ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

135 ನಿಮಿಷದಲ್ಲಿ 105 ಮಿ.ಮೀ ಮಳೆ!

Last Updated 4 ಆಗಸ್ಟ್ 2013, 6:28 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನಲ್ಲಿ ಗುರುವಾರ 135 ನಿಮಿಷಗಳ ಅವಧಿಯಲ್ಲಿ ಸುರಿದ ಮಳೆಯ ಪ್ರಮಾಣ ಬರೋಬ್ಬರಿ 105 ಮಿಲಿ ಮೀಟರ್!

ಅದೇ ದಿನ 24 ಗಂಟೆಗಳ ಅವದಿಯಲ್ಲಿ 200 ಮಿ.ಮೀ ದಾಖಲೆಯ ಮಳೆ ಸುರಿದಿದೆ. ಆದರೆ ಎರಡು ಗಂಟೆಗಳ ಕಾಲ ಸುರಿದ ಮಳೆ ಜನತೆಯಲ್ಲಿ ಭಯ ಹುಟ್ಟಿಸಿದೆ.

ಕೃಷಿ ಇಲಾಖೆಯಲ್ಲಿ ಸುಮಾರು 30 ವರ್ಷಗಳ ಮಳೆಯ ದಾಖಲೆಗಳಿದ್ದು, 135 ನಿಮಿಷಗಳ ಅವದಿಯಲ್ಲಿ 105 ಮಿ.ಮೀ. ಮಳೆ ಇದೇ ಮೊದಲ ಬಾರಿಗೆ ಸುರಿದಿದೆ. ಗುರುವಾರ ಮಧ್ಯಾಹ್ನ ಜಂಬರಡಿ ಸಮೀಪದ ಸಕಲೇಶಪುರ- ಮೂಡಿಗೆರೆ ಮುಖ್ಯರಸ್ತೆಯ ಮೇಲೆ ನೀರು ಹರಿದಿದೆ. 60 ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಸ್ತೆಯ ಮೇಲೆ ನೀರು ಬಂದಿದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಜಿ.ಎಚ್. ಯೇಗೇಶ್.

`ಬುಧವಾರದಿಂದ ಶನಿವಾರದ ವರೆಗೆ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ಇತ್ತು. ಆದರೆ, ಗುರುವಾರ ಎರಡು ಗಂಟೆಗಳ ಅವಧಿಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಮೇಘ ಸ್ಫೋಟ ಆಗಿದೆ ಎಂಬ ಬಗ್ಗೆ ಈವರೆಗೂ ಹವಾಮಾನ ಇಲಾಖೆಯಿಂದ ಮಾಹಿತಿ ಬಂದಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ಮಾಡಿ ಸ್ಪಷ್ಟಪಡಿಸಲಾಗುವುದು' ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದರು.

ಮಲೆನಾಡಿನ ಈ ತಾಲ್ಲೂಕಿನಲ್ಲಿ ಸಹಜವಾಗಿ ಪಶ್ಚಿಮಘಟ್ಟದ ಅಂಚಿನಲ್ಲಿರುವ ಬಿಸಿಲೆ, ಕಾಗಿನಹರೆ, ಅತ್ತಿಹಳ್ಳಿ, ಹೊಂಗಡಹಳ್ಳ, ಮಾರನಹಳ್ಳಿ, ಹೆಗ್ಗದ್ದೆ, ಕಾಡಮನೆ, ದೇವಲಕೆರೆ, ಅಗನಿ ಭಾಗದಲ್ಲಿ ಸರಾಸರಿ 200 ಮಿ.ಮೀ. ಮಳೆಯಾಗುತ್ತದೆ. ಇಲ್ಲಿಂದ 50 ಕಿ.ಮೀ. ದೂರದಲ್ಲಿರುವ ಸಕಲೇಶಪುರ ಸುತ್ತಮುತ್ತ ಸರಾಸರಿ 80ಮಿ.ಮೀ. ಮಳೆಯಾಗುತ್ತದೆ.

ಆದರೆ ಗುರುವಾರ ಬೆಳಿಗ್ಗೆ 6 ರಿಂದ ಶುಕ್ರವಾರ ಬೆಳಿಗ್ಗೆ 6ರ ವರೆಗೆ ಬೆಳಗೋಡು ಹೋಬಳಿ ವ್ಯಾಪ್ತಿಯ ಈಶ್ವರಳ್ಳಿ, ಮೆಣಸುಮಕ್ಕಿ ಸುತ್ತಮುತ್ತಲ ಪ್ರದೇಶದಲ್ಲಿ 260 ಮಿ.ಮೀ. ಮಳೆಯಾಗಿದೆ. ಅದೇ ಸಮಯದಲ್ಲಿ ಪಶ್ಚಿಮಘಟ್ಟದ ಅಂಚಿನ ಗ್ರಾಮಗಳಲ್ಲಿ 110 ಮಿ.ಮೀ. ಮಳೆಯಾಗಿದೆ. ಯಾವ ವರ್ಷವೂ ಸುರಿಯದೇ ಇದ್ದ ಈ ಪ್ರಮಾಣದ ಮಳೆ ಕೆಲವೇ ಗಂಟೆಗಳಲ್ಲಿ ಸುರಿದು ಅಪಾರ ಬೆಳೆ, ಆಸ್ತಿ ಹಾನಿ ಮಾಡಿದೆ. ಗುರುವಾರಕ್ಕೂ ಮುನ್ನ ಹೇಮಾವತಿ ನದಿಗೆ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಗುರುವಾರ ಮಧ್ಯಾಹ್ನ ದಿಂದ ಶುಕ್ರವಾರ ಮುಂಜಾನೆವರೆಗೆ 55 ಸಾವಿರ ಕ್ಯೂಸೆಕ್ ನೀರು ಬಂದಿದೆ. ಇದರಿಂದ ಉಂಟಾಗಬಹುದಾದ ಅಪಾಯ ತಪ್ಪಿಸಲು ಗೋರೂರಿನಲ್ಲಿ ಹೇಮಾವತಿ ಜಲಾಶಯ ದಿಂದ ಶುಕ್ರವಾರ 52 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.

24 ಗಂಟೆಗಳ ಕಾಲ ಸುರಿದ ಮಳೆಯ ಅಬ್ಬರಕ್ಕೆ ತಾಲ್ಲೂಕಿನಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬೆಳೆ, ರಸ್ತೆ, ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT