ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ವರ್ಷಗಳಿಂದ ಮರು ಆಯ್ಕೆ ಆದವರಿಲ್ಲ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಧಾರವಾಡ: `ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 1985ರಿಂದ ಇದುವರೆಗೆ ಯಾರೂ ಮರು ಆಯ್ಕೆಯಾಗಿಲ್ಲ.
ರೈತ ಸಂಘದ ನಾಯಕರಾಗಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ, ಹಂಗರಕಿ ದೇಸಾಯಿ ಮನೆತನದ ಎ.ಬಿ.ದೇಸಾಯಿ, ಶಿವಾನಂದ ಅಂಬಡಗಟ್ಟಿ ಅವರೂ ಸೇರಿದಂತೆ 2004ರಲ್ಲಿ ಪಕ್ಷೇತರರಾಗಿ ಚುನಾಯಿತರಾಗಿದ್ದ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಅವರವರೆಗೂ ಈ ಪರಂಪರೆ ಮುಂದುವರಿದಿದೆ. 1983ರ ಚುನಾವಣೆ ಬಳಿಕ ಒಮ್ಮೆ ಚುನಾಯಿತರಾದವರನ್ನು ಈ ಕ್ಷೇತ್ರದ ಮತದಾರರು ಮತ್ತೆ ಗೆಲ್ಲಿಸಿಲ್ಲ.

1972 ಶಾಸಕರಾಗಿದ್ದ ಕಾಂಗ್ರೆಸ್‌ನ ಸುಮತಿ ಮಡಿಮನ್ 1978ರಲ್ಲಿ ಮರು ಆಯ್ಕೆಯಾಗಿದ್ದರು. ಆ ಬಳಿಕ 1981ರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ   ಕಾಂಗ್ರೆಸ್‌ನ ಸಿ.ವಿ.ಪುಡಕಲಕಟ್ಟಿ 1983ರ ಸಾರ್ವತ್ರಿಕ ಚುನಾವಣೆಯಲ್ಲೂ ಆರಿಸಿಬಂದಿದ್ದರು. ಇವರಿಬ್ಬರನ್ನು ಹೊರತುಪಡಿಸಿದರೆ ನಂತರದ ಚುನಾವಣೆಗಳಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆದ್ದಿಲ್ಲ.   ಹೀಗಾಗಿ ಮರು ಆಯ್ಕೆಯಾದವರ ಹೆಸರಿನಲ್ಲಿ ಪುಡಕಲಕಟ್ಟಿ ಅವರ ಹೆಸರೇ ಇನ್ನೂ ಉಳಿದುಕೊಂಡಿದೆ! 1985ರಲ್ಲಿ ನಡೆದ ಚುನಾವಣೆಯಲ್ಲಿ ಮೂರನೇ ಬಾರಿಗೆ ಕಣಕ್ಕಿಳಿದ ಪುಡಕಲಕಟ್ಟಿ ಅವರನ್ನು ಅದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಎ.ಬಿ.ದೇಸಾಯಿ ಸೋಲಿಸಿದರು.

ಎ.ಬಿ.ದೇಸಾಯಿ ಮರು ಆಯ್ಕೆ ಬಯಸಿ 1989, 1994, 1998 (ಉಪ ಚುನಾವಣೆ) ಹಾಗೂ 2004ರಲ್ಲಿ ಸ್ಪರ್ಧಿಸಿದ್ದರಾದರೂ ಯಶ ಗಳಿಸಲಿಲ್ಲ. 1990ರಲ್ಲಿ  ರಾಜ್ಯ ರೈತ ಸಂಘದಿಂದ ಗೆದ್ದಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ 1994ರಲ್ಲಿ ಸೋಲುಂಡರು. 1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಶಾಲಿಯಾಗಿದ್ದ ಶಿವಾನಂದ ಅಂಬಡಗಟ್ಟಿ 2004ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ, ಅಂದು ಪಕ್ಷೇತರರಾಗಿದ್ದ ವಿನಯ ಕುಲಕರ್ಣಿ ಎದುರು ಸೋಲು ಕಂಡರು. ವಿನಯ ಕುಲಕರ್ಣಿ 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮರು ಆಯ್ಕೆ ಬಯಸಿದ್ದರು. ಮೊದಲ ಬಾರಿಗೆ ಕಣಕ್ಕಿಳಿದಿದ್ದ ಬಿಜೆಪಿಯ ಸೀಮಾ ಮಸೂತಿ ಚುನಾಯಿತರಾದರು.

ಹಾಲಿ ಶಾಸಕಿ ಸೀಮಾ ಮಸೂತಿ ಮರು ಆಯ್ಕೆ ಬಯಸಿ ಚುನಾವಣೆಗೆ ನಿಂತಿದ್ದಾರೆ. ವಿನಯ ಕುಲಕರ್ಣಿಯವರೂ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಸಜ್ಜಾಗಿದ್ದಾರೆ. ನಾಲ್ಕು ಬಾರಿ ಸೋಲು ಅನುಭವಿಸಿದ ಎ.ಬಿ.ದೇಸಾಯಿ ಈ ಬಾರಿ ತಮ್ಮ ಪುತ್ರ ಅಮೃತ ದೇಸಾಯಿ ಅವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT