ಶುಕ್ರವಾರ, ಮೇ 27, 2022
23 °C
ತೂಕ, ಅಳತೆಯಲ್ಲಿ ಮೋಸ ಮಾಡದಿರಿ: ಎಚ್ಕೆ

1.81 ಲಕ್ಷ ಕುಟುಂಬಗಳಿಗೆ `ಅನ್ನಭಾಗ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ನ್ಯಾಯಬೆಲೆ ಅಂಗಡಿ ನಡೆಸುವವರು ಅಳತೆ ಮತ್ತು ತೂಕದಲ್ಲಿ ಮೋಸ ಮಾಡದೆ ಸಮಯಕ್ಕೆ ಸರಿಯಾಗಿ ಬಡವರಿಗೆ ಪಡಿತರ ವಿತರಣೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಹೇಳಿದರು.ನಗರದ ಗಂಗಾಪುರ ಪೇಟೆಯ ದುರ್ಗಾದೇವಿ ದೇವಸ್ಥಾನ ಬಳಿ ಬಿಪಿಎಲ್ ಫಲಾನುಭವಿ ಹುಸೇನ ಸಾಬ ಅವರಿಗೆ ಅಕ್ಕಿ ವಿತರಣೆ ಮಾಡುವ ಮೂಲಕ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಬಡವರಿಗೆ ಕೆ.ಜಿ.ಗೆ 1ರಂತೆ 30 ಕೆ.ಜಿ. ಅಕ್ಕಿ ನೀಡುತ್ತಿದೆ. ಕೆಲವರು ಅಪಸ್ವರ, ಹಾಸ್ಯ, ಅಕ್ಕಿ ನೀಡುವ ಅವಶ್ಯಕತೆ ಇಲ್ಲವೆಂದರು. 4,200 ಕೋಟಿ ರಾಜ್ಯಕ್ಕೆ ಹೊರೆಯಾಗಲಿದೆ. ಆದರೂ ಬಡವರ ಹೊರೆ ಕಡಿಮೆಯಾಗಲಿ ಎಂಬ ಕಾರಣಕ್ಕೆ ಸರ್ಕಾರ ಆರ್ಥಿಕ ಭಾರ ಹೊರಲು ಸಿದ್ಧ ಎಂದು ತಿಳಿಸಿದರು.ಜಿಲ್ಲೆಯಲ್ಲಿ 360 ನ್ಯಾಯ ಬೆಲೆ ಅಂಗಡಿ ಪೈಕಿ 112 ಪಟ್ಟಣ ಹಾಗೂ 248 ಗ್ರಾಮೀಣ ಪ್ರದೇಶದಲ್ಲಿದೆ. ಬಿಪಿಎಲ್ ಕಾರ್ಡ್ ದಾರರು 1.68 ಲಕ್ಷ ಮತ್ತು ಅಂತ್ಯೋದ್ಯಯ ಕಾರ್ಡ್ ದಾರರು 12 ಸಾವಿರ ಸೇರಿದಂತೆ ಒಟ್ಟು 1.81 ಲಕ್ಷ ಕುಟುಂಬಗಳು ಅನ್ನಭಾಗ್ಯ ಯೋಜನೆ ಲಾಭ ಪಡೆಯಲಿವೆ. 2,200 ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆ ಇದೆ. ನ್ಯಾಯಬೆಲೆ ಅಂಗಡಿ ನಡೆಸುವವರು ಸಮಯಕ್ಕೆ ಸರಿಯಾಗಿ ಅಕ್ಕಿ, ಸೀಮೆಎಣ್ಣೆ ಬಡವರಿಗೆ ಮುಟ್ಟಿಸಬೇಕು. ದಾರಿ ಕಾಯುವಂತೆ ಮಾಡಬಾರದು. ತೂಕದಲ್ಲಿ ಒಂದು ಗುಂಜಿಯು ಕಡಿಮೆ ಮಾಡಬಾರದು ಎಂದು ಸೂಚನೆ ನೀಡಿದರು.ಹಸಿವಿದ್ದವನಿಗೆ ಸಾಮಾಜಿಕ ಮಾತು ಉಪಯೋಗವಾಗುವುದಿಲ್ಲ. ಹೊಟ್ಟೆ ತುಂಬಿದರೆ ವಿಚಾರ ಆರಂಭಿಸುತ್ತಾನೆ. ಅನ್ನ ಕೊಟ್ಟರೆ ದುಡಿಯುವುದನ್ನು ನಿಲ್ಲಿಸುತ್ತಾರೆ ಎನ್ನುತ್ತಾರೆ. ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಈ ರೀತಿ ಹೇಳುವವರು ಸಮಾಜದ ಏಳ್ಗೆ ಸಹಿಸುವುದಿಲ್ಲ ಎಂದರು.ಹಿಂದಿನ ಮುಖ್ಯಮಂತ್ರಿ ಶೆಟ್ಟರ್ ಮಂಡಿಸಿದ ಬಜೆಟ್ ಆಗಿದ್ದರೆ 1ಕ್ಕೆ ಕೆ.ಜಿ. ಅಕ್ಕಿ ಕೊಡಲು ಆಗುತ್ತಿರಲಿಲ್ಲ. 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುವ ಬಜೆಟ್ ಜನಪರ ಯೋಜನೆಗಳು ಒಳಗೊಂಡಿರುತ್ತವೆ. ಹೈದರಾಬಾದ್- ಕರ್ನಾಟಕಕ್ಕೆ ಸಂವಿಧಾನದ ಕಲಂ 371 ಜೆ ಕಲಂ ತಿದ್ದುಪಡಿ ಸಂಬಂಧ ಸಂಪುಟ ಉಪಸಮಿತಿಯು ಗುರುವಾರ ಸಂಜೆ ಸಭೆ ಸೇರಿ ಪ್ರಮುಖ ನಿರ್ಣಯ ಕೈಗೊಳ್ಳಲಿದೆ ಎಂದರು.ನರಗುಂದ ಶಾಸಕ ಬಿ.ಆರ್.ಯಾವಗಲ್,  ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ಮಾತನಾಡಿದರು. ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ್, ಸಿಇಒ ವೀರಣ್ಣ ತುರಮರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಕರೀಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಗಡ್ಡದೇವರ ಮಠ, ಕಾಂಗ್ರೆಸ್ ಎಸ್‌ಟಿ ಘಟಕದ ರಾಜ್ಯ ಘಟಕದ ಅಧ್ಯಕ್ಷ ಟಿ.ಈಶ್ವರ ಹಾಗೂ ನಗರಸಭೆ ಸದಸ್ಯರು ಹಾಜರಿದ್ದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಶಶಿಧರ ಕುರೇರ ಸ್ವಾಗತಿಸಿದರು.

ಕಾರ್ಯಕರ್ತರ ದಂಡು, ಅವ್ಯವಸ್ಥೆ

ನಗರದಲ್ಲಿ ಬುಧವಾರ ಅನ್ನಭಾಗ್ಯ ಯೋಜನೆ ಉದ್ಘಾಟನೆ ಸಂದರ್ಭದಲ್ಲಿ ಅರ್ಧ ಗಂಟೆ ಸುರಿದ ಮಳೆ ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಿತು.ನಿಗದಿತ ಅವಧಿಗಿಂತ ಒಂದು ತಾಸು ತಡವಾಗಿ ಕಾರ್ಯಕ್ರಮ ಆರಂಭಗೊಂಡಿತು. ಆಹ್ವಾನ ಪತ್ರಿಕೆಯಲ್ಲಿ ಹೆಸರು ಇಲ್ಲದವರು ವೇದಿಕೆಯಲ್ಲಿದ್ದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ, ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ, ನಗರಸಭೆ ಸದಸ್ಯರು ಮತ್ತು ಕಾರ್ಯಕರ್ತರು ವೇದಿಕೆಯಲ್ಲಿ ಆಸೀನರಾಗಿದ್ದರು. ಕಾರ್ಯಕರ್ತರ ದಂಡು ನೋಡಿ ಅಧಿಕಾರಿಗಳು ದಂಗಾದರು.ಸ್ವಾಗತ ಭಾಷಣ ಮಾಡುವಾಗಲೇ ಮಳೆ ಆರಂಭವಾಯಿತು. ಶಾಮಿಯಾನ ಹಾಕಿದ್ದರೂ ನೀರು ಸೋರ ತೊಡಗಿತು. ಸಚಿವರು ಭಾಷಣ ಆರಂಭಿಸುತ್ತಿದ್ದಂತೆ ಮಳೆ ಜೋರಾಯಿತು. ಮಳೆಯಿಂದ ರಕ್ಷಣೆ ಪಡೆಯಲು ಕೆಲವರು ಕುರ್ಚಿಯನ್ನೇ ತಲೆ ಮೇಲೆ ಇಟ್ಟುಕೊಂಡರೇ ಮತ್ತೆ ಕೆಲವರು ಕಟ್ಟಡಗಳ ಬಳಿ ರಕ್ಷಣೆ ಪಡೆದರು.`ಅಳತೆಯಲ್ಲಿ ಮೋಸ ಮಾಡ್ತಾರೆ..'

ಅನ್ನಭಾಗ್ಯ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ನಾಗರಿಕರು ಸಚಿವರಿಗೆ ನ್ಯಾಯಬೆಲೆ ಅಂಗಡಿಗಳ ವಿರುದ್ಧ ದೂರುಗಳ ಸುರಿಮಳೆಗೈದರು.ಎಚ್ಕೆ ಭಾಷಣ ಮುಗಿಸುತ್ತಿದ್ದಂತೆ ಗಂಗಾಪುರ ಪೇಟೆ ನಿವಾಸಿ ಭಾಷಾ ಬೇಗಂ ಅವರು ಎದ್ದುನಿಂತು ಸೀಮೆಎಣ್ಣೆ ಕೊಡುವಾಗ ಅಳತೆಯಲ್ಲಿ ಮೋಸ ಮಾಡುತ್ತಾರೆ. ಆರು ಲೀಟರ್ ಬದಲಾಗಿ 4.5 ಲೀಟರ್ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ವೇದಿಕೆ ಏರಿ ಸಚಿವರ ಬಳಿಯೇ ಹೋಗಿ ಸಮಸ್ಯೆಯನ್ನು ವಿವರಿಸಿದರು. ಸಚಿವರು ಜಿಲ್ಲಾಧಿಕಾರಿ ಜತೆ ಚರ್ಚಿಸಿದ  ಬಳಿಕ ಮೈಕ್ ಬಳಿ ಬಂದು, ಯಾವುದೇ ಕಾರಣಕ್ಕೂ ವಿತರಕರು ಸೀಮೆಎಣ್ಣೆ ನೀಡುವಾಗ ಅಳತೆಯಲ್ಲಿ ಮೋಸ ಮಾಡಬಾರದು ಎಂದು ಸೂಚನೆ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.