ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಕಡೆ ಸಿಪಿಎಂ ಸ್ಪರ್ಧೆ

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿಪಿಎಂ ನಿರ್ಧರಿಸಿದ್ದು, ಅಭ್ಯರ್ಥಿಗಳ ಹೆಸರನ್ನೂ ಪ್ರಕಟಿಸಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್, `ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಬಳ್ಳಾರಿ, ಕೊಪ್ಪಳ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಪಕ್ಷ, ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ' ಎಂದು ತಿಳಿಸಿದರು.

ಸಿಪಿಎಂ ಇದೇ ಮೊದಲ ಬಾರಿಗೆ 16 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಹಿಂದೆ ಹತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ದಾಖಲೆ ಇದೆ. ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರಾದ ಸೀತಾರಾಂ ಯೆಚೂರಿ ಮತ್ತು ಬೃಂದಾ ಕಾರಟ್ ಅವರು  ಅಭ್ಯರ್ಥಿಗಳ ಪರ ಮತ ಯಾಚಿಸಲು ಬರುತ್ತಾರೆ. ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ನೆರೆಯ ರಾಜ್ಯಗಳ ಸಿಪಿಎಂ ನಾಯಕರೂ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದರು.

ಬಿಜೆಪಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕರ್ನಾಟಕದ ಆಡಳಿತ ವ್ಯವಸ್ಥೆಯನ್ನು ಹಾಳುಗೆಡವಿದೆ. ಕೇಂದ್ರದ ಯುಪಿಎ ಸರ್ಕಾರ ಕೂಡ ಜನಹಿತಕ್ಕೆ ಬಲವಾದ ಕೊಡಲಿ ಪೆಟ್ಟು ನೀಡಿದೆ. ಭ್ರಷ್ಟಾಚಾರ ಮತ್ತು ದುರಾಡಳಿತದ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡೂ ಪಕ್ಷಗಳನ್ನು ತಿರಸ್ಕರಿಸುವಂತೆ ಮತದಾರರಲ್ಲಿ ಸಿಪಿಎಂ ಮನವಿ ಮಾಡಲಿದೆ ಎಂದು ತಿಳಿಸಿದರು.

`ಕೇಂದ್ರ ಸರ್ಕಾರ ಭಾಗಿಯಾಗಿರುವ ಕೃಷ್ಣಾ-ಗೋದಾವರಿ ಕಣಿವೆ ಅನಿಲ ಯೋಜನೆ ಭ್ರಷ್ಟಾಚಾರದ ಬಗ್ಗೆ ಮಹಾಲೇಖಪಾಲರ ವರದಿ ಬಹಿರಂಗ ಆಗದಂತೆ ಕಾಂಗ್ರೆಸ್ ನಾಯಕರು ತಡೆದಿದ್ದಾರೆ. ಈಗ ಯುರೋಪಿಯನ್ ಒಕ್ಕೂಟದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸರ್ಕಾರ ತೆರೆಮರೆಯ ಸಿದ್ಧತೆ ನಡೆಸಿದೆ. ಇದರಿಂದ ರೈತರು ಮತ್ತು ಎಂಜಿನಿಯರಿಂಗ್ ಉದ್ಯಮದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಎಲ್ಲವನ್ನೂ ಜನರ ಮುಂದಿಡುತ್ತೇವೆ' ಎಂದರು.

ಜೆಡಿಎಸ್ ಜೊತೆ ಮೈತ್ರಿ ಇಲ್ಲ:
`ಹಿಂದಿನ ಕೆಲವು ಚುನಾವಣೆಗಳಲ್ಲಿ ನಮ್ಮ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ಜೆಡಿಎಸ್ ತನ್ನ ಚುನಾವಣಾ ನಂತರದ ನಿಲುವನ್ನು ಸ್ಪಷ್ಟಪಡಿಸಿಲ್ಲ. ಮೈತ್ರಿ ಬಗ್ಗೆಯೂ ಅವರು ನಮ್ಮನ್ನು ಸಂಪರ್ಕಿಸಿಲ್ಲ. ಈ ಜೆಡಿಎಸ್ ಜೊತೆ ಮೈತ್ರಿಯ ಪ್ರಸ್ತಾವವೇ ನಮ್ಮ ಮುಂದಿಲ್ಲ'ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಸಿಪಿಐ, ಫಾರ್ವರ್ಡ್ ಬ್ಲಾಕ್ ಸೇರಿದಂತೆ ಎಡ ಹಾಗೂ ಸಮಾನ ಮನಸ್ಕ ಪಕ್ಷಗಳು ಹೊಂದಾಣಿಕೆಯಲ್ಲಿ ಚುನಾವಣೆ ಎದುರಿಸುತ್ತವೆ. ಶೀಘ್ರವೇ ಈ ಸಂಬಂಧ ಮಾತುಕತೆ ನಡೆಯಲಿದೆ' ಎಂದು ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT