲ ಎನ್ನುವವರೂ ಇದ್ದಾರೆ.ಆದರೆ ಈಗತಾನೆ ಆ ಕ್ಷೇತ್ರದಲ್ಲಿ ಕಾಲಿಟ್ಟಿರುವ ನಾನು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾರೆ. ಅದೂ ಅಲ್ಲದೆ ನಿರ್ದೇಶಕಿಯಡಿಯಲ್ಲಿ ನಾನು ಕೆಲಸ ಮಾಡುತ್ತಿರುವುದು. ಅಂಥ ಅನುಭವ ನನಗಿನ್ನೂ ಆಗಿಲ್ಲ. ಅಪ್ಪ ಅಮ್ಮನ ಬೆಂಬಲ ಸದಾ ಇರುವುದರಿಂದ ಅಹಿತಕರ ಅನುಭವಗಳೇನೂ ಆಗಿಲ್ಲ. ಮಾಡೆಲಿಂಗ್‌, ಸಿನಿಮಾ ಎರಡೂ ವಿಭಿನ್ನ ಕ್ಷೇತ್ರಗಳು.

ದೃಶ್ಯಾವಳಿ, ಅನುಭವಗಳು ನಮ್ಮನ್ನು ಹೆಚ್ಚು ಗಟ್ಟಿಗೊಳಿಸುತ್ತವೆ. ಅದರಲ್ಲೂ ಸಿನಿಮಾದಲ್ಲಿ ಕಲಿಯಲು ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಅವಕಾಶವಿದೆ. ಇದಿಷ್ಟು ನನ್ನ ಸದ್ಯದ ಕತೆ. ಅಂದ ಹಾಗೆ, ಕಿಂಗ್‌ಫಿಷರ್ ಬಿಕಿನಿ ಕ್ಯಾಲೆಂಡರ್ ಇಂದು, ಶನಿವಾರ ಬಿಡುಗಡೆಯಾಗುತ್ತದೆ. ನೋಡಬೇಕಾದರೆ ಲಾಗಾನ್ ಆಗಿ: www.kingfishercalendar.com*  ‘ಯಾರಿಯಾ’ ಕಾಂಟ್ರಾಕ್ಟ್‌ ಸಹಿ ಮಾಡಿರುವುದರಿಂದ ಮುಂದಿನ ಯಾವ ಯೋಜನೆಗಳ ಬಗ್ಗೆಯೂ ಯೋಚಿಸಿಲ್ಲ. ಆದರೆ ದೇಹ ದಂಡನೆಗೆ ಒಂದಿಷ್ಟು ಸಮಯ ಮೀಸಲಿಟ್ಟುಕೊಂಡಿದ್ದೇನೆ. ಈ ಕ್ಷೇತ್ರದಲ್ಲಿ ಬಾಗುಬಳುಕಿನ ದೇಹ ಇರಲೇಬೇಕಲ್ಲ. ಹಾಗಾಗಿ ಜಿಮ್‌ ಮಾಡುತ್ತೇನೆ. ಸಮಯ ಸಿಕ್ಕಾಗಲೆಲ್ಲಾ ಜೋರಾಗಿ ಹಾಡು ಹಾಕಿಕೊಂಡು ಬೆಲ್ಲಿ ಡಾನ್ಸ್‌, ಬ್ರೇಕ್‌ ಡಾನ್ಸ್‌, ಚಿಕ್ಕಂದಿನಲ್ಲಿ ಕಲಿತ ಭರತನಾಟ್ಯ ಎಲ್ಲವನ್ನೂ ಮಾಡುತ್ತೇನೆ.

ವ್ಯಾಯಾಮ ಕಡ್ಡಾಯ ಬಿಡಿ. ಚರ್ಮದ ಕಾಂತಿ ಉಳಿಸಿಕೊಳ್ಳಲು  ತುಂಬಾ ನೀರು ಕುಡಿಯುತ್ತೇನೆ. ಸನ್‌ಬ್ಲಾಕ್‌ ಲೋಶನ್‌ ಎಂದಿಗೂ ನನ್ನ ಸಂಗಾತಿ. ರಾತ್ರಿ ಮಲಗುವಾಗ ಮೇಕಪ್‌  ತೆಗೆಯಲೇಬೇಕು ಎಂಬ ಶಿಸ್ತು ನನ್ನದು. ದಿರಿಸು ಆರಾಮದಾಯಕವಾಗಿರಬೇಕು ಎಂಬುದು ನನ್ನ ಆದ್ಯತೆ. ಫ್ಯಾಷನ್‌ ಬೆನ್ನತ್ತುವ ಜಾಯಮಾನ ನನ್ನದಲ್ಲ. ದಟ್ಟ ಬಣ್ಣಗಳು ನನಗೆ ತುಂಬಾ ಇಷ್ಟ.* ನನ್ನೆಲ್ಲಾ ಸಾಧನೆ ಅವಕಾಶಗಳಿಗೆ ವೇದಿಕೆ ಹಾಕಿಕೊಟ್ಟಿದ್ದು ಬೆಂಗಳೂರು. ಸುಂದರವಾದ ಉದ್ಯಾನ ನಗರಿ ಅದು. ಯಾವುದೇ ಕ್ಷೇತ್ರವಿರಲಿ ಸಾಧನೆ ಮಾಡುವ ಮನಸ್ಸಿರುವವರಿಗೆ ಬೆಂಗಳೂರು ಹೇಳಿಮಾಡಿಸಿದ ಜಾಗ. ‘ಬುದ್ಧಿವಂತರಿರುವ ಹಾಗೂ ಸುಂದರವಾದ ನಗರದಿಂದ ಬಂದವಳಾ ನೀನು’ ಎಂದು ಬೇರೆ ರಾಜ್ಯದವರು ಬೆಂಗಳೂರಿನ ಬಗ್ಗೆ ಮೆಚ್ಚುಗೆಯ ಮಾತಾಡುವಾಗ ಖುಷಿಯಿಂದ ಉಬ್ಬಿಹೋಗುತ್ತೇನೆ.

ಪ್ರತಿಕ್ರಿಯಿಸಿ (+)