ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಸಲು ಕ್ರಮ

Last Updated 21 ಜನವರಿ 2012, 19:45 IST
ಅಕ್ಷರ ಗಾತ್ರ

ಯಲಹಂಕ: ಎತ್ತಿನಹೊಳೆ ಯೋಜನೆಯಡಿ 10.5 ಟಿಎಂಸಿ ನೀರಿಗೆ ಬದಲಾಗಿ 25 ಟಿಎಂಸಿ ನೀರನ್ನು ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಹರಿಸಲು ರಾಜ್ಯ ಸರ್ಕಾರದೊಂದಿಗೆ ವ್ಯವಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ. ವೀರಪ್ಪಮೊಯಿಲಿ ಅವರು ಹೇಳಿದರು.

ಉಪನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರನ್ನು ಹರಿಸುವ ಈ ಯೋಜನೆಗೆ ಅಂದಾಜು 1700 ಕೋಟಿ ರೂಪಾಯಿ ವೆಚ್ಚವಾಗಲಿದೆ. ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಿದರೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಯೋಜನೆ ವಿರುದ್ಧ ಎದ್ದಿರುವ ಅಪಸ್ವರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳ ಶಾಸಕರ ಸಭೆ ಕರೆದು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಗುವುದು. ಒಟ್ಟಿನಲ್ಲಿ ಈ ಭಾಗಕ್ಕೆ ನೀರು ಬರಬೇಕಾಗಿರುವುದು ಅತಿ ಮುಖ್ಯ ಎಂದರು.

ಶಾಸಕ ಎಸ್.ಆರ್.ವಿಶ್ವನಾಥ್, ಯಲಹಂಕ ಕ್ಷೇತ್ರದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಎನ್‌ಇಎಸ್ ಕಚೇರಿ ಬಳಿ ಜಾಗ ಗುರುತಿಸಲಾಗಿದೆ. ಅಳ್ಳಾಲಸಂದ್ರದಲ್ಲಿರುವ ಕೆಎಚ್‌ಬಿ ಬಡಾವಣೆಯ ಜಾಗವನ್ನು ಸರ್ಕಾರದಿಂದ ವರ್ಗಾವಣೆ ಮಾಡಿಸಿಕೊಂಡು, ಪ್ರವಾಸಿ ಮಂದಿರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ದಯಾನಂದರೆಡ್ಡಿ, ಮಾಜಿ ಶಾಸಕ ವಿ.ಕೃಷ್ಣಪ್ಪ, ಬೆಂಗಳೂರು ಉತ್ತರ (ಹೆಚ್ಚುವರಿ) ತಹಸೀಲ್ದಾರ್ ಬಿ.ವೆಂಕಟೇಶ್, ಬಿಬಿಎಂಪಿ ಸದಸ್ಯ ಎಂ.ಮುನಿರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT