ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಪ್ರಕರಣ ದಾಖಲು...

ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಕ್ರಮ
Last Updated 17 ಏಪ್ರಿಲ್ 2013, 7:25 IST
ಅಕ್ಷರ ಗಾತ್ರ

ಶಿವಮೊಗ್ಗ: ಚುನಾವಣಾ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 100 ಪ್ರಕರಣ ದಾಖಲಾಗಿದೆ ಎಂದು ಚುನಾವಣಾಧಿಕಾರಿ ವಿಪುಲ್ ಬನ್ಸಾಲ್ ಹೇಳಿದರು.

ಇದರಲ್ಲಿ 17 ದೂರುಗಳು ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದು, ಉಳಿದ 83 ಪ್ರಕರಣಗಳು ಅಬಕಾರಿ ಕಾಯ್ದೆ ಅಡಿ ದಾಖಲಿಸಲಾಗಿದೆ. ಅಕ್ರಮ ಮದ್ಯ ಮಾರಾಟ, ಸಾಗಣೆ, ದಾಸ್ತಾನು, ಸಾರ್ವಜನಿಕ ಸ್ವತ್ತು ವಿರೂಪ, ವಾಹನಗಳ ದುರ್ಬಳಕೆ, ಮತದಾರರಿಗೆ ಆಮಿಷ ಒಡ್ಡುವುದು ಸೇರಿದಂತೆ ಇತರ ನೀತಿಸಂಹಿತೆ ಉಲ್ಲಂಘಿಸಿದ ಪ್ರಕರಣಗಳ ಅಡಿ ಈ ದೂರುಗಳನ್ನು ದಾಖಲಿಸಲಾಗಿದೆ ಎಂದು ಅವರು ಮಂಗಳವಾರ ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಅಕ್ರಮ ಮದ್ಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಹಾಗೂ ಅಬಕಾರಿ ಇಲಾಖೆಯಿಂದ ಒಟ್ಟು 350 ದಾಳಿಗಳು ನಡೆದಿವೆ. ಇದರಲ್ಲಿ 83 ಪ್ರಕರಣ ದಾಖಲಿಸಲಾಗಿದ್ದು, 69 ಜನರನ್ನು ಬಂಧಿಸಲಾಗಿದೆ. 1,613 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 73 ಬಿಯರ್ ಬಾಟಲಿ, 13 ಲೀಟರ್ ಕಳ್ಳಭಟ್ಟಿ, 130 ಲೀಟರ್ ರಾಸಾಯನಿಕಯುಕ್ತ ಮದ್ಯ ಕೂಡ ಸೇರಿದೆ. ಇದರ ಮೌಲ್ಯ ರೂ 5.64 ಲಕ್ಷ ಎಂದರು.

ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗುವಂತಹ ಪ್ರಕರಣಗಳ ಕುರಿತಂತೆ ಮಾಹಿತಿ ಲಭ್ಯವಾದರೆ ಕೂಡಲೇ ಸಾರ್ವಜನಿಕರು ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಬೇಕು. ತಕ್ಷಣವೇ ನೀತಿ-ಸಂಹಿತೆ ಜಾರಿ ತಂಡ ಘಟನಾ ಸ್ಥಳಕ್ಕೆ ತೆರಳಿ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.

ಚುನಾವಣೆ ದಿನ ಕಾರ್ಮಿಕರಿಗೆ ವೇತನ ಸಹಿತ ರಜೆ
ಶಿವಮೊಗ್ಗ: ಕೇಂದ್ರ ಚುನಾವಣಾ ಆಯೋಗ, ಮೇ 5ರಂದು ನಡೆಸಲಿರುವ ವಿಧಾನಸಭಾ ಚುನಾವಣೆ ದಿನದಂದು ಮತ ಚಲಾಯಿಸಲು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಕಾರ್ಮಿಕ ಆಯುಕ್ತ ಎನ್. ಜಯರಾಮ್ ಕಾರ್ಖಾನೆ ಮಾಲೀಕರಿಗೆ ಸೂಚಿಸಿದ್ದಾರೆ.

ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕರ್ನಾಟಕ ಔದ್ಯಮಿಕ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯ್ದೆ, 1963ರ ಕಲಂ 3 (ಎ)ರ ಅನ್ವಯ ರಜೆ ನೀಡುವಂತೆ ಅವರು ಸೂಚಿಸಿದ್ದಾರೆ.

ದಾಖಲೆಗಳಿಲ್ಲದ ಲಕ್ಷಾಂತರ ರೂಪಾಯಿ ವಶ
ಕಾರ್‌ವೊಂದರಲ್ಲಿ ಪೂರಕ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಸೊರಬ ತಾಲ್ಲೂಕಿನ ಆನವಟ್ಟಿ ಬಳಿಯ ಅಗಸವಳ್ಳಿ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ನಡೆದಿದೆ.

ಶ್ರೀಧರ್ ಮೂರ್ತಿ ಎಂಬುವವರಿಗೆ ಸೇರಿದ ಕಾರ್‌ನಲ್ಲಿದ್ದ ದಾಖಲೆ ರಹಿತ ರೂ 5ಲಕ್ಷ ಹಣ ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT