ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನದಲ್ಲಿ ಕಡತ ವಿಲೇವಾರಿಗೆ ಸೂಚನೆ

Last Updated 5 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ಯಾವುದೇ ಇಲಾಖೆಯ ಕಡತವನ್ನು 15 ದಿನಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಶುಕ್ರವಾರ ಇಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸೌಧವರೆಗೆ ಇದು ಅನ್ವಯವಾಗುತ್ತದೆ. ಕೆಳ ಹಂತದ ಅಧಿಕಾರಿಗಳು ಸಹ ಇದನ್ನು ಪಾಲಿಸಬೇಕು ಎಂದು ಸೂಚಿಸಿದರು.

 `ಪ್ರಚಾರಕ್ಕಾಗಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ಹಾಲಿ ಇರುವ ಹಿಂದಿನ ಸರ್ಕಾರದ ಯೋಜನೆಗಳನ್ನೇ ಮುಂದುವರಿಸಿಕೊಂಡು ಹೋಗುತ್ತೇನೆ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹೊಸ ಯೋಜನೆಗಳನ್ನು ಪ್ರಕಟಿಸಲಾಗುವುದು. ಯೋಜನೆಗಳು ನಿಂತ ನೀರಾಗಲು ಅವಕಾಶ ನೀಡುವುದಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ಲಿಷ್ಟಕರವಾದ ಕಾನೂನುಗಳನ್ನು ಸರಳಗೊಳಿಸಲಾಗುವುದು~ ಎಂದು ಭರವಸೆ ನೀಡಿದರು.

`ಕೆಲವು ಇಲಾಖೆಗಳಲ್ಲಿ ನಿಯಮಗಳು ಕ್ಲಿಷ್ಟಕರವಾಗಿದ್ದು ಅವುಗಳನ್ನು ಸರಳೀಕರಣ ಮಾಡುವುದಕ್ಕಾಗಿ ಸಮಿತಿಗಳನ್ನು ರಚಿಸಲಾಗಿದೆ. ಒಂದು ತಿಂಗಳಲ್ಲಿ ಮುಖ್ಯಕಾರ್ಯದರ್ಶಿಗೆ ವರದಿ ನೀಡಬೇಕು. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಸೂಕ್ತ ತಿದ್ದುಪಡಿಗಳನ್ನು ತರಲಾಗುವುದು. ಕಾನೂನು ತೊಡಕಿನ ನೆಪ ಹೇಳದೆ, ಯೋಜನೆಗಳನ್ನು ಹೇಗೆ ಅನುಷ್ಠಾನಗೊಳಿಸುತ್ತೀರಿ ಎಂಬುದು ಮುಖ್ಯ.
 
ಒಟ್ಟಾರೆ ಜನರ ಸಮಸ್ಯೆ ಬಗೆಹರಿಯಬೇಕು ಅಷ್ಟೇ~ ಎಂದು ಸೂಚ್ಯವಾಗಿ ಹೇಳಿದರು. ಕಲ್ಯಾಣ ಯೋಜನೆಗಳ ಪ್ರಯೋಜನ ಜನರಿಗೆ ತಲುಪಿದೆಯೇ ಎಂಬುದನ್ನು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಖಾತ್ರಿ ಮಾಡಿಕೊಳ್ಳಬೇಕು. ಮಾಧ್ಯಮಗಳಲ್ಲಿ ಟೀಕೆಗಳು ಬಂದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ, ಮೊದಲೇ ಗಮನಹರಿಸುವುದು ಸೂಕ್ತ ಎಂದು ಸಲಹೆ ಮಾಡಿದರು.

`ರಸ್ತೆ, ನೀರು, ವಿದ್ಯುತ್, ವಸತಿ, ನೈರ್ಮಲ್ಯ ಇತ್ಯಾದಿಗಳಿಗೆ ಆದ್ಯತೆ ನೀಡಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಯೋಜನೆಗಳ ಲಾಭ ಕೆಳಹಂತದವರೆಗೂ ತಲುಪಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸದೃಢ ಮತ್ತು ಸಶಕ್ತ ರಾಜ್ಯ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇನೆ. ಸಚಿವರು ಮತ್ತು ಅಧಿಕಾರಿಗಳು ಕ್ರಿಕೆಟ್ ತಂಡದ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು. ದಕ್ಷತೆ, ಕ್ರಿಯಾಶೀಲತೆ ಮತ್ತು ಪ್ರಾಮಾಣಿಕತೆಗೆ ಸರ್ಕಾರದಲ್ಲಿ ಮನ್ನಣೆ ಸಿಗಲಿದೆ~ ಎಂದರು.

`ಮುಖ್ಯಮಂತ್ರಿ ಸ್ಥಾನ ದೇವರು ಕೊಟ್ಟ ಅವಕಾಶವಾಗಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ. ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ರಾಜಕೀಯ ನಾಯಕತ್ವಕ್ಕೆ ಅಧಿಕಾರಿಗಳ ಸಹಮತ ಅತ್ಯಗತ್ಯ. ಪ್ರೀತಿ, ವಿಶ್ವಾಸ, ನಂಬಿಕೆ ಉಳಿಸಿಕೊಂಡರೆ ಮಾತ್ರ ನಮ್ಮ ಅಪೇಕ್ಷೆ ಈಡೇರುತ್ತದೆ. ಸಚಿವರು ಮತ್ತು ಅಧಿಕಾರಿಗಳ ನಡುವೆ ಸಮನ್ವಯ ಇದ್ದಾಗ ಮಾತ್ರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ~ ಎಂದರು.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಾದ ಕೆ.ಜೈರಾಜ್, ವತ್ಸಲಾ ವತ್ಸ, ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯ, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇನ್ನೊಂದು ವಾರದಲ್ಲಿ ಸಂಪುಟ ವಿಸ್ತರಣೆ

`ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇರುವ ಗೊಂದಲ, ಭಿನ್ನಾಭಿಪ್ರಾಯಗಳು ನಿವಾರಣೆಯಾಗಲಿವೆ. ಎಲ್ಲವನ್ನೂ ನಿಭಾಯಿಸುವ ಆತ್ಮವಿಶ್ವಾಸವಿದೆ. ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ರಾಜ್ಯದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡುತ್ತೇವೆ~ ಎಂದು ಸದಾನಂದ ಗೌಡ ಭರವಸೆ ನೀಡಿದರು.
 

ವಾರದಲ್ಲಿ ಎರಡು ದಿನ ಮಾತ್ರ ಪ್ರವಾಸ

`ವಾರದಲ್ಲಿ ಎರಡು ದಿನ ಮಾತ್ರ ಪ್ರವಾಸ ಮಾಡುತ್ತೇನೆ. 3-4 ದಿನ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುತ್ತೇನೆ. ಒಂದು ದಿನ ಕುಟುಂಬದವರೊಂದಿಗೆ ಕಾಲ ಕಳೆಯುತ್ತೇನೆ. ಸಮಯ ಪಾಲನೆಗೆ ಆದ್ಯತೆ ನೀಡುತ್ತೇನೆ. ಯಾವ ಸಮಯಕ್ಕೆ ಏನು ಮಾಡಬೇಕು ಎಂದು ನನ್ನದೇ ಆದ ಚಾರ್ಟ್ ಸಿದ್ಧಪಡಿಸಿಕೊಂಡು ಅದಕ್ಕನುಗುಣವಾಗಿ ನಡೆಯುತ್ತೇನೆ~ ಎಂಬುದಾಗಿ ಸದಾನಂದ ಗೌಡ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT