ಮಂಗಳವಾರ, ಮೇ 24, 2022
31 °C

18ರಂದು ದೆಹಲಿಯಲ್ಲಿ ಕೃಷಿ ನೀತಿ ವಿರುದ್ಧ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  `ರೈತರನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಅ.18ರಂದು ನವದೆಹಲಿಯಲ್ಲಿ ದೇಶದಾದ್ಯಂತ 10 ಲಕ್ಷ ರೈತರೊಂದಿಗೆ ಜಾಥಾ ನಡೆಸಲಾಗುವುದು~ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಇಲ್ಲಿ ತಿಳಿಸಿದರು.

`ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೃಷಿ ನೀತಿಯನ್ನು ಇದುವರೆಗೆ ಜಾರಿ ಮಾಡಿಲ್ಲ. ಆರ್ಥಿಕ ತಜ್ಞರಾದ ಪ್ರಧಾನಿ ಮನಮೋಹನ ಸಿಂಗ್ ಅವರು ರೈತರ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ~ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

`ಕಬ್ಬಿನ ದರ ನಿಗದಿ ಮಾಡುವ ಸಲುವಾಗಿ ಮುಖ್ಯಮಂತ್ರಿ ಸದಾನಂದಗೌಡರು ಖಾಸಗಿ ಸಕ್ಕರೆ ಕಾರ್ಖಾನೆ ಮಾಲೀಕರ, ರೈತ ಮುಖಂಡರ ಸಭೆಯನ್ನು ಅ.14 ರಂದು ಬೆಂಗಳೂರಿನಲ್ಲಿ ಕರೆದಿದ್ದಾರೆ. ಸಭೆಯಲ್ಲಿ ಕಬ್ಬಿನ ದರ ನಿಗದಿ ಬಗ್ಗೆ ಚರ್ಚೆ ಮಾಡುವ ಜೊತೆಗೆ ಅರಿಶಿನ, ತಂಬಾಕು ಹಾಗೂ ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚಿಸಬೇಕು. ಮುಖ್ಯಮಂತ್ರಿ ಸಭೆ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ 50 ಸಾವಿರ ರೈತರೊಡಗೂಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು~ ಎಂದು ಎಚ್ಚರಿಕೆ ನೀಡಿದರು.

`ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ದರವನ್ನು ಈಗಾಗಲೇ ನಿಗದಿ ಮಾಡಲಾಗಿದೆ. ಅದರಂತೆ ಖಾಸಗಿ ಸಕ್ಕರೆ ಕಾರ್ಖಾನೆಗಳಲ್ಲೂ ಕಬ್ಬಿನ ದರ ನಿಗದಿ ಮಾಡಬೇಕು. ವಿದ್ಯುತ್ ಅಭಾವ ತಲೆದೋರುವಂತೆ ಮಾಡಿ ವಿದ್ಯುತ್ ಖರೀದಿ ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಹಣ ಕೊಟ್ಟು ವಿದ್ಯುತ್ ಖರೀದಿ ಮಾಡುವ ಪ್ರಮೇಯ ಏನಿತ್ತು?~ ಎಂದು ಪ್ರಶ್ನಿಸಿದ ಅವರು `ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ 8-10 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು~ ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಬಡಗಲಪುರ ನಾಗೇಂದ್ರ, ಹೊಸಕೋಟೆ ಬಸವರಾಜು, ಎಚ್.ಸಿ.ಲೋಕೇಶ್, ವಸಂತಕುಮಾರ್, ಶಿವನಾಗು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.