ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಲಕ್ಷ ಪರಿಹಾರಕ್ಕೆ ಆಗ್ರಹ

Last Updated 18 ಜನವರಿ 2011, 10:25 IST
ಅಕ್ಷರ ಗಾತ್ರ

ಗೋಕಾಕ: ಕೇರಳದ ಶಬರಿಮಲೆಯಲ್ಲಿ ನಡೆದ ದುರಂತದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ನಗರದ ಅಯ್ಯಪ್ಪ ಭಕ್ತರಿಗೆ ಕುಟುಂಬದವರು, ಬಂಧು ಮಿತ್ರರ ಜೊತೆಗೆ ಸಾರ್ವಜನಿಕರೂ ಅಶ್ರುತರ್ಪಣ ಮಾಡಿದರು.

ಮೃತರ ದೇಹಗಳು ನಗರಕ್ಕೆ ಆಗಮಿಸುತ್ತಿದ್ದಂತೆ ರೋಧನ ಇಡೀ ವಾತಾವರಣ ದುಃಖತಪ್ತವಾಗಿತ್ತು. ಸಾವಿರಾರು ಜನ ಸ್ಥಳದಲ್ಲಿ ಭಕ್ತರ ಅಂತಿಮ ದರ್ಶನ ಪಡೆದರು. ರಾತ್ರಿಯಿಡೀ ಜಾಗರಣೆ ನಡೆಯಿತು. ಎಲ್ಲರೂ ಕಣ್ಣೀರಿಟ್ಟು ಶೋಕ ವ್ಯಕ್ತ ಪಡಿಸಿದರು.ಅಯ್ಯಪ್ಪ ಭಕ್ತರ ಕುಟುಂಬದ ಸದಸ್ಯರಿಗೆ ಜನಪ್ರತಿನಿಧಿಗಳು, ಗಣ್ಯರು ಸಾಂತ್ವನ ಹೇಳಿದರು. ಮೃತರ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನೂ ನೀಡಿದರು.

ಮನವಿ: ಶಬರಿಮಲೆ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಪ್ರತಿಯೊಬ್ಬ ಮೃತ ವ್ಯಕ್ತಿಯ ಕುಟುಂಬಕ್ಕೆ ತಲಾ 10 ಲಕ್ಷ ರೂ. ಆರ್ಥಿಕ ನೆರವು ನೀಡಿ, ಸರ್ಕಾರಿ ನೌಕರಿ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುವಂತೆ ಇಲ್ಲಿಯ ಅಯ್ಯಪ್ಪಸ್ವಾಮಿ ಟ್ರಸ್ಟ್ ಸಮಿತಿ ಆಗ್ರಹಿಸಿದೆ.

ಶವಗಳು ನಗರವನ್ನು ತಲುಪುತ್ತಿದ್ದಂತೆ ನೆರೆದಿದ್ದ ಸಾವಿರಾರು ಜನರ ಆಕ್ರಂದನಗಳ ನಡುವೆ ಶಾಸಕ ರಮೇಶ ಜಾರಕಿಹೊಳಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜಾರಿ, ನಗರಾಧ್ಯಕ್ಷೆ ಸಾವಿತ್ರಿ ಕಂಬಳಿ, ಮಾಜಿ ನಗರಾಧ್ಯಕ್ಷ ನಜೀರಶೇಖ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಮತ್ತಿತರರ ಗಣ್ಯರು ಸಮಿತಿ ಪರವಾಗಿ ತಹಸೀಲ್ದಾರ ಪ್ರೀತಮ್ ನಸಲಾಪೂರ  ಅವರಿಗೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಕಲಾಪದಿಂದ ಹೊರಗೆ: ಕೇರಳದ ಶಬರಿಮಲೆ ದುರಂತದಲ್ಲಿ ಮೃತಪಟ್ಟ ತಾಲ್ಲೂಕಿನ ಏಳು ಜನ ಅಯ್ಯಪ್ಪಸ್ವಾಮಿ ಭಕ್ತರ ಸ್ಮರಣಾರ್ಥ ಮತ್ತು ಇತ್ತೀಚೆಗೆ ನಿಧನರಾದ ಚಿಕ್ಕೋಡಿಯ ಇಬ್ಬರು ವಕೀಲರ ನಿಧನ ಹಿನ್ನೆಲೆಯಲ್ಲಿ ವಕೀಲರ ಸಂಘದ ಸದಸ್ಯರು ಸೋಮವಾರ ಶೋಕಾಚರಣೆ ನಡೆಸಿ ನ್ಯಾಯಾಲಯದ ಕಾರ್ಯ ಕಲಾಪಗಳಿಂದ ಹೊರಗುಳಿದರು.

ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ದೇಮಶೆಟ್ಟಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಸೇರಿದ ಸದಸ್ಯರು, ದುರಂತದಲ್ಲಿ ಮೃತಪಟ್ಟವರು ಅಯ್ಯಪ್ಪ ಸ್ವಾಮಿ ಭಕ್ತರು ಹಾಗೂ ಹಿರಿಯ ವಕೀಲರಾದ ಪಿ.ಎ. ಶೇಡಬಾಳ ಮತ್ತು ಎ.ಎನ್. ನಾಡಗೌಡ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT