ಭಾನುವಾರ, ಅಕ್ಟೋಬರ್ 2, 2022
28 °C

‘ಸೂಚ್ಯಂಕದಿಂದ ಅಭಿವೃದ್ದಿ ಅಳೆಯಲಾಗದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಾನವ ಅಭಿವೃದ್ದಿಯ ಸೂಚ್ಯಂಕದ ಮಾನದಂಡದಲ್ಲಿ ಇಡೀ ಸಮಾಜದ ಅಭಿವೃದ್ದಿಯನ್ನು ಅಳೆಯಲಾಗದು’ ಎಂದು  ಸೆಂಟರ್‌ ಫಾರ್ ಬಜೆಟ್‌ ಅಂಡ್‌ ಪಾಲಿಸಿ ಸ್ಟಡೀಸ್‌ನ  ಸಂಶೋಧನಾ ಸಲಹೆಗಾರ ಬಿ.ವಿ. ಮಧುಸೂದನ ಹೇಳಿದರು.ಅವರು ಸೆಂಟರ್‌ ಫಾರ್ ಬಜೆಟ್‌ ಅಂಡ್‌ ಪಾಲಿಸಿ ಸ್ಟಡೀಸ್‌ ಬುಧವಾರ ಆಯೋಜಿಸಿದ್ದ ,‘ರಾಜಕೀಯ ಹಸ್ತಕ್ಷೇಪದ ಮೂಲಕ ಸಾಮಾಜಿಕ ಅಭಿವೃದ್ದಿ’ ವಿಚಾರಸಂಕಿರಣದಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ  ಕುರಿತು ಮಾತನಾಡಿದರು.‘ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯದಲ್ಲಿಯೇ 3ನೇ ಸ್ಥಾನದಲ್ಲಿದೆ.   ಆದರೆ, ಆರೋಗ್ಯದಲ್ಲಿ 11 ಮತ್ತು ಶಿಕ್ಷಣದಲ್ಲಿ 24ನೇ ಸ್ಥಾನದಲ್ಲಿ.  ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಕಾರಣ ಆದಾಯ ಗಳಿಕೆಗೆ ಹೆಚ್ಚಿನ ಅವಕಾಶ ಇದೆ. ಹಾಗಾಗಿ ಈ ಸೂಚ್ಯಂಕದ ಆಧಾರದಲ್ಲಿ ಯೋಜನೆಗಳನ್ನು ರೂಪಿಸದೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಿಂದೆ ಉಳಿಯಲು ಇರುವ ಕಾರಣಗಳನ್ನು   ಪತ್ತೆ ಮಾಡಿ ಯೋಜನೆಗಳನ್ನು ರೂಪಿಸಬೇಕು’  ಎಂದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಸಮಗ್ರವಾಗಿ ನೋಡಿದರೆ ಬೆಂಗಳೂರು ನಗರದಲ್ಲಿ ಆಗುವ ಎಲ್ಲ ಬದಲಾವಣೆಯ ಪ್ರಭಾವಕ್ಕೂ ಒಳಗಾಗಿದೆ. ವಿಮಾನ ನಿಲ್ದಾಣ ಸ್ಥಾಪನೆ, ವಿಶೇಷ ಆರ್ಥಿಕ ವಲಯ, ಕಂಪೆನಿಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿಯಾಗಿದೆ. ಆದರೆ, ಜೀವವೈವಿಧ್ಯ, ಸಾಮಾಜಿಕ ಅರಣ್ಯ ನಾಶವಾಗಿದೆ. ಸುತ್ತಲಿನ ರೈತರಿಗೆ  ಪಶುಸಂಗೋಪನೆಗೆ ತೊಂದರೆಯಾಗಿದೆ. 2005–06 ಮತ್ತು 2010–11ರ ಅಂಕಿಅಂಶದ ಪ್ರಕಾರ  ಪರಿಶಿಷ್ಟರು ಹೆಚ್ಚು ಆಸ್ತಿ ಕಳೆದುಕೊಂಡಿದ್ದಾರೆ. ಚಿಕ್ಕಪುಟ್ಟ ಜಮೀನುಗಳೆಲ್ಲ ಮಾರಾಟವಾಗಿವೆ’ ಎಂದು ವಿವರಿಸಿದರು.ಒಟ್ಟು ಅಭಿವೃದ್ದಿಯನ್ನು ಆಹಾರ ಭದ್ರತೆ, ಮಕ್ಕಳ ಅಭಿವೃದ್ದಿ, ಆರೋಗ್ಯ,  ನಗರಾಭಿವೃದ್ದಿ, ಲಿಂಗಾಧಾರಿತ ಅಭಿವೃದ್ದಿಯಿಂದ ಅಳೆಯಲಾಗುತ್ತದೆ. ಆದರೆ, ಸೂಚ್ಯಂಕವೇ ಅಂತಿಮ ಅಲ್ಲ. ನೈಜ ಸ್ಥಿತಿ  ಅಧ್ಯಯನ ಮಾಡದ ಹೊರತು ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಲು ಸಾಧ್ಯವಿಲ್ಲ ಎಂದರು.

ವಿಚಾರಸಂಕಿರಣವನ್ನು ಕೃಷಿ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ‘ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗದಿರಲು ಜಿಲ್ಲಾಮಟ್ಟದ ಅಧಿಕಾರಿಗಳ ನಿರಾಸಕ್ತಿಯೇ ಕಾರಣ’ ಎಂದರು.ಅಧಿಕಾರಿಗಳು ಸರ್ಕಾರದ ಯೋಜನೆಗಳ ಉದ್ದೇಶ ಅರ್ಥ ಮಾಡಿಕೊಂಡು ಗ್ರಾಮಮಟ್ಟದಲ್ಲಿ ಜನರಿಗೆ ತಲುಪಿಸಲು ವಿಫಲರಾಗುತ್ತಿದ್ದಾರೆ. ರೈತರಿಗೆ ಸಬ್ಸಿಡಿ ನೀಡುವುದರ ಬಗ್ಗೆಯೇ ಹೆಚ್ಚು ಗಮನ ಹರಿಸಲಾಗಿದೆ. ಕೃಷಿ ತಂತ್ರಜ್ಞಾನದಲ್ಲಿ   ಹಿಂದುಳಿದಿದ್ದೇವೆ ಎಂದರು. ಸಾಮಾಜಿಕ ಅರಣ್ಯ ಅಭಿವೃದ್ದಿ ಯೋಜನೆಗೆ ಕೇವಲ ₹29 ಲಕ್ಷ ಅನುದಾನ ನೀಡಲಾಗಿದೆ. ಆದರೆ, ಕಚೇರಿ ನಿರ್ವಹಣೆ, ಸಿಬ್ಬಂದಿ ವೇತನ, ಇತರ ಖರ್ಚುಗಳಿಗೆ ₹1.25 ಕೋಟಿ ಬೇಕಾಗುತ್ತದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.