ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

94ಸಿ ಮಸೂದೆಗೆ ಬೀಳದ ಅಂಕಿತ: ಬಿಜೆಪಿ ಪ್ರತಿಭಟನೆ

Last Updated 9 ಅಕ್ಟೋಬರ್ 2012, 8:50 IST
ಅಕ್ಷರ ಗಾತ್ರ

ಹೆಬ್ರಿ: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಕಟ್ಟಿ ವಾಸ್ತವ್ಯ ಹೂಡಿರುವ ಬಡಜನರಿಗೆ ಹಕ್ಕುಪತ್ರ ನೀಡುವ ಸರಕಾರದ ಭೂ ಕಂದಾಯ 94ಸಿ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದೆ ಹಿಂತಿರುಗಿಸಿದ ವಿರುದ್ಧ ಹೆಬ್ರಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಹೆಬ್ರಿಯ ಪ್ರತಿಭಟನಾ ಸ್ಥಳದಲ್ಲಿ ಮನವಿ ಸ್ವೀಕರಿಸಿದ ತಹಶೀಲ್ದಾರ್ ಜಗನ್ನಾಥ್ ರಾವ್ ಫಲಾನುಭವಿಗಳ ಬೇಡಿಕೆಗೆ ಸ್ಪಂದಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರ ಗಮನಕ್ಕೆ ತರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ವಿ. ಸುನಿಲ್ ಕುಮಾರ್, ಇದು ರಾಜ್ಯದ 4 ಲಕ್ಷ, ತಾಲ್ಲೂಕಿನ 4ಸಾವಿರ ಬಡ ಫಲಾನುಭವಿಗಳ ಗಂಭೀರ ಸಮಸ್ಯೆ.

ರಾಜ್ಯ ಸರಕಾರ ಬಡವರ ಹಿತ ಕಾಯುವ ನಿಟ್ಟಿನಲ್ಲಿ ಉಭಯ ಸದನಗಳಲ್ಲಿ ಮಸೂದೆ ಮಂಡಿಸಿ ಬಹುಮತದಿಂದ ಪಾಸು ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದರೂ ಕಾಂಗ್ರೆಸ್ ಕೈಗೊಂಬೆ ರಾಜ್ಯಪಾಲರು ಅಂಕಿತ ಹಾಕದೆ ಜನರ ಮೂಲಭೂತ ಬೇಡಿಕೆಗೆ ಕೊಡಲಿಯೇಟು ನೀಡಿದ್ದು ದುರದೃಷ್ಟಕರ ಎಂದರು.

ಕಂದಾಯ ಸಚಿವ ಕೆ.ಎಸ್.ಈಶ್ವರಪ್ಪ ಈಗಾಗಲೇ ಘೋಷಿಸಿದಂತೆ ಮತ್ತೆ ಈ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಮನೆ ಕಟ್ಟಲು 75 ಸಾವಿರ ಸಹಾಯಧನ ಕೊಡಿಸುವ ಆಶ್ವಾಸನೆ ನೀಡಿದರು.

ರಾಜಕಾರಣ ಮಾಡಲ್ಲ: ಬಡಜನರನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲ್ಲ. ಮಸೂದೆಯಲ್ಲಿ ತೊಡಕಿದೆ ಎನ್ನುವವರು ವಿಧಾನ ಸಭೆಯಲ್ಲಿ ಆಕ್ಷೇಪಿಸಬೇಕಿತ್ತು. ಕಾಲ ಮಿಂಚಿಲ್ಲ. ಓಟು ಪಡೆದ ತಪ್ಪಿಗೆ ಇನ್ನಾದರೂ ಬಡಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ರಾಜ್ಯಪಾಲರ ನಿಲುವನ್ನು ಖಂಡಿಸಿ ನಮ್ಮಂದಿಗೆ ಕೈಜೋಡಿಸಿ ಎಂದು ಶಾಸಕರಿಗೆ ಮಾಜಿ ಶಾಸಕರು ಸವಾಲು ಹಾಕಿದರು.

ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟ ಪಕ್ಷವಲ್ಲ. ವಂಶಪಾರಂಪರ್ಯ ಆಡಳಿತ ನೆಚ್ಚಿಕೊಂಡ ಪಕ್ಷ. ಬಡವರ ಹೆಸರಲ್ಲಿ ಬಲಿಷ್ಟರಾದ ರಾಜಕಾರಣಿಗಳ ಪಕ್ಷ ಅದು ಎಂದು ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ಹೇಳಿದರು.

ರಾಜ್ಯಪಾಲರು, ಕೇಂದ್ರದ ಕಾಂಗ್ರೆಸ್ ನೇತೃತ್ವ ಸರ್ಕಾರದ ಬೆಲೆ ಏರಿಕೆ ನೀತಿ ಮತ್ತು ಕಾಂಗ್ರೆಸ್ ನಿಲುವನ್ನು ಛೇಡಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿದರು.
ಎಪಿಎಂಸಿ ಅಧ್ಯಕ್ಷ ಆನಂದ ಬಂಡೀಮಠ, ಪುರಸಭಾ ಸದಸ್ಯ ಸುರೇಶ್ ಮಡಿವಾಳ್, ರೈತಮೋರ್ಚಾ ಪ್ರದಾನ ಕಾರ್ಯದರ್ಶಿ ಅಶೋಕ ಕುಮಾರ್, ನಾರಾಯಣ ಪೂಜಾರಿ, ಜಿ.ಪಂ. ಸದಸ್ಯ ಉದಯ ಎಸ್ ಕೋಟ್ಯಾನ್, ಶಂಕರ ಶೆಟ್ಟಿ ಮಾತನಾಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಅಂತೋನಿ ಡಿಸೋಜಾ, ಪ್ರದೀಪ್ ಕೋಟ್ಯಾನ್, ಉದ್ಯಮಿ ಸತೀಶ್ ಪೈ, ಶಕ್ತಿ ಕೇಂದ್ರ ಅಧ್ಯಕ್ಷ ಸುಧಾಕರ ಹೆಗ್ಡೆ, ತಾ.ಪಂ. ಸದಸ್ಯರಾದ ಮಮತಾ ನಾಯಕ್, ಪ್ರಮೀಳಾ ಹರೀಶ್, ಚಂದ್ರಶೇಖರ ಶೆಟ್ಟಿ, ವರಂಗ ಪಂಚಾಯಿತಿ ಅಧ್ಯಕ್ಷ ರತ್ನಾಕರ ಪೂಜಾರಿ ಮೊದಲಾದವರು ಇದ್ದರು.

ದೋಷ ಸರಿಪಡಿಸಿ- ಬ್ಲಾಕ್ ಕಾಂಗ್ರೆಸ್
ಹೆಬ್ರಿ:
ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿ ರಾಜ್ಯಪಾಲರಿಗೆ ಸಲ್ಲಿಸಿದ 94ಸಿ ವಿಧೇಯಕ ತಪ್ಪಿನಿಂದ ಕೂಡಿದೆ. ತಿದ್ದುಪಡಿಯ 6(ಸಿ)ಯ ಪ್ರಕಾರ ಗ್ರಾಮ ಪಂಚಾಯಿತಿಗಳ ಹೊರ ವರ್ತುಲದಿಂದ 3 ಕಿ.ಮೀ ಮಿತಿಯೊಳಗೆ ಅನಧೀಕೃತ ಕಟ್ಟಡಗಳನ್ನು ಸಕ್ರಮ ಗೊಳಿಸತಕ್ಕದಲ್ಲ ಎಂಬ ತಪ್ಪು ಉಲ್ಲೇಖವಿದೆ. 

  ಅದನ್ನು ಸರಿಪಡಿಸದೆ ರಾಜ್ಯಪಾಲರು ವಿಧೇಯಕಕ್ಕೆ ಅಂಕಿತ ಹಾಕಿ ಅನುಮತಿ ನೀಡಿದರೂ ಜನರಿಗೆ ಪ್ರಯೋಜನವಾಗುವುದಿಲ್ಲ. ಹೆಚ್ಚಿನ ಗ್ರಾಮ ಪಂಚಾಯಿತಿಗಳ ಹೊರ ವರ್ತುಲ ಹೆಚ್ಚು ಕಡಿಮೆ 3 ಕಿ.ಮೀ ವ್ಯಾಪ್ತಿ ಯೊಳಗೇ ಇರುತ್ತದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಹೇಳಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT