ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಜಿ ಬಿರುಗಾಳಿ: ಚಿದಂಬರಂಗೆ ಸರ್ಕಾರದ ಬೆಂಬಲ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): 2ಜಿ ವಿವಾದದಲ್ಲಿ ಸಿಲುಕಿರುವ ಚಿದಂಬರಂ ಅವರನ್ನು ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಬಲವಾಗಿ ಸಮರ್ಥಿಸಿಕೊಂಡಿವೆ.

ಈ ಮಧ್ಯೆ ವಿರೋಧ ಪಕ್ಷಗಳು ಚಿದಂಬರಂ ಅವರ ರಾಜೀನಾಮೆಗೆ ತೀವ್ರ ಒತ್ತಡ ಹೇರುತ್ತಿವೆ. `ಚಿದಂಬರಂ ಅವರ ಬಗ್ಗೆ ಯಾವುದೇ ರೀತಿಯ ಸಂಶಯಪಡಲು ಕಾರಣಗಳೇ ಇಲ್ಲ. ಆದ್ದರಿಂದ ಸರ್ಕಾರ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ~ ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.

`ಚಿದಂಬರಂ ಅವರ ಕಾರ್ಯವೈಖರಿಯನ್ನು ಪ್ರಶ್ನಿಸುವುದು ಅಸಾಧ್ಯ. ಅವರಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲೇಬೇಕು~ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಕಾರ
ಚಿದಂಬರಂ ರಾಜೀನಾಮೆ ನೀಡಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಕಾಂಗ್ರೆಸ್ ತಳ್ಳಿಹಾಕಿದೆ.
`ಗೃಹ ಸಚಿವರ ವಿರುದ್ಧ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರು ಮಾಡಿರುವ ಆಪಾದನೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ~ ಎಂದು ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

`ಚಿದಂಬರಂ ಅವರ ಸಮಗ್ರತೆಯ ಬಗ್ಗೆ ಪಕ್ಷಕ್ಕೆ ಎಳ್ಳಷ್ಟೂ ಸಂಶಯವಿಲ್ಲ. ಸ್ವಾಮಿ ಈ ವಿಚಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತಾಪಿಸಿರುವುದರಿಂದ ಹೆಚ್ಚು ಹೇಳುವುದು ಸಬ್‌ಜುಡಿಸ್ ಆಗಬಹುದು.

ನ್ಯಾಯಾಂಗ ಪ್ರಕ್ರಿಯೆ ಮುಕ್ತಾಯವಾಗುವ ಮೊದಲೇ ಸ್ವಾಮಿ ಅಥವಾ ಇನ್ನಾವುದೇ ವ್ಯಕ್ತಿ ಒಂದು ತೀರ್ಮಾನಕ್ಕೆ ಬರುವುದು ತೀವ್ರ ಆಕ್ಷೇಪಾರ್ಹ~ ಎಂದಿದ್ದಾರೆ.

ಸಾಂವಿಧಾನಿಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಿರುವುದು ಕುಚೋದ್ಯವಲ್ಲದೆ ಇನ್ನೇನು ಎಂದು ಅವರು ಪ್ರಶ್ನಿಸಿದ್ದಾರೆ.

ರಾಜಾ ನಿಲುವು ಸರಿ: ಡಿಎಂಕೆ ಸಮರ್ಥನೆ
ಚೆನ್ನೈ, (ಪಿಟಿಐ): 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಆಗಿನ ದೂರಸಂಪರ್ಕ ಸಚಿವ ಎ. ರಾಜಾ ಅವರು ತೆಗೆದುಕೊಂಡಿದ್ದ ನಿಲುವು ಸರಿಯಾಗಿಯೇ ಇತ್ತು ಎಂಬುದು ಹಣಕಾಸು ಸಚಿವಾಲಯ ಪ್ರಧಾನಿಗೆ ಕಳುಹಿಸಿರುವ ಟಿಪ್ಪಣಿಯಿಂದ ರುಜುವಾತಾಗಿದೆ ಎಂದು ಯುಪಿಎ ಮಿತ್ರ ಪಕ್ಷವಾದ ಡಿಎಂಕೆ ಹೇಳಿದೆ.

ಪ್ರಧಾನಿ ಮತ್ತು ಹಣಕಾಸು ಸಚಿವಾಲಯದ ಸಲಹೆಗಳನ್ನು ಮೀರಿ ರಾಜಾ ವರ್ತಿಸಿದ್ದರು ಎಂಬುದು ಸುಳ್ಳು ಎಂದು ಈಗ ಬಹಿರಂಗಗೊಂಡಿದೆ. ಹರಾಜು ಹಾಕದೆ ತರಂಗಾಂತರ ಹಂಚಿಕೆ ಮಾಡುವ ರಾಜಾ ಅವರ ನಿರ್ಧಾರವನ್ನು ಆಗಿನ ಹಣಕಾಸು ಸಚಿವರು ಬೆಂಬಲಿಸಿದ್ದರು ಎಂಬ ವಿಚಾರ ಈಗ ಹೊರಬಂದಿರುವುದು ರಾಜಾ ಅವರ ಹೇಳಿಕೆಯನ್ನು ಸಮರ್ಥಿಸುತ್ತದೆ ಎಂದು ಡಿಎಂಕೆ ಮೂಲಗಳು ಹೇಳಿವೆ.

ಆದರೆ, ಚಿದಂಬರಂ ಅವರಿಗೆ ಸಂಬಂಧಿಸಿದ ವಿವಾದದಿಂದ ಪಕ್ಷ ದೂರ ಉಳಿಯಬಯಸಿದೆ. `ತಪ್ಪು ಕಂಡುಬಂದರೆ ರಾಜೀನಾಮೆ ಸಲ್ಲಿಸುವುದು ಗೃಹ ಸಚಿವರಿಗೆ ಬಿಟ್ಟ ವಿಚಾರ. ಈ ಬಗ್ಗೆ ನನ್ನ ಬಳಿ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ನಾನೇನೂ ಹೇಳಲಾರೆ~ ಎಂದು ಪಕ್ಷದ ಅಧ್ಯಕ್ಷ ಎಂ.ಕರುಣಾನಿಧಿ ಹೇಳಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸಚಿವ ಚಿದಂಬರಂ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
`ಚಿದಂಬರಂ ಅವರು ಜವಾಬ್ದಾರಿ ನಿರ್ವಹಣೆಯಲ್ಲಿ ಎಡವಿರುವುದರಿಂದ ಅವರಾಗೇ ರಾಜೀನಾಮೆ ನೀಡಬೇಕು ಇಲ್ಲವೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು~ ಎಂದು ಬಿಜೆಪಿ ಮುಖಂಡರಾದ ಅರುಣ್ ಜೇಟ್ಲಿ ಹಾಗೂ ಮುರಳಿ ಮನೋಹರ ಜೋಶಿ ಆಗ್ರಹಿಸಿದ್ದಾರೆ.


ಈಗಿನ ಹಣಕಾಸು ಸಚಿವರು ಹಗರಣದಿಂದ ರಾಷ್ಟ್ರದ ಬೊಕ್ಕಸಕ್ಕೆ ಎಷ್ಟು ನಷ್ಟವಾಗಿದೆ ಎಂಬುದನ್ನು ತಿಳಿಸಬೇಕು ಮತ್ತು ಚಿದಂಬರಂ ಪಾತ್ರದ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಜೋಶಿ ಒತ್ತಾಯಿಸಿದ್ದಾರೆ.
ಬಿಜೆಪಿಯ ಈ ಬೇಡಿಕೆಗೆ ಸಿಪಿಐ ಕೂಡ ಬೆಂಬಲ ವ್ಯಕ್ತಪಡಿಸಿದೆ.

ಸಿಬಿಐನಿಂದ ಸಮರ್ಥನೆ
ನವದೆಹಲಿ, (ಪಿಟಿಐ): 2ಜಿ ಹಗರಣದಲ್ಲಿ ಗೃಹ ಸಚಿವ ಪಿ.ಚಿದಂಬರಂ ಅವರ ಪಾತ್ರವೇನೂ ಇಲ್ಲ ಎಂದು ಸಿಬಿಐ ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ.

ದೂರಸಂಪರ್ಕ ಇಲಾಖೆಯು ಕೆಲವು ಸಲಹೆಗಳನ್ನು ಮೀರಿ ನಡೆದುಕೊಂಡಿದ್ದರಿಂದ ಲೋಪ ಉಂಟಾಗಿದೆ ವಿನಾ, ಆಗ ಹಣಕಾಸು ಸಚಿವರಾಗಿದ್ದ ಚಿದಂಬರಂ ಯಾವುದೇ ತಪ್ಪು ನಿರ್ಧಾರ ತೆಗೆದುಕೊಂಡಿರಲಿಲ್ಲ ಎಂದು ಸಿಬಿಐ ಪರ ವಕೀಲ ಕೆ.ಕೆ.ವೇಣುಗೋಪಾಲ್ ಸಮರ್ಥಿಸಿಕೊಂಡರು.

ತರಂಗಾಂತರ ಹರಾಜು ಹಾಕದಿರುವ ದೂರಸಂಪರ್ಕ ಇಲಾಖೆಯ ನಿರ್ಧಾರದಲ್ಲಿ ಹಣಕಾಸು ಸಚಿವರ ಪಾತ್ರವಿರಲಿಲ್ಲ. ದೂರಸಂಪರ್ಕ ಸಚಿವರು ಕರೆದಿದ್ದ ಸಭೆಯಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿ ಪಾಲ್ಗೊಂಡಿದ್ದರು ಎಂದು ವೇಣುಗೋಪಾಲ್ ತಿಳಿಸಿದರು.

ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಚಿದಂಬರಂ ಆಗ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿದ್ದ ವಿ.ಸುಬ್ಬರಾವ್ ಮತ್ತು ಇತರ ಅಧಿಕಾರಿಗಳ ಸಲಹೆಯಂತೆ ನಡೆದುಕೊಂಡಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT