ಶನಿವಾರ, ಜನವರಿ 18, 2020
19 °C

370ನೇ ಕಲಂ: ಚರ್ಚೆ ನಡೆಯಲಿ– ನರೇಂದ್ರ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು (ಪಿಟಿಐ): ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ಕಲಂ  ಅಗತ್ಯತೆ ಕುರಿತು ಸಂಸತ್ತಿ­ನಲ್ಲಿ ವಿಸ್ತೃತ ಚರ್ಚೆ ನಡೆಯ­ಬೇಕೆಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಸಂವಿಧಾನದ 370ನೇ ಕಲಂಗೆ ಸಂಬಂಧಿಸಿದಂತೆ ತನ್ನ ಈ ಹಿಂದಿನ ಧೋರಣೆ ಸಡಿಲಿಸಿದೆ.ಭಾನುವಾರ ನಡೆದ ‘ಲಲ್‌ಕಾರ್‌’ ರ್‍ಯಾಲಿಯಲ್ಲಿ ಮಾತನಾಡಿದ ಅವರು, 370ನೇ ಕಲಂನ ವಿವಿಧ ಮಗ್ಗಲು ಕುರಿತು ಚರ್ಚೆ ನಡೆಯಬೇಕು ಎಂದರು. ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜ್‌­ನಾಥ್‌ ಸಿಂಗ್‌ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಒದಗಿಸುವ 370ನೇ ಕಲಂ­ನಿಂದ ನಿಜಕ್ಕೂ ಲಾಭ­ವಿದೆಯೇ ಎಂದು ಪ್ರಶ್ನಿಸಿದ್ದರು. ಬಳಿಕ ಮೋದಿ ಅವರು ಇದೇ ವಿಷಯವನ್ನು ಮತ್ತೆ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದರು.‘ದೇಶದ ಇತರ ಭಾಗಗಳಲ್ಲಿ ಇರು­ವಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಇಲ್ಲ. ರಾಜ್ಯದಲ್ಲಿ ಪ್ರವಾಸೋದ್ಯಮ ಸಂಪೂ­ರ್ಣ ನೆಲಕಚ್ಚಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ‘ಮೋದಿ ಸುಳ್ಳುಗಾರ’: ರಾಜ್ಯದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು­­ಗಳಿಲ್ಲ ಎಂದಿರುವ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ‘ಮೋದಿ ಸುಳ್ಳು ಹೇಳುತ್ತಿ­ದ್ದಾರೆ.

ವಾಸ್ತ­ವ ಅರಿಯದೇ ಮನಬಂದಂತೆ ಮಾತನಾಡುವುದು ಸರಿ­ಯಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ. ‘ರಾಜ್ಯದಲ್ಲಿ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲಕಚ್ಚಿದೆ ಎಂಬ ಆರೋಪದಲ್ಲಿ ಹುರುಳಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)