ಮಂಗಳವಾರ, ಜೂನ್ 15, 2021
23 °C

‘ಬೆಸ್ಕಾಂನಲ್ಲಿ ಅವ್ಯವಹಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯು (ಬೆಸ್ಕಾಂ) ವಿದ್ಯುತ್‌ ಮಾಪಕಗಳ (ಮೀಟರ್‌) ಸರಬರಾಜಿಗಾಗಿ ಲ್ಯಾಂಡಿಸ್‌ ಅಂಡ್‌ ಗಿರ್‌  (ಎಲ್‌ ಅಂಡ್‌ ಜಿ) ಲಿಮಿಟೆಡ್‌ ಕಂಪೆನಿಗೆ ನೀಡಿರುವ ಗುತ್ತಿಗೆಯನ್ನು ಅಕ್ರಮವಾಗಿ ಮುಂದುವರಿಸಿದೆ. ಇದರಿಂದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹೊರೆ ಆಗಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಆರೋಪಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಇಬಿ ಎಂಜಿನಿಯರುಗಳ ಸಂಘದ ಅಧ್ಯಕ್ಷರಾಗಿ ಕೆಪಿಟಿಸಿಎಲ್‌ ನಿರ್ದೇಶಕರ ಸ್ಥಾನ ಪಡೆದಿರುವ ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್‌ ವಿ.ವೆಂಕಟಶಿವಾರೆಡ್ಡಿ ಅವರ ಕೈವಾಡದಿಂದ ಈ ಅಕ್ರಮ ನಡೆದಿದೆ. ಅವರ ಸಂಬಂಧಿ ಜಯಸಿಂಹ ರೆಡ್ಡಿ ಎಂಬುವರಿಗೆ ಅನುಕೂಲ ಮಾಡಿಕೊಡಲು ಎಲ್‌ ಅಂಡ್‌ ಜಿ ಕಂಪೆನಿಗೆ ನೀಡಿದ್ದ ಗುತ್ತಿಗೆ ಆದೇಶವನ್ನು ಕಾನೂನುಬಾಹಿರವಾಗಿ ಮುಂದುವರಿಸಲಾಗಿದೆ’ ಎಂದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಬರೆದಿರುವ ಪತ್ರ ಹಾಗೂ ಹಲವು ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು. ಗುತ್ತಿಗೆ ಮುಂದುವರಿಸುವ ನಿರ್ಣಯಕ್ಕೆ ತಕ್ಷಣವೇ ತಡೆ ನೀಡಬೇಕು ಎಂದು ಸಚಿವರನ್ನು ಒತ್ತಾಯಿಸಿದರು.ವಿದ್ಯುತ್‌ ಮಾಪಕಗಳ ಪೂರೈಕೆಗೆ 2009ರಲ್ಲಿ ಬೆಸ್ಕಾಂ ಟೆಂಡರ್‌ ಪ್ರಕ್ರಿಯೆ ನಡೆಸಿತ್ತು. ಆಗ, ಎಲ್‌ ಅಂಡ್‌ ಜಿ ಕಂಪೆನಿ ಪ್ರತಿ ಮೀಟರ್‌ಗೆ ರೂ 1,190 ದರ ನಮೂದಿಸಿತ್ತು. ಮೆ.ಎಚ್‌ಪಿಎಲ್‌ ಕಂಪೆನಿ ರೂ 954 ದರ ನಮೂದಿಸಿತ್ತು. ಆದರೆ, ವೆಂಕಟಶಿವಾ ರೆಡ್ಡಿ ಅವರ ಹಸ್ತಕ್ಷೇಪದಿಂದಾಗಿ ಎಲ್‌ ಅಂಡ್‌ ಜಿಗೆ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆಯ ಅವಧಿ 2013ರ ಆಗಸ್ಟ್‌ನಲ್ಲಿ ಕೊನೆಗೊಂಡಿತ್ತು ಎಂದು ಅವರು  ಹೇಳಿದರು.ಗುತ್ತಿಗೆ ಅವಧಿ ಪೂರ್ಣಗೊಳ್ಳುವ ಕಾರಣದಿಂದ ಹೊಸ ಟೆಂಡರ್‌ ಆಹ್ವಾನಿಸಿ 2013ರ ಮಾರ್ಚ್ 19ರಂದು ಪ್ರಕಟಣೆ ಹೊರಡಿಸಲಾಗಿತ್ತು. ಆದರೆ, ದಿಢೀರನೆ ಟೆಂಡರು ಪ್ರಕ್ರಿಯೆಯನ್ನು ರದ್ದು ಮಾಡಿ ಜಿ ಅಂಡ್‌ ಎಲ್‌ ಕಂಪೆನಿಯ ಗುತ್ತಿಗೆಯನ್ನು 2014ರ ಫೆಬ್ರುವರಿ 5ರವರೆಗೆ ವಿಸ್ತರಿಸಲಾಗಿತ್ತು. ಇದೇ ಗುತ್ತಿಗೆಯನ್ನು ಜೂನ್‌ 30ರವರೆಗೂ ವಿಸ್ತರಿಸುವ ತೀರ್ಮಾನವನ್ನು ಜನವರಿ 16ರಂದು ನಡೆದ ಬೆಸ್ಕಾಂ ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಇಡೀ ಪ್ರಕ್ರಿಯೆ ಕಾನೂನುಬಾಹಿರವಾಗಿ ನಡೆದಿದೆ ಎಂದು ದೂರಿದರು.‘ಮಾ 4ರಂದು ನಡೆದ ನಿಗಮದ ಆಡಳಿತ ಮಂಡಳಿ ಸಭೆ­ಯಲ್ಲಿ ಜಿ ಅಂಡ್‌ ಎಲ್‌ ಕಂಪೆನಿಗೆ ನೀಡಿರುವ ಗುತ್ತಿಗೆಯನ್ನು 2015ರ ಜೂನ್‌ 30ರವರೆಗೂ ವಿಸ್ತರಿಸುವ ನಿರ್ಣಯ ಕೈಗೊಳ್ಳಲಾಗಿದೆ. ಆ ದಿನದ ಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯ ಇರಲಿಲ್ಲ. ಆದರೆ, ವೆಂಕಟಶಿವಾರೆಡ್ಡಿ ತಾವಾಗಿಯೇ ವಿಷಯ ಮಂಡಿಸಿ, ನಿರ್ಣಯ ಅಂಗೀಕರಿಸುವಂತೆ ಒತ್ತಾಯ ಮಾಡಿದ್ದಾರೆ’ ಎಂದು ಹೇಳಿದರು.ರೂ 35.04 ಕೋಟಿ ನಷ್ಟ: ‘2008ರಲ್ಲಿ ಪಿಎಚ್‌ಎಲ್‌ ಕಂಪೆನಿ ರೂ 954ರ ದರದಲ್ಲಿ ವಿದ್ಯುತ್‌ ಮಾಪಕ ಒದಗಿಸಲು ಸಿದ್ಧವಿತ್ತು. ಆದರೆ, ಜಿ ಅಂಡ್‌ ಎಲ್‌ ಕಂಪೆನಿಗೆ ರೂ 1,190ರ ದರದಲ್ಲಿ ಗುತ್ತಿಗೆ ನೀಡಲಾಗಿತ್ತು. ಈ ದರದಲ್ಲಿ ಪ್ರತಿ ತಿಂಗಳು ಸರಾಸರಿ 25 ಸಾವಿರ ಮೀಟರ್‌ ಖರೀದಿಸಲಾಗಿದೆ. ಇದರಿಂದ ಬೆಸ್ಕಾಂಗೆ ರೂ 35.04 ಕೋಟಿ ನಷ್ಟವಾಗಿದೆ’ ಎಂದು ಹೇಳಿದರು.ಈಗ ಎಲ್‌ ಅಂಡ್‌ ಜಿ ಕಂಪೆನಿ ತಮಿಳುನಾಡು ಸರ್ಕಾರಕ್ಕೆ ರೂ 705ರ ದರದಲ್ಲಿ ವಿದ್ಯುತ್‌ ಮಾಪಕಗಳನ್ನು ಪೂರೈಸುತ್ತಿದೆ. ಆದರೆ, ಬೆಸ್ಕಾಂಗೆ ರೂ 905ರ ದರದಲ್ಲಿ ವಾರ್ಷಿಕ 20 ಲಕ್ಷ ಮಾಪಕಗಳನ್ನು ಪೂರೈಸುವ ಗುತ್ತಿಗೆ ಪಡೆದುಕೊಂಡಿದೆ.  ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 40 ಕೋಟಿ ನಷ್ಟ ಉಂಟಾಗಲಿದೆ ಎಂದು ಆರೋಪಿಸಿದರು.ವೆಂಕಟಶಿವಾ ರೆಡ್ಡಿ ಮೇಲೆ 2007ರಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಅಕ್ರಮ ಆಸ್ತಿಯನ್ನು ಬಯಲಿಗೆ ತಂದಿದ್ದರು. ಆದರೂ, ಎಂಜಿನಿಯರುಗಳ ಸಂಘದ ಅಧ್ಯಕ್ಷ ಸ್ಥಾನದ ಪರಿಣಾಮವಾಗಿ ಕೆಪಿಟಿಸಿಎಲ್‌ ನಿರ್ದೇಶಕರ ಹುದ್ದೆ ಪಡೆದು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ತಕ್ಷಣ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.