ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳು

Last Updated 12 ಜುಲೈ 2012, 10:25 IST
ಅಕ್ಷರ ಗಾತ್ರ

ಸಿದ್ದಾಪುರ:`ತಾಲ್ಲೂಕಿನಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳಿರುವ 34 ಶಾಲೆಗಳಿದ್ದು, ಅವುಗಳ ಪಟ್ಟಿ ತಯಾರಿಸಿ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗುತ್ತದೆ~ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ.ನಾಯ್ಕ ಹೇಳಿದರು.

ಪಟ್ಟಣದ ತಾ.ಪಂ. ಸಭಾಭವನದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

`ಇವುಗಳಲ್ಲಿ ಎರಡು ಮಕ್ಕಳಿರುವ ಮೂರು ಶಾಲೆಗಳು, ನಾಲ್ಕು ಮಕ್ಕಳಿರುವ ಎರಡು ಶಾಲೆಗಳು, ಐದು ಮಕ್ಕಳಿರುವ ನಾಲ್ಕು ಶಾಲೆಗಳು, ಏಳು ಮಕ್ಕಳಿರುವ ಹತ್ತು ಶಾಲೆಗಳು, ಎಂಟು ಮಕ್ಕಳಿರುವ ಆರು ಶಾಲೆಗಳು, ಒಂಬತ್ತು ಮಕ್ಕಳಿರುವ ಎರಡು ಶಾಲೆಗಳು ಮತ್ತು ಹತ್ತು ಮಕ್ಕಳಿರುವ ಏಳು ಶಾಲೆಗಳು ಸೇರಿವೆ~ ಎಂದರು.

`ಕಡಿಮೆ ಸಂಖ್ಯೆಯ ಮಕ್ಕಳಿರುವ ಎಲ್ಲ ಶಾಲೆಗಳೂ ಕಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಈ ಶಾಲೆಗಳಲ್ಲಿ ಎಷ್ಟು ಶಾಲೆಗಳನ್ನು ಸಮೀಪದ ಶಾಲೆಗಳಲ್ಲಿ ವಿಲೀನಗೊಳಿಸಲಾಗುತ್ತದೆ ಎಂಬುದನ್ನು ಇಲಾಖೆ ನಿರ್ಧರಿಸುತ್ತದೆ. ಬಹುಶಃ ಈ 34 ಶಾಲೆಗಳನ್ನು ವಿಲೀನ ಮಾಡಲು ಅಸಾಧ್ಯ. ಸ್ಥಳೀಯ ಭೌಗೋಲಿಕ ಪರಿಸರದ ಸ್ಥಿತಿಯನ್ನು ಪರಿಗಣಿಸಿ ಇದನ್ನು ನಿರ್ಧರಿಸುತ್ತಾರೆ~ ಎಂದರು.

 ಕಳೆದ ಸಾರಿಯಂತೆ ಈ ಸಾರಿಯೂ ಪಟ್ಟಣದ ಬಸ್ ನಿಲ್ದಾಣದ ದುರಸ್ತಿಯ ವಿಷಯವನ್ನು ಪ್ರಸ್ತಾಪ ಮಾಡಿದ ತಾ.ಪಂ.ಉಪಾಧ್ಯಕ್ಷ ಪ್ರಸನ್ನ ಹೆಗಡೆ, `ಬಸ್ ನಿಲ್ದಾಣದ ದುರಸ್ತಿ ಕಾಮಗಾರಿ ಯಾವಾಗ ಮುಗಿಯುತ್ತದೆ~ ಎಂದು ಪ್ರಶ್ನೆ ಮಾಡಿದರು. ಇದಕ್ಕೆ  ಸದಸ್ಯೆ ಜಯಂತಿ ಹೆಗಡೆ ದನಿಗೂಡಿಸಿದರು. `ತಾಲ್ಲೂಕಿನ ಕೆಎಸ್‌ಆರ್‌ಟಿಸಿ ಮತ್ತು ಹೆಸ್ಕಾಂ ಇಲಾಖೆಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಸಂಗತಿಯನ್ನು ಸಚಿವರ ಗಮನಕ್ಕೆ ತನ್ನಿ~ ಎಂದು ಸದಸ್ಯ ವಸಂತ ನಾಯ್ಕ ಆಗ್ರಹಿಸಿದರು.

`ತಾಲ್ಲೂಕಿನಲ್ಲಿ ಜೂನ್ 10ರವರೆಗೆ 1153 ಮಿ.ಮೀ. ವಾಡಿಕೆ ಮಳೆ ಬೀಳಬೇಕಾಗಿತ್ತು. ಆದರೆ ಕೇವಲ  609.2 ಮಿ.ಮೀ. ಮಳೆ ಬಿದ್ದಿದೆ.  ಇದರಿಂದ ಬತ್ತದ ಬೇಸಾಯಕ್ಕೆ ತೊಂದರೆಯಾಗಿದೆ. ಇನ್ನೂ ಒಂದು ವಾರದೊಳಗೆ ಒಳ್ಳೆಯ ಮಳೆ ಬೀಳದಿದ್ದರೇ ಎತ್ತರ (ಮಕ್ಕಿ)ದ ಗದ್ದೆಗಳಲ್ಲಿ ಬತ್ತದ ಕೃಷಿಗೆ ತೀವ್ರ ತೊಂದರೆಯಾಗಲಿದೆ~ ಎಂದು ಕೃಷಿ ಇಲಾಖೆಯ ಅಧಿಕಾರಿ ಐ.ಕೆ.ನಾಯ್ಕ ತಿಳಿಸಿದರು.        
        
 ಸಭೆಯ ಅಧ್ಯಕ್ಷತೆಯನ್ನು ತಾ.ಪಂ.ಅಧ್ಯಕ್ಷೆ ಶಾಂತಿ ಹಸ್ಲರ್ ವಹಿಸಿದ್ದರು. ಉಪಾಧ್ಯಕ್ಷ ಪ್ರಸನ್ನ ಹೆಗಡೆ, ಸ್ಥಾಯಿ ಸಮಿತಿ ಅಧ್ಯಕ್ಷ ನೀಲಕಂಠ ಗೌಡರ್, ಸದಸ್ಯರಾದ ಬಶೀರ್ ಸಾಬ್,ಜಯಂತಿ ಹೆಗಡೆ, ವಸಂತ ನಾಯ್ಕ,  ವಿ.ಎಸ್.ಹೆಗಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT