ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರಿಂದ ಜಯದೇವ ಶ್ರೀ ಸ್ಮರಣೋತ್ಸವ

Last Updated 26 ಡಿಸೆಂಬರ್ 2012, 5:03 IST
ಅಕ್ಷರ ಗಾತ್ರ

ದಾವಣಗೆರೆ: ಜಯದೇವ ಜಗದ್ಗುರುಗಳ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ ಮತ್ತು ಸಹಜ ಶಿವಯೋಗ ಕಾರ್ಯಕ್ರಮ ಮುಂದಿನ ಜ. 25, 26 ಮತ್ತು 27ರಂದು ನಗರದ ಶಿವಯೋಗಾಶ್ರಮದ ಆವರಣದಲ್ಲಿ ನಡೆಯಲಿದೆ ಎಂದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಶಿವಯೋಗಾಶ್ರಮದಲ್ಲಿ ಮಂಗಳವಾರ ಜಯದೇವ ಶ್ರೀ ಸ್ಮರಣೋತ್ಸವದ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಯದೇವ ಶ್ರೀ ಸ್ಮರಣೋತ್ಸವ ಎಂದರೆ ಅದು ದಾವಣಗೆರೆಯ ಹಬ್ಬವಾಗಿದೆ. ಸಮಾಜದ ಎಲ್ಲ ವರ್ಗದವರು ಪಾಲ್ಗೊಳ್ಳುತ್ತಾರೆ. ಪ್ರಸಕ್ತ ವರ್ಷವೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಜಯದೇವ ಶ್ರೀ ಪ್ರಶಸ್ತಿ ಮತ್ತು ಶೂನ್ಯಪೀಠ ಪ್ರಶಸ್ತಿ ನೀಡಲಾಗುವುದು. ಶೂನ್ಯಪೀಠ ಪ್ರಶಸ್ತಿಯನ್ನು ಅಲ್ಲಮಪ್ರಭು, ಚನ್ನಬಸವ ಮತ್ತು ಅಕ್ಕಮಹಾದೇವಿ ಹೆಸರಿನಲ್ಲಿ ಮೂವರಿಗೆ ನೀಡಲಾಗುತ್ತದೆ. ಎಲ್ಲ ನಾಲ್ಕು ಪ್ರಶಸ್ತಿಗಳು ತಲಾರೂ. 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಪ್ರಶಸ್ತಿ ವಿಜೇತರ ಹೆಸರನ್ನು ಶೀಘ್ರವೇ ಪ್ರಕಟಿಸಲಾಗುವುದು. ಸಮಾವೇಶದ ಯಶಸ್ಸಿಗೆ ಎಲ್ಲರ ಸಹಕಾರ ಮುಖ್ಯ ಎಂದು ನುಡಿದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಅಳಿವುದು ಕಾಯ, ಉಳಿವುದು ದೇಹ ಎಂಬ ಬಸವಾದಿ ಶರಣರ ವಾಣಿಯಂತೆ ಜಯದೇವ ಶ್ರೀಗಳ ಸಾಮಾಜಿಕ, ಧಾರ್ಮಿಕ ಕ್ರಾಂತಿ ಸ್ಮರಣೀಯ. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದ ಅನೇಕರು ಖ್ಯಾತನಾಮರಾಗಿ ನಾಡಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು, ತುಮಕೂರು, ದಾವಣಗೆರೆ, ಕೊಲ್ಲಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಜಯದೇವ ಪ್ರಸಾದ ನಿಲಯಗಳು ಸ್ಥಾಪನೆಗೊಂಡು ವಿದ್ಯಾರ್ಥಿಗಳಿಗೆ ಆಸರೆಯಾಗಿವೆ. ಅಂಥ ಶ್ರೀಗಳ ಕೊಡುಗೆಯನ್ನು ನಾವು ಸ್ಮರಿಸಲು ಈ ಉತ್ಸವ ಒಂದು ಅವಕಾಶ ಎಂದು ಹೇಳಿದರು.

ಶಿವಯೋಗಾಶ್ರಮ ಟ್ರಸ್ಟ್ ಕಾರ್ಯದರ್ಶಿ ಪಲ್ಲಾಗಟ್ಟೆ ಕೊಟ್ರೇಶಪ್ಪ ಅವರು ಕಳೆದ ಬಾರಿಯ ಜಯದೇವ ಶ್ರೀ ಸ್ಮರಣೋತ್ಸವದ ಲೆಕ್ಕಪತ್ರ ಮಂಡಿಸಿದರು. ಕಳೆದ ಬಾರಿ ಉತ್ಸವಕ್ಕೆರೂ. 12 ಲಕ್ಷ ವೆಚ್ಚವಾಗಿತ್ತು ಎಂದು ಸಭೆಗೆ ಮಾಹಿತಿ ನೀಡಿದರು.

ಜಾಲಿಮರದ ಬಸವರಾಜಪ್ಪ ಅವರು ಜಯದೇವಶ್ರೀ ಪ್ರಶಸ್ತಿಯ ನಗದು ಮೊತ್ತವನ್ನು ಪ್ರಾಯೋಜಿಸುವುದಾಗಿ ತಿಳಿಸಿದರು. ಜಯದೇವ ಪ್ರಸಾದ ನಿಲಯದ ಕಾರ್ಯದರ್ಶಿ ಎಂ. ಜಯಕುಮಾರ್ ಮಾತನಾಡಿ, ಉತ್ಸವಕ್ಕೆ ವೈಯಕ್ತಿಕವಾಗಿ ಹಾಗೂ ವಿವಿಧ ಮೂಲಗಳಿಂದ ಸಂಗ್ರಹಿಸಿ ರೂ. 2.25 ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದರು.

ಚಿಂತಕ ಪ್ರೊ.ಎಸ್.ಎಚ್. ಪಟೇಲ್, ಯಜಮಾನ್ ಮೋತಿ ವೀರಣ್ಣ, ಎಂ. ಶಿವಕುಮಾರ್, ಡಾ.ಎಸ್.ಎಂ. ಎಲಿ, ಡಾ.ಜಿ.ಸಿ. ಬಸವರಾಜ್, ಎಚ್.ಕೆ. ರಾಮಚಂದ್ರಪ್ಪ, ಡಿ. ಬಸವರಾಜ್, ಪೂಲ್‌ಚಂದ್ ಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT