ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ರಂದು ವಿಮಾ ನೌಕರರಿಂದ ಪ್ರತಿಭಟನೆ

Last Updated 6 ಫೆಬ್ರುವರಿ 2012, 8:30 IST
ಅಕ್ಷರ ಗಾತ್ರ

ರಾಯಚೂರು: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಯುಪಿಎ-2 ಸರ್ಕಾರದ ಹೊಸ ಆರ್ಥಿಕ ನೀತಿಗಳು, ಉದಾರೀಕರಣ ಧೋರಣೆ ಜನಸಾಮಾನ್ಯರ ಜೀವನ ಹೈರಾಣು ಮಾಡಿದೆ. ಬೆಲೆ ಏರಿಕೆ, ವ್ಯಾಪಕ ಭ್ರಷ್ಟಾಚಾರ ಹೆಚ್ಚಾಗುವುದಕ್ಕೆ, ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಈ ಧೋರಣೆ ವಿರುದ್ಧ ಇದೇ 28ರಂದು ನಡೆಯಲಿರುವ ಅಖಿಲ ಭಾರತ ಕಾರ್ಮಿಕ ಸಂಘಟನೆ ಮುಷ್ಕರದಲ್ಲಿ ತಮ್ಮ ಸಂಘಟನೆಯು ಪಾಲ್ಗೊಳ್ಳಲಿದೆ ಎಂದು ಅಖಿಲ ಭಾರತ ವಿಮಾ ನೌಕರರ ಸಂಘದ ಅಧ್ಯಕ್ಷ ಅಮಾನುಲ್ಲಾಖಾನ್ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರುವರಿ 28ರಂದು ನಡೆಯುವ ಮುಷ್ಕರದಲ್ಲಿ ಸುಮಾರು ಹತ್ತು ಕೋಟಿ ಜನ ಪಾಲ್ಗೊಳ್ಳಲಿದ್ದಾರೆ. ಎಲ್‌ಐಸಿಯ 3,800, ಜಿ.ಐ.ಸಿಯ 4,500ಕ್ಕೂ ಹೆಚ್ಚು ನೌಕರರು ಪಾಲ್ಗೊಳ್ಳುತ್ತಿದ್ದಾರೆ. ಬ್ಯಾಂಕ್‌ಗಳೂ ಬಹುತೇಕ ಬಂದ್ ಆಗಲಿವೆ. ಸ್ವಾತಂತ್ರ್ಯ ಹೋರಾಟದ ಬಳಿಕ ನಡೆಯುತ್ತಿರುವ ಅತ್ಯಂತ ಬೃಹತ್ ಮಟ್ಟದ ಹೋರಾಟ ಇದಾಗಲಿದೆ ಎಂದು ಹೇಳಿದರು.

ಶ್ರೀಮಂತರ ಪರವಾಗಿರುವ ಉದರೀಕರಣ ನೀತಿಗಳನ್ನು ಮರು ಪರಿಶೀಲಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಈ ಮುಷ್ಕರದಲ್ಲಿ ಎಲ್‌ಐಸಿ ಮತ್ತು ಜಿ.ಐ.ಸಿಯಲ್ಲಿ ಕೆಲಸ ಮಾಡುತ್ತಿರುವ 3 ಮತ್ತು 4ನೇ ದರ್ಜೆ ನೌಕರರು ದೇಶವ್ಯಾಪಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಯುಪಿಎ ಸರ್ಕಾರ ಆಡಳಿತಕ್ಕೆ ಬಂದಾಗ ಒಂದೇ ವರ್ಷದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿತ್ತು. ಆದರೆ ಈ ಭರವಸೆ ಹುಸಿಯಾಗಿದೆ. ಒಂದು ಕೋಟಿ ಉದ್ಯೋಗ ಸೃಷ್ಟಿ ಬದಲು ಒಂದುವರೆ ಕೋಟಿ ಉದ್ಯೋಗಿಗಳು ಹಾಳಾಗಿದ್ದಾರೆ. ಇದಕ್ಕೆ ಕೇಂದ್ರದ ಉದಾರೀಕರಣ, ಖಾಸಗೀಕರಣ ಮತ್ತು ಕಾರ್ಮಿಕ ವಿರೋಧಿ ಧೋರಣೆ ಮುಖ್ಯ ಕಾರಣವಾಗಿದೆ. ಬಿಪಿಒ, ಜವಳಿ ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ. ಬೆಲೆ ಏರಿಕೆ ನೀತಿಗಳಿಂದ ಜನಸಾಮಾನ್ಯರ ಬದುಕು ಕಷ್ಟವಾಗಿದೆ ಎಂದು ಹೇಳಿದರು.

ಅಖಿಲ ಭಾರತ ವಿಮಾ ನೌಕರರ ಸಂಘಟನೆಯು ವಿಮಾ ಉದ್ದಿಮೆಯಲ್ಲಿನ ಒಂದು ಬಹುದೊಡ್ಡ ನೌಕರರ ಸಂಘಟನೆಯಾಗಿದೆ. ಹಲವಾರು ವರ್ಷಗಳಿಂದ ವಿಮಾ ಉದ್ದಿಮೆಯಲ್ಲಿನ ಉದಾರೀಕರಣ ನೀತಿ ವಿರೋಧಿಸಿದೆ.

ದೇಶ್ಯಾಪಿ ಜನಜಾಗೃತಿ ಆಂದೋಲನವನ್ನು ಮಾಡಿದೆ. ವಿಮಾ ಉದ್ದಿಮೆ ವಲಯದಲ್ಲಿ ಖಾಸಗಿಯವರೂ ವ್ಯವಹಾರ ನಡೆಸಲು ಅನುವು ಮಾಡಿಕೊಟ್ಟ ಬಳಿಕವೂ ಎಲ್‌ಐಸಿ ಸದೃಢವಾಗಿದೆ. ಉದ್ದಿಮೆಯನ್ನು  ದುರ್ಬಲಗೊಳಿಸಲು ಸರ್ಕಾರ ಪ್ರಯತ್ನ ಮಾಡುತ್ತಲೇ ಇದೆ. ವಿಮಾ ಮಸೂದೆ ಕಾಯ್ದೆ 2008ರಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿ ಶೇ 26ರಿಂದ ಶೇ 49ಕ್ಕೆ ಹೆಚ್ಚಳ ಮಾಡುವ ಪ್ರಸ್ತಾಪ ಸಂಸತ್‌ನಲ್ಲಿ ಇನ್ನು ಹಾಗೆಯೇ ಇದೆ. ಇದನ್ನು ಸಂಘಟನೆಯು ಪ್ರಬಲವಾಗಿ ವಿರೋಧ ಮಾಡಿದೆ. ದೇಶದ 480ಕ್ಕೂ ಹೆಚ್ಚು ಸಂಸದರಿಗೆ ಸಮರ್ಪಕ ರೀತಿ ಮನವರಿಕೆ ಮಾಡಿಕೊಟ್ಟಿದೆ ಎಂದು ಹೇಳಿದರು.

ವಿದೇಶಿ ನೇರ ಬಂಡವಾಳ ಯಾವುದೇ ರೀತಿಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಇರುವುದಿಲ್ಲ. ದೇಶದಲ್ಲಿನ ಉಳಿತಾಯ ವಲಯದ ಮೊತ್ತವು ಆ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿರುತ್ತದೆ. ಸರ್ಕಾರವು ದೇಶದ ಅಭಿವೃದ್ಧಿಗಾಗಿ ಆಂತರಿಕ  ಉಳಿತಾಯದ ಮೇಲೆ ತನ್ನ ಸಂಪೂರ್ಣ ಒಡೆತನವನ್ನು ಹೊಂದಿರಬೇಕಾದ ಅಗತ್ಯವಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಈಚೆಗೆ ಹಲವಾರು ದೇಶಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಿದೆ ಎಂಬುದನ್ನು ಸರ್ಕಾರ ಅರಿಯುವ ಪ್ರಯತ್ನ ಮಾಡಿಲ್ಲ ಎಂದು ದೂರಿದರು.

ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಸ್ತಾವನೆ ವಿರುದ್ಧ ಬಹುದೊಡ್ಡ ಪ್ರಚಾರವನ್ನು ಸಂಘಟನೆ ಮಾಡುತ್ತಿದೆ. ಒಂದು ವೇಳೆ ಸರ್ಕಾರವು ಮುಂಬರುವ ದಿನಗಳಲ್ಲಿ ಈ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಸ್ತಾವನೆ ಶೇ 26ರಿಂದ 49ರ ಬಗ್ಗೆ ಜಾರಿಯಾದಲ್ಲಿ ದೇಶವ್ಯಾಪಿ ಒಂದು ದಿನದ ಮುಷ್ಕರ ಮಾಡಲಾಗುತ್ತದೆ ಎಂದು ಹೇಳಿದರು.
ಸರ್ಕಾರವು ನಾಲ್ಕು ಸಾಮಾನ್ಯ ವಿಮಾ ಕಂಪೆನಿಗಳಲ್ಲಿ (ಜಿ.ಐ.ಸಿ) ತನ್ನ ಷೇರು ಬಂಡವಾಳ ಹಿಂದಕ್ಕೆ ಪಡೆಯಲು ನಿರ್ಣಯಿಸಿದೆ. ಈ ಪ್ರಸ್ತಾವನೆ ಅನವಶ್ಯಕ. ಸಂಘಟನೆಯು ಈ ಧೋರಣೆಯನ್ನು ವಿರೋಧಿಸುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT