ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2012: ಹೂಡಿಕೆದಾರರಿಗೆ ಲಾಭ?

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಳೆದ ಒಂದು ವರ್ಷದಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸಾಕಷ್ಟು ಹಾನಿ ಅನುಭವಿಸಿದರೂ, ಹೊಸ ವರ್ಷದಲ್ಲಿ ಮತ್ತೆ ಶುಭ ತರಬಹುದು ಎನ್ನುವ ನಿರೀಕ್ಷೆಯಲ್ಲಿ ಹೂಡಿಕೆದಾರರಿದ್ದಾರೆ.

 ಮಾರುಕಟ್ಟೆ ಏರಿಳಿತಗಳು ಏನೇ ಇದ್ದರೂ 2012ನೇ ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ, ಖಾಸಗಿ ಬ್ಯಾಂಕುಗಳು ಮತ್ತು `ಎಫ್‌ಎಂಸಿಜಿ~ ವಲಯದ ಷೇರುಗಳು ಲಾಭ ಕೊಳ್ಳೆಹೊಡೆಯುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಜಾಗತಿಕ ಆರ್ಥಿಕ ಅಸ್ಥಿರತೆಯಿಂದ 2011ರಲ್ಲಿ ಷೇರು ಪೇಟೆ ಶೇ 25ರಷ್ಟು ಹಾನಿ ಕಂಡಿದೆ. ಆದರೆ, ಮಾಹಿತಿ ತಂತ್ರಜ್ಞಾನ ವಲಯದ ಷೇರು ಸೂಚ್ಯಂಕ ಸ್ಥಿರವಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು `ಐಟಿ~ ರಂಗದ ಷೇರುಗಳ ಲಾಭ ಗಳಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
 
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮುಂಬರುವ ಐಟಿ ಕಂಪೆನಿಗಳ ಮೂರನೇ ತ್ರೈಮಾಸಿಕ ಅವಧಿಯ ಹಣಕಾಸು ಸಾಧನೆ ಷೇರುಪೇಟೆಯ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಶೀಘ್ರ ವಿಲೇವಾರಿಯಾಗುವ ಗ್ರಾಹಕ ಸರಕುಗಳ ವಲಯವೂ 2011ರಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದೆ. `ಎಫ್‌ಎಂಸಿಜಿ~ ಸೂಚ್ಯಂಕ ಈ ಅವಧಿಯಲ್ಲಿ ಶೇ 9.53ಕ್ಕೆ ಏರಿಕೆ ಕಂಡಿದೆ. ಆದರೆ, ರಿಯಲ್ ಎಸ್ಟೇಟ್ ರಂಗದ ಷೇರು ದರಗಳು ಶೇ 51.83ರಷ್ಟು ಕುಸಿತ ಕಂಡಿವೆ. ಆಹಾರ ಹಣದುಬ್ಬರ ದರ ಗಣನೀಯ ಇಳಿಕೆ ಕಂಡಿರುವುದು `ಎಫ್‌ಎಂಸಿಜಿ~ ವಲಯದ ಹೂಡಿಕೆಗೆ ಉತ್ತೇಜನ ನೀಡಿದೆ.

ಸದ್ಯದ ಪರಿಸ್ಥಿತಿ ಗಮನಿಸಿದರೆ  2012ರ ಮಧ್ಯಭಾಗದವರೆಗೆ ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ವಲಯದ ಷೇರುಗಳು ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಲ್ಪಾವಧಿ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳ ಷೇರುಗಳು ವಿಶೇಷವಾಗಿ, ಖಾಸಗಿ ಬ್ಯಾಂಕುಗಳಿಗೆ  ಲಾಭ ಗಳಿಸುವ ಅವಕಾಶ ಹೆಚ್ಚಿದೆ. 

ವಿದೇಶಿ ವಿತ್ತೀಯ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆ ಹೆಚ್ಚಿದರೂ ಈ ವಲಯಗಳು ಅತ್ಯುತ್ತಮ ಪ್ರದರ್ಶನ ನೀಡಲಿವೆ ಎಂದು ಜಿಯೋಜಿತ್ ಬಿಎನ್‌ಪಿ ಸಂಸ್ಥೆಯ ಮುಖ್ಯಸ್ಥ ಅಲೆಕ್ಸ್ ಮಾಥ್ಯೂಸ್ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT