ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2060 ಶಾಲೆ, 1.46 ಲಕ್ಷ ಮಕ್ಕಳು

ಕ್ಷೀರಭಾಗ್ಯ ಯೋಜನೆಗೆ ಇಂದು ಚಾಲನೆ
Last Updated 1 ಆಗಸ್ಟ್ 2013, 9:31 IST
ಅಕ್ಷರ ಗಾತ್ರ

ಕೋಲಾರ:  ಜಿಲ್ಲೆಯಲ್ಲಿ ಗುರುವಾರದಿಂದ ಕ್ಷೀರಭಾಗ್ಯ ಯೋಜನೆ ಆರಂಭಗೊಳ್ಳಲಿದ್ದು, 1ರಿಂದ 10ನೇ ತರಗತಿಯವರೆಗಿನ ಜಿಲ್ಲೆಯ 2060 ಶಾಲೆಗಳ 1,46,800 ಮಕ್ಕಳು ವಾರಕ್ಕೆ ಮೂರು ದಿನ ಹಾಲಿನ ಸವಿ ನೋಡಲಿದ್ದಾರೆ.

ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಿಸುವ ಸಲುವಾಗಿ ಯೋಜನೆ ಜಾರಿಗೊಳಿಸುತ್ತಿದ್ದು, ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲಾ ಮಕ್ಕಳಿಗೆ ಉಚಿತವಾಗಿ ಕೆನೆಭರಿತ ಹಾಲನ್ನು ವಿತರಿಸುವ ಯೋಜನೆಗೆ ನಗರದ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಚಾಲನೆ ನೀಡಲಿದ್ದಾರೆ.

ದಿನ ಬಿಟ್ಟು ದಿನ ವಾರದಲ್ಲಿ ಮೂರು ದಿನ -ಸೋಮವಾರ, ಬುಧವಾರ ಮತ್ತು ಶುಕ್ರವಾರ ಹಾಲು- ವಿತರಿಸಲಾಗುವುದು. ಉರ್ದು ಶಾಲೆಗಳಲ್ಲಿ ಶುಕ್ರವಾರದ ಬದಲಿಗೆ ಶನಿವಾರ ವಿತರಿಸಲಾಗುವುದು. ಪ್ರತಿ ಮಗುವಿಗೆ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಮಿ.ಲೀ. ಹಾಲು ನೀಡಲಾಗುವುದು.

ಕೆನೆಭರಿತ ಹಾಲಿನ ಪುಡಿಯನ್ನು ಹಾಲನ್ನಾಗಿ ಪರಿವರ್ತಿಸಿ, ಸಕ್ಕರೆ ಬೆರೆಸಿ, ಕಾಯಿಸಿ ಮಕ್ಕಳಿಗೆ ನೀಡಲು ತಗುಲುವ ಪರಿವರ್ತನಾ ವೆಚ್ಚ ಪ್ರತಿ ಮಗುವಿಗೆ ದಿನಕ್ಕೆ 59 ಪೈಸೆ. ಅದರಂತೆ ಒಂದು ತಿಂಗಳಿಗೆ ಬೇಕಾಗುವ ಅನುದಾನವನ್ನು 2 ತಿಂಗಳು ಮುಂಚಿತವಾಗಿ ಜಿಲ್ಲಾ ಪಂಚಾಯಿತಿಯಿಂದ ಮಧ್ಯಾಹ್ನದ ಬಿಸಿಯೂಟದ ಪರಿವರ್ತನಾ ವೆಚ್ಚದ ಜೊತೆಗೆ ಶಾಲೆಯ ಅಕ್ಷರ ದಾಸೋಹದ ಖಾತೆಗೆ ಜಮಾ ಮಾಡಲಾಗುತ್ತದೆ. 10 ದಿನ ಮುಂಚಿತವಾಗಿಯೇ ಶಾಲೆಗಳ ಬಾಗಿಲಿಗೇ ಹಾಲಿನ ಪುಡಿಯನ್ನು ಕೆಎಂಎಫ್ ಸರಬರಾಜು ಮಾಡಲಿದೆ.

ಹಾಲಿನ ವಿತರಣೆ ಪೂರ್ಣ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವಹಿಸಲಾಗಿದೆ. ಅವರು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕೆಎಂಎಫ್, ಪಶುಸಂಗೋಪನಾ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಿದ್ದಾರೆ.

ಹಾಲಿನ ವಿತರಣೆ ಸಂಬಂಧ ಜಿಲ್ಲಾಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಾಲಾ ಹಂತದಲ್ಲಿ ಜವಾಬ್ದಾರಿ ಹಂಚಲಾಗಿದೆ.

ಹಾಲು ವಿತರಣೆ ಖರ್ಚು ಒಂದು ಮಗುವಿಗೆ ಒಂದು ಬಾರಿಗೆ
ಹಾಲಿನ ಪುಡಿ                      18 ಗ್ರಾಂ   4,05ರೂ
ಸಕ್ಕರೆ                              10 ಗ್ರಾಂ  32 ಪೈಸೆ
ಇಂಧನ                              ---    15 ಪೈಸೆ
ಇತರೆ                                ----    12 ಪೈಸೆ
ಒಟ್ಟು                                  ----   4.64 ರೂ

ಅಡುಗೆಯವರ ಗೌರವ ಸಂಭಾವನೆ ಮಾಸಿಕ  ರೂ 100.

ಹಾಲು ವಿತರಣೆ ನಿರ್ವಹಣೆ
* 100 ಗ್ರಾಂ ಕೆನೆಭರಿತ ಹಾಲಿನ    ಪುಡಿಯಿಂದ 820 ಮಿ.ಲೀ ಟೋನ್ಡ್   ಹಾಲು ತಯಾರಿಸಬಹುದು

* ಹಾಲಿನ ಪುಡಿಗೆ ಶುದ್ಧ ನೀರನ್ನು ಮಾತ್ರ   ಬಳಸಬೇಕು

* ಹಾಲಿಗೆ ಸಮನಾದ ಮಿಶ್ರಣ ಪಡೆಯಲು   4 ಭಾಗದಷ್ಟು ಬಿಸಿನೀರಿಗೆ 1 ಭಾಗದಷ್ಟು   ಪುಡಿಯನ್ನು ಬೆರೆಸಬೇಕು

* ಹಾಲಿನ ಮಿಶ್ರಣ ತಯಾರಿಸಿದ ಬಳಿಕ   ಶುದ್ಧ ಬಟ್ಟೆ ಅಥವಾ ಫಿಲ್ಟರ್‌ನಿಂದ   ಶೋಧಿಸಿ ನೀಡಬೇಕು

* ಹಾಲು ಕುದಿಸುವ ಮೊದಲು 1 ಲೀ.   ಹಾಲಿಗೆ 70ರಿಂದ 80 ಗ್ರಾಂ ಸಕ್ಕರೆಯನ್ನು   ಬೆರೆಸಬೇಕು

* ಹಾಲು ತಯಾರಿಸಲು ತಳ ದಪ್ಪಗಿರುವ   ಅಲ್ಯೂಮಿನಿಯಂ ಪಾತ್ರೆಗಳನ್ನೇ    ಬಳಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT