ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371 ನೇ ಕಲಂ: ನಾಳೆ ರೈಲು ತಡೆ

Last Updated 6 ಜನವರಿ 2012, 6:25 IST
ಅಕ್ಷರ ಗಾತ್ರ

ಯಾದಗಿರಿ: ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ 371 ನೇ ಕಲಂಗೆ ತಿದ್ದುಪಡಿ ತರುವಂತೆ ಆಗ್ರಹಿಸಿ ಕನ್ನಡ ಒಕ್ಕೂಟವು ಜ.7 ರಂದು ರಾಜ್ಯದಾದ್ಯಂತ ರೈಲು ತಡೆ ನಡೆಸಲು ಕರೆ ನೀಡಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ ತಿಳಿಸಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹೈದರಾಬಾದ್ ಕರ್ನಾಟಕದಲ್ಲಿ ಈ ಹೋರಾಟದ ನೇತೃತ್ವವನ್ನು ಕರವೇ ವಹಿಸಿಕೊಂಡಿದ್ದು, ಅಂದು ಎಲ್ಲೆಡೆ ರೈಲು ತಡೆ ಚಳವಳಿ ನಡೆಸಲಾಗುವುದು. ಇದಕ್ಕೆ ಎಲ್ಲ ಸಂಘಟನೆಗಳು, ಸಂಸ್ಥೆಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲರ ನೇತೃತ್ವದಲ್ಲಿ ಜ. 24 ರಂದು ಹೈದರಾಬಾದ್ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಇದಕ್ಕೂ ಕರವೇ ಸಂಪೂರ್ಣ ಬೆಂಬಲ ನೀಡಲಿದೆ. ಹೋರಾಟದಲ್ಲಿ ವಿಶೇಷವಾಗಿ ಭಾಗವಹಿಸಿ ಬಂದ್ ಯಶಸ್ವಿಗೊಳಿಸಲಾಗುವುದು ಎಂದು ಹೇಳಿದರು.

ಸಂವಿಧಾನದ 371 ನೇ ಕಲಂಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರದ ಮೇಲೆ ಕರವೇ ಸಂಘಟನೆ ಒತ್ತಡ ಹೇರುತ್ತಲೇ ಇದೆ. ಇದಕ್ಕಾಗಿ ಹಲವಾರು ಬಾರಿ ಪ್ರತಿಭಟನೆ, ಹೋರಾಟಗಳನ್ನು ನಡೆಸಲಾಗಿದೆ. ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯು ದೆಹಲಿಯಲ್ಲಿ ಧರಣಿ ನಡೆಸಿದ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಈ ಭಾಗದ ಎಲ್ಲ ಜಿಲ್ಲೆಗಳಲ್ಲಿ ರೈಲು ತಡೆ, ಮುತ್ತಿಗೆಯಂತಹ ಕಾರ್ಯಕ್ರಮಗಳು ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು ಎಂದು ತಿಳಿಸಿದರು.
ಸಂವಿಧಾನದ 371 ನೇ ಕಲಂ ತಿದ್ದುಪಡಿ ಹಾಗೂ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಸಂಘಟನೆಯ ನೇತೃತ್ವದಲ್ಲಿಯೇ ಹೋರಾಟ ನಡೆದರೂ ಕರ್ನಾಟಕ ರಕ್ಷಣಾ ವೇದಿಕೆ ಅದಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಕಟಿಸಿದರು.
ಯಾದಗಿರಿಗೆ ಜಿಲ್ಲೆಗೆ ಘೋಷಿಸಲಾದ ರೂ.300 ಕೋಟಿ ಪ್ಯಾಕೇಜ್‌ನ ಹಣ ಇನ್ನೂ ಜಿಲ್ಲೆಗೆ ಹುಸಿಯಾಗಿದೆ. ಈ ಅನುದಾನವನ್ನು ಕೂಡಲೇ ಜಿಲ್ಲೆಗೆ ಬಿಡುಗಡೆ ಮಾಡಿಸಲು ಜಿಲ್ಲೆಯ ಶಾಸಕರು, ಸಚಿವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ಖಂಡನೀಯ. ಕೂಡಲೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕರವೇ ಎಲ್ಲ ಕ್ಷೇತ್ರಗಳಲ್ಲೂ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಶಹಾಪುರ ತಾಲ್ಲೂಕಿನ ಕೆರೆಗಳ ಅಭಿವೃದ್ಧಿಯಲ್ಲಿ ಅವ್ಯವಹಾರ ಆಗಿದ್ದು, ಕೂಡಲೇ ತನಿಖೆ ಆಗಬೇಕು. ಯಾದಗಿರಿಯ ಶಾಸ್ತ್ರಿ ವೃತ್ತದ ಅಭಿವೃದ್ಧಿ, ರಸ್ತೆ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಆದಷ್ಟು ಶೀಘ್ರದಲ್ಲಿಯೇ ಮಾಡಬೇಕು ಎಂದ ಒತ್ತಾಯಿಸಿದರು.
ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದವರು ಯಾವುದೇ ಸಂಘಟನೆಗೆ ಸೇರಿದ್ದರೂ, ಅವರು ದೇಶದ್ರೋಹಿಗಳು ಎಂದು ಕಿಡಿ ಕಾರಿದ ಅವರು, ಜಿಲ್ಲೆಯ ದೋರನಳ್ಳಿಯಲ್ಲಿರುವ ಹಾಲು ಶಿಥಲೀಕರಣ ಘಟಕದ ಪುನಶ್ಚೇತನಕ್ಕೆ ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ. ಪಾಟೀಲ ತಡಿಬಿಡಿ, ಶರಣು ಇಟಗಿ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT