ಸೋಮವಾರ, ಜನವರಿ 20, 2020
18 °C

‘ಮಹಿಳಾ ಜಾಗೃತಿ ಮುಖ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ : ಸಮಾಜದ ಪರಿವರ್ತನೆ ಹಾಗೂ ಅಭ್ಯುದಯಕ್ಕಾಗಿ ಮಹಿಳಾ ಜಾಗೃತಿಯೊಂದೇ ಮಾರ್ಗವಾಗಿದೆ ಎಂದು ಆಶಾಕಿರಣ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮುತ್ತುರಾಜ್‌ ಮಾದರ ತಿಳಿಸಿದರು.ಸವಣೂರ ತಾಲ್ಲೂಕಿನ ಕಳಸೂರ ಗ್ರಾಮದಲ್ಲಿರಾಜ್ಯ  ಸಮಾಜ ಕಲ್ಯಾಣ ಸಲಹಾ ಮಂಡಳಿ ಹಾಗೂ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ ಮಹಿಳಾ ಜಾಗೃತಿ ಶಿಬಿರ’ ದಲ್ಲಿ ಪಾಲ್ಗೊಂಡ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಅವಶ್ಯಕತೆ ವಿವರಿಸಿದರು.ಶಿಕ್ಷಣದೊಂದಿಗೆ ವರದಕ್ಷಿಣೆ, ಬಾಲ್ಯವಿವಾಹ ಮೊದಲಾದ ಅನಿಷ್ಟಗಳನ್ನು ದೂರಮಾಡಿ. ದೂರದ ರಾಜ್ಯಗಳಿಗೆ ಮನೆಯ ಹೆಣ್ಣು ಮಕ್ಕಳ ವಿವಾಹ ಸಂಬಂಧ ಕಲ್ಪಿಸಬೇಡಿ.  ಮಹಿಳಾ ಸ್ವ ಸಹಾಯ ಸಂಘಟನೆ ಯನ್ನು ಉತ್ತಮ ಉದ್ದೇಶಗಳಿಗೆ ಬಳಸಿಕೊಳ್ಳಿ. ವೈಯಕ್ತಿಕ, ಪರಿಸರದ ಸ್ವಚ್ಛತೆ ಶೌಚಾಲಯದ ಬಳಕೆಗೆ ಆದ್ಯತೆ ನೀಡಿ. ದೌರ್ಜನ್ಯವನ್ನು ಸಹಿಸಿಕೊಳ್ಳದೆ ಅದರ ವಿರುದ್ಧ ಧ್ವನಿಯಾಗಿ. ನಿಮ್ಮ ಹಕ್ಕು ಭಾಧ್ಯತೆಗಳನ್ನು ಅರಿತುಕೊಂಡು ಆತ್ಮವಿಶ್ವಾಸ ಬೆಳೆಸಿಕೊಳ್ಳಿ ಎಂದು ಮುತ್ತುರಾಜ್ ಮಾದರ ಮಹಿಳೆಯರಿಗೆ ಸಲಹೆ ಮಾಡಿದರು.ಗ್ರಾಮದ ಶಾಲಾ ಆವರಣದಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಗ್ರಾ.ಪಂ ಅಧ್ಯಕ್ಷೆ ವಿಜಯಾ ಝಾಗಟಿ ಚಾಲನೆ ನೀಡಿದರು. ಮಹಿಳೆಯರ ಉನ್ನತಿಗಾಗಿ ಇಂತಹ ಶಿಬಿರಗಳು ಪ್ರಯೋಜನಕಾರಿ ಎಂದರು. ಅಧ್ಯಕ್ಷತೆಯನ್ನು ಗ್ರಾಮದ ಪ್ರಮುಖರಾದ ಶಿವಾಜಪ್ಪ ಪುಟ್ಟಣ್ಣನವರ್‌ ವಹಿಸಿಕೊಂಡಿದ್ದರು. ಸಂಘಟನೆಯ ಮೂಲಕ ಆರ್ಥಿಕಾಭಿವೃದ್ಧಿ ಸಾಧಿಸುವಂತೆ, ಸಮಾಜದ ಹಾಗೂ ಕುಟುಂಬದ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಅವರು ತಿಳಿಸಿದರು.ರಮೇಶ ಶಿಂಗಣ್ಣನವರ್, ಆನಂದ ಅಳ್ಳಳ್ಳಿ, ಅಡಿವೆಕ್ಕ ಕರಬಣ್ಣನವರ್, ಕಾಳಪ್ಪನವರ್ ಸೇರಿದಂತೆ ಗ್ರಾಮದ ಹಲವಾರು ಪ್ರಮುಖರು, ಮಹಿಳಾ ಸಂಘಟನೆಯ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಪಿ.ಎಸ್‌ ಹಕೀಂ ‘ ಮಹಿಳಾ ಜಾಗೃತಿ ’ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.  ಹೊನ್ನಮ್ಮ ಚಂದ್ರಾಪೂರ ಮಹಿಳಾ ಕಾನೂನುಗಳ ಬಗ್ಗೆ ವಿವರಣೆ ನೀಡಿದರು. ಗ್ರಾಪಂ  ಕಾರ್ಯದರ್ಶಿ ಈಶ್ವರಪ್ಪ ನಿರ್ವಹಿಸಿದರು. ಸಾಲಿ  ವಂದಿಸಿದರು.

ಪ್ರತಿಕ್ರಿಯಿಸಿ (+)