ಭಾನುವಾರ, ಜನವರಿ 19, 2020
20 °C

‘ಸಮವಿಚಾರಿ’ ಗುಂಪಿನೊಂದಿಗೆ ಬಿಜೆಪಿ ಅಧಿಕಾರ ಗಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಪ್ಪಾಣಿ: ಕಾಂಗ್ರೆಸ್‌ ಬೆಂಬಲಿತ ಮತ್ತು ಪಕ್ಷೇತರ ಸದಸ್ಯರೊಂದಿಗೆ ಕೇವಲ ಮೂರು ತಿಂಗಳು ಮಾತ್ರ ಸ್ಥಳೀಯ ನಗರಸಭೆ ಆಡಳಿತ ನಡೆಸಿದ ಬಿಜೆಪಿ, ವಿರೋಧಿ ಬಣದ ಸದಸ್ಯರೊಂದಿಗೆ ಕೈ ಮಿಲಾಯಿಸಿ ‘ಸಮವಿಚಾರಿ’ ಗುಂಪು ಸ್ಥಾಪಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.ಭಾನುವಾರ ಸಮೀಪದ ಅಪ್ಪಾಚಿವಾಡಿಯ ಶ್ರೀ ಹಾಲಸಿದ್ಧನಾಥ ಮಂದಿರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಎದುರು ಎಲ್ಲ ಸದಸ್ಯರು ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಐದು ವರ್ಷಗಳ ಕಾಲದವರೆಗೆ ಕೇವಲ ನಗರದ ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು ಎಂದು ಪ್ರಮಾಣ ಮಾಡಿದರು. ಈ ಮೂಲಕ ಹಲವು ದಿನಗಳಿಂದ ನಗರದಲ್ಲಿ ನಡೆದ ಚರ್ಚೆ ಮುಗಿದಂತಾಗಿದೆ.ಸೆ. 13ರಂದು ನಡೆದ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ ಬೆಂಬಲಿತ ಮತ್ತು ಪಕ್ಷೇತರ ಸದಸ್ಯರೊಂದಿಗೆ ಸದಸ್ಯ ರವಿ ಶಿಂಧೆ ಬಣದೊಂದಿಗೆ ಕೂಡಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಮಧ್ಯದಲ್ಲಿ ಬಿಜೆಪಿ ಪಕ್ಷ ಮತ್ತು ರವಿ ಶಿಂಧೆ ಬಣದ ನಡುವೆ ಬಿರುಕು ಮೂಡಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಭಾನುವಾರ ಬಿಜೆಪಿ ಪಕ್ಷವು ರವಿ ಶಿಂಧೆ ಬಣದ ಎಂಟು ಸದಸ್ಯರ ಕೈ ಬಿಟ್ಟು ವಿರೋಧಿ ಪಕ್ಷದ ಹನ್ನೊಂದು ಸದಸ್ಯರೊಂದಿಗೆ ಕೂಡಿ ಹೊಂದಾಣಿಕೆ ಏರ್ಪಡಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.ಅಪ್ಪಾಚಿವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಶಶಿಕಲಾ ಜೊಲ್ಲೆ, ‘ಸಮವಿಚಾರಿ’ ಗುಂಪಿನ ಎಲ್ಲ ಸದಸ್ಯರು ಒಂದಾಗಿ ನಗರದ ಅಭಿವೃದ್ಧಿಯ ಉದ್ದೇಶವಿಟ್ಟು ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸುವರು. ರವಿ ಶಿಂಧೆ ಬಣವು ಕಳೆದ ಮೂರು ತಿಂಗಳಿನಲ್ಲಿ ಅಭಿವೃದ್ಧಿಪರ ಕೆಲಸಗಳಿಗೆ ಬೆಂಬಲಿಸದೇ ಇದ್ದ ಹಿನ್ನೆಲೆಯಲ್ಲಿ ಈ ಬದಲಾವಣೆಗಳು ಉದ್ಭವಿಸಿವೆ. ಅನುದಾನದ ಹಣ ಹಾಗೆಯೇ ಬಿದ್ದಿದೆ. ಆದಾಗ್ಯೂ ರವಿ ಶಿಂಧೆ ಬಣ ತಮ್ಮದೇ ಆದ ಪ್ರವೃತ್ತಿಯಲ್ಲಿ ತೊಡಗಿದ್ದರು. ಇನ್ನು ಮುಂದೆ ‘ಸಮವಿಚಾರಿ’ ಗುಂಪಿನ ಎಲ್ಲ ಸದಸ್ಯರೊಂದಿಗೆ ನಗರದ ಪರಿವವರ್ತನೆ ಮಾಡಿ ಸೌಂದರೀಕರಣ ಮಾಡಲಾಗುವುದು’ ಎಂದರು.ಸದಸ್ಯ ದತ್ತಾತ್ರೇಯ ಜೋತ್ರೆ ಮಾತನಾಡಿ ‘ಸದಸ್ಯ ವಿಲಾಸ ಗಾಡಿವಡ್ಡರ ಏಕಾಧಿಪತಿಯಾಗಿ ಸ್ವೇಚ್ಛಾಡಳಿತ ನಡೆಸಿದ್ದರು. ಅವರು ಸ್ವಂತ ಗುಂಪಿನ ಮತ್ತು ಬ್ಲ್ಯಾಕ್‌ಮೇಲ್‌ ರಾಜಕಾರಣ ನಡೆಸುತ್ತ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತ ತಮ್ಮ ವಿಕಾಸ ಮಾತ್ರ ಸಾಧಿಸಿದ್ದಾರೆ’ ಎಂದು ಆಪಾದಿಸಿದರು.ಸದಸ್ಯ ಬಾಳಾಸಾಹೇಬ ದೇಸಾಯಿ ಸರಕಾರ ಮಾತನಾಡಿ ‘ಬಿಜೆಪಿ ಪಕ್ಷದ ಹಾಗೂ ಬೆಂಬಲಿತ 11 ಹಾಗೂ ಕಾಂಗ್ರೆಸ್‌ ಬೆಂಬಲಿತ ಹೀಗೆ 22 ಸದಸ್ಯರು ಸೇರಿ ಹಾಲಿ ಮತ್ತು ಮಾಜಿ ಶಾಸಕರ ನೇತೃತ್ವದಲ್ಲಿ ಏಕಮುಖದಿಂದ ಮತ್ತು ಸಹೃದಯದಿಂದ ಅಧಿಕಾರಾವಧಿ ಪೂರ್ಣಗೊಳಿಸಲಿದ್ದೇವೆ’ ಎಂದರು.ಸದಸ್ಯ ರಾಜ ಪಠಾಣ ಮಾತನಾಡಿ ‘ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಅವರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಪೂರ್ವದಲ್ಲಿ ಕಾಂಗ್ರೇಸ್‌ ಬೆಂಬಲಿತ ಎಲ್ಲ ಸದಸ್ಯರಿಗೆ ನಗರದ ಅಭಿವೃದ್ಧಿ ಪರವಾಗಿ ಯಾವುದೇ ವಿಚಾರ, ನಿರ್ಧಾರ ಕೈಕೊಳ್ಳಲು ಅನುಮತಿ ನೀಡಿದ್ದರು. ಅದರ ಹಿನ್ನೆಲೆಯಲ್ಲಿ ನಾವು ಬಿಜೆಪಿ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದೇವೆ’ ಎಂದರು.ನಗರಸಭೆ ಅಧ್ಯಕ್ಷೆ ಭಾರತಿ ಘೋರ್ಪಡೆ, ಉಪಾಧ್ಯಕ್ಷ ಇಮ್ತಿಯಾಜ್‌ ಖಾಜಿ, ಸ್ಥಾಯಿ ಸಮಿತಿ ಅಧ್ಯಕ್ಷ ದೀಪಕ ಮಾನೆ, ನಗರಸಭೆ ಸದಸ್ಯ ಸುನೀಲ ಪಾಟೀಲ, ಪ್ರವೀಣ ಭಾಟಲೆ, ನಮ್ರತಾ ಕಮತೆ ಮಾತನಾಡಿದರು.ಬಿಜೆಪಿ ಚಿಕ್ಕೋಡಿ ಘಟಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕ ಸುಭಾಷ ಜೋಶಿ, ಜಯವಂತ ಭಾಟಲೆ, ಪ್ರಣವ ಮಾನವಿ, ಆಕಾಶ ಶೆಟ್ಟಿ, ಡಾ. ನಂದಕಿಶೋರ ಕುಂಭಾರ, ಪವನ ಪಾಟೀಲ, ಯುವರಾಜ ಪೋಳ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)