2ಜಿ ಹಗರಣ: ಸಾಕ್ಷ್ಯಕ್ಕಾಗಿ ವಾಜಪೇಯಿ, ಜಾರ್ಜ್ ಫರ್ನಾಂಡಿಸ್ ಗೆ ಜೆಪಿಸಿ ಕರೆ ಇಲ್ಲ
ನವದೆಹಲಿ (ಪಿಟಿಐ): 2 ಜಿ ಹಗರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ತಿಂಗಳಿನ ಒಳಗಾಗಿ ತನ್ನ ವರದಿಯನ್ನು ಸಲ್ಲಿಸಬೇಕಾಗಿರುವ ಪಿ.ಸಿ. ಚಾಕೋ ನೇತೃತ್ವದ ಜಂಟಿ ಸಂಸದೀಯ ಸಮಿತಿಯು ಕಾಲದ ಅಭಾವ ಹಿನ್ನೆಲೆಯಲ್ಲಿ ತನ್ನ ಮುಂದೆ ಕರೆಸಬೇಕಾದ ಸಾಕ್ಷಿಗಳ ಪಟ್ಟಿಯನ್ನು ಕಡಿತಗೊಳಿಸುತ್ತಿದ್ದು, ಸಲಹೆಗಳ ಹೊರತಾಗಿಯೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕರೆಸುವ ಸಾಧ್ಯತೆಗಳಿಲ್ಲ ಎಂದು ಭಾನುವಾರ ದೃಢಪಡಿಸಿದೆ.
~ಮಾಜಿ ಪ್ರಧಾನಿ ವಾಜಪೇಯಿ ಮತ್ತು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಸಾಕ್ಷ್ಯಕ್ಕಾಗಿ ಕರೆಸುವ ಸಾಧ್ಯತೆಗಳನ್ನು ಅವರ ದೇಹಾರೋಗ್ಯ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ನಾನು ತಳ್ಳಿಹಾಕಿದ್ದೇನೆ~ ಎಂದು ಚಾಕೋ ನುಡಿದರು.
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ಸಚಿವಾಲಯವು ಸಿದ್ಧ ಪಡಿಸಿದ ಸಾಕ್ಷಿಗಳ ಪಟ್ಟಿಯಲ್ಲಿ ವಾಜಪೇಯಿ ಮತ್ತು ಫರ್ನಾಂಡಿಸ್ ಅವರ ಹೆಸರುಗಳನ್ನು ಸೇರಿಸಲಾಗಿತ್ತು.
~ಈ ಬಗ್ಗೆ ಸಲಹೆಗಳು ಬಂದಿದ್ದವು. ಅವರ ಹೆಸರುಗಳ ಸಾಕ್ಷಿದಾರರ ಪಟ್ಟಿಯಲ್ಲಿ ಇದ್ದುದೂ ಹೌದು. ಆದರೆ ಅವರನ್ನು ಕರೆಸುವ ಪ್ರಶ್ನೆ ಇಲ್ಲ ಎಂದು ಚಾಕೋ ಸ್ಪಷ್ಟ ಪಡಿಸಿದರು.
ಎನ್ ಡಿ ಎ ಆಡಳಿತ ಕಾಲದಲ್ಲಿ ಜಗ್ ಮೋಹನ್ ರಾಜೀನಾಮೆಯ ಬಳಿಕ ದೂರಸಂಪರ್ಕ ಖಾತೆಯು ಪ್ರಧಾನಿಯ ಕೈಯಲ್ಲೇ ಇದ್ದುದರಿಂದ ವಾಜಪೇಯಿಯವರನ್ನು ಕರೆಸುವಂತೆ ಸಲಹೆ ಮಾಡಲಾಗಿತ್ತು. ಹಾಗೆಯೇ ಫರ್ನಾಂಡಿಸ್ ಅವರನ್ನು ದೂರಸಂಪರ್ಕಕ್ಕೆ ಸಂಬಂಧಿಸಿದ ಜಿಓಎಂ ಮುಖ್ಯಸ್ಥರಾಗಿದ್ದ ಹಿನ್ನೆಲೆಯಲ್ಲಿ ಕರೆಸುವಂತೆ ಸಲಹೆ ಮಾಡಲಾಗಿತ್ತು.
ಸಮಿತಿಯ ಸಭೆಯೊಂದರಲ್ಲಿ ಬಿಜೆಪಿಯ ಯಶವಂತ ಸಿನ್ಹ ಅವರು ಸಾಕ್ಷಿಗಳ ಪಟ್ಟಿಯಲ್ಲಿ ವಾಜಪೇಯಿ ಅವರ ಹೆಸರು ಸೇರಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.