ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ರಂದು ಹಾಸನಾಂಬೆ ದರ್ಶನ ಭಾಗ್ಯ

Last Updated 14 ಅಕ್ಟೋಬರ್ 2011, 5:05 IST
ಅಕ್ಷರ ಗಾತ್ರ

ಹಾಸನ: ರಾಜ್ಯದಲ್ಲೇ ವಿಶಿಷ್ಟ ಸಂಪ್ರದಾಯ ಅನುಸರಿಸುತ್ತಿರುವ ಹಾಸನಾಂಬಾ ದೇವಸ್ಥಾನದ ಬಾಗಿಲನ್ನು ಈ ವರ್ಷ ಅ.20ರಂದು ತೆರೆಯಲಾಗುತ್ತಿದ್ದು, ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರು ಗುರುವಾರ ದೇವಸ್ಥಾನಕ್ಕೆ ತೆರಳಿ ಸಿದ್ಧತೆಗಳನ್ನು ವೀಕ್ಷಿಸಿದರು.

ಬಳಿಕ ಪತ್ರಕರ್ತರೊಡನೆ ಮಾತನಾಡಿದ ಅವರು, `ಕಾರ್ಯಕ್ರಮ ಸಾಂಗವಾಗಿ ನೆರವೇರುವಂತೆ ಸಕಲ ಸಿದ್ಧತೆಗಳನ್ನು ಮಾಡಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ತೊಂದರೆಯಾಗದ ರೀತಿಯಲ್ಲಿ ಸೌಲಭ್ಯ ಮಾಡಲಾಗುವುದು. ಈ ಬಾರಿ ವಿಶಿಷ್ಟವಾಗಿ ಮತ್ತು ಇನ್ನಷ್ಟು ಅರ್ಥಪೂರ್ಣವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ.

ದೇವಸ್ಥಾನದ ಬಾಗಿಲು ತೆರೆಯುವ ದಿನದಿಂದ ಆರಂಭಿಸಿ ಕೊನೆಯ ದಿನದ ವರೆಗೆ ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ವಿವಿಧ ತಂಡಗಳಿಂದ ಭಕ್ತಿಗೀತೆಗಳನ್ನು ಹಾಡಿಸಬೇಕೆಂಬ ಯೋಚನೆ ಮಾಡಿದ್ದೇವೆ. ಒಂದು ದಿನ ಬೆಂಗಳೂರಿನಿಂದ ಒಳ್ಳೆಯ ಕಲಾ ತಂಡ ಕರೆಸುವ ಯೋಚನೆಯೂ ಇದೆ. ಭಕ್ತರ ಸಂಖ್ಯೆ ಹೆಚ್ಚಿದ್ದರೆ ರಾತ್ರಿ ವೇಳೆ ದರ್ಶನದ ಅವಧಿ ವಿಸ್ತರಿಸಲು ಅವಕಾಶವಿದೆ. ದೇವಸ್ಥಾನದಲ್ಲಿ ಪಾರಂಪರಿಕವಾದ ಇಬ್ಬರು ಅರ್ಚಕರಲ್ಲದೆ ಹೆಚ್ಚುವರಿಯಾಗಿ 24 ಅರ್ಚಕರನ್ನು ನೇಮಕ ಮಾಡಲಾಗಿದೆ. ಒಟ್ಟಾರೆ 26 ಅರ್ಚಕರು ತಲಾ ಮೂವರಂತೆ ಹಲವು ಶಿಫ್ಟ್‌ಗಳಲ್ಲಿ ಕೆಲಸ ಮಾಡಲಿದ್ದಾರೆ~ ಎಂದರು.

ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಕುಡಿಯುವ ನೀರಿನ ಸೌಲಭ್ಯ ಹಾಗೂ ತಾತ್ಕಾಲಿಕ ಶೌಚಾಲಯ ನಿರ್ಮಿಸಲು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು ವ್ಯವಸ್ಥೆ ಮಾಡಲಾಗುವುದು.

ದೇವಸ್ಥಾನದ ಸುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಸೂಚನೆ ನೀಡಿದ ಅವರು, ಸೂಕ್ತ ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಡಿವೈಎಸ್‌ಪಿ ಚನ್ನಬಸಪ್ಪ ಅವರಿಗೆ ಸೂಚನೆ ನೀಡಿದರು. ಜತೆಗೆ ಎಲ್ಲೆಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ, ಎಲ್ಲಿ ಶೌಚಾಲಯಗಳಿವೆ, ಸರತಿ ಸಾಲು ಎಲ್ಲಿಂದ ಆರಂಭವಾಗುತ್ತದೆ ಮುಂತಾದ ಸಮಗ್ರ ಮಾಹಿತಿ ಹೊಂದಿದ ಚಾರ್ಟ್ ಸಿದ್ಧಪಡಿಸಿ ಸಾಕಷ್ಟು ಮುಂಚಿತವಾಗಿ ಪತ್ರಿಕೆಗಳಿಗೆ ನೀಡುವಂತೆ ಸೂಚಿಸಿದರು.

ಬಂದೋಬಸ್ತ್ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, `ಕನಿಷ್ಠ 200 ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಕ ಮಾಡಲಾಗುವುದು. ಈಗಾಗಲೇ ಇದಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಪೊಲೀಸರೂ ಇರುತ್ತಾರೆ. ಒಂಬತ್ತು ದಿನಗಳ ಮಟ್ಟಿಗೆ ಜಿಲ್ಲೆಯ ವಿವಿಧ ಭಾಗಗಳಿಂದ ಪೊಲೀಸರನ್ನು ಕರೆಸಲಾಗುವುದು~ ಎಂದರು.

ಉಪ ವಿಭಾಗಾಧಿಕಾರಿ ಶಶಿಧರ ಕುರೇರ, ನಗರಸಭೆ ಸದಸ್ಯರಾದ ಪ್ರಸನ್ನ ಕೃಷ್ಣಮೂರ್ತಿ, ಬಂಗಾರಿ ಮಂಜು, ಮತ್ತಿತರರು ಇದ್ದರು.

28ರ ವರೆಗೆ ಅವಕಾಶ
ಈ ಬಾರಿ 20ರಂದು ಮಧ್ಯಾಹ್ನ 12ಕ್ಕೆ ದೇವಸ್ಥಾನದ ಬಾಗಿಲು ತೆರೆದರೆ ದೀಪಾವಳಿಯ ಮರುದಿನ ಅ.28ರಂದು ಬೀಗ ಹಾಕಲಾಗುತ್ತದೆ.

ಅ.17ರಂದು ಬೆಳಿಗ್ಗೆ ಜಿಲ್ಲಾ ಖಜಾನೆಯಿಂದ ದೇವಿಯ ಆಭರಣಗಳನ್ನು ಮೆರವಣಿಗೆ ಮೂಲಕ ಅರ್ಚಕರ ಮನೆಗೆ ಒಯ್ಯಲಾಗುವುದು. 20ರಂದು ಬೆಳಿಗ್ಗೆ 10.30ಕ್ಕೆ ದೇವಸ್ಥಾನದ ಗರ್ಭಗುಡಿಯ ಬೀಗದ ಕೀ ಗಳಿಗೆ ಪೂಜೆ ಸಲ್ಲಿಸಿ 12ಕ್ಕೆ ಬಾಗಿಲು ತೆರೆಯಲಾಗುವುದು. ಶುಕ್ರವಾರ ಮುಂಜಾನೆಯಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ದೀಪಾವಳಿಯಂದು ರಾತ್ರಿ ಚಂದ್ರಮಂಡಲೋತ್ಸವ ನಡೆಯುವುದು. ಅಂದು ರಾತ್ರಿಯಿಂದ ಮರುದಿನ ಮುಂಜಾನೆ ವರೆಗೂ ದೇವರ ದರ್ಶನಕ್ಕೆ ಅವಕಾಶವಿರುತ್ತದೆ.

ಕಳೆದ ವರ್ಷದಿಂದ ಭಕ್ತರಿಗೆ ಲಡ್ಡು ವಿತರಿಸುವ ಕಾರ್ಯಕ್ರಮ ಆರಂಭಿಸಲಾಗಿದೆ. ಅದನ್ನು ಮುಂದುವರಿಸಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಇದರ ದುರುಪಯೋಗವಾಗಬಾರದೆಂಬ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದ ದರ ನಿಗದಿ ಮಾಡಲಾಗುವುದು. ಭಕ್ತರಿಗೆ ಲಡ್ಡು ವಿತರಿಸುವ ಸೇವೆಗೆ ಯಾರಾದರೂ ಇಚ್ಛಿಸಿದರೆ ಅಂಥವರು ಜಿಲ್ಲಾಡಳಿತ ಸಂಪರ್ಕಿಸಬಹುದು. ಆದರೆ ಲಡ್ಡುಗಳಿಗೂ ಕನಿಷ್ಠ ಮೊತ್ತ ನಿಗದಿ ಮಾಡಿಯೇ ಭಕ್ತರಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT