ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೂ ನೌಕರಿ ಸಿಕ್ಕಿಲ್ಲಾರಿ!

Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  ಮೀಸಲಾತಿಯನ್ನು ತಮಗೆ ಬೇಕಾದ ಹಾಗೆ ಬಳಸುವ ಕೌಶಲ ಕೆಪಿಎಸ್‌ಸಿಯಲ್ಲಿ ನಡೆಯುತ್ತದೆ ಎಂಬುದಕ್ಕೆ ಗುಲ್ಬರ್ಗದ ಚಂದ್ರಕಾಂತ ಮತ್ತು ಗದಗದ ಡಾ.ಮೊಹಮ್ಮದ್ ಜಾಫರ್ ಅವರ ಪ್ರಕರಣಗಳು ಒಳ್ಳೆಯ ಉದಾಹರಣೆ.

2007ರಲ್ಲಿ ಪ್ರಥಮದರ್ಜೆ ಕಾಲೇಜು ಉಪನ್ಯಾಸಕರ ಹುದ್ದೆಗಳಿಗೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿದಾಗ ಇವರಿಬ್ಬರೂ ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅಂಗವಿಕಲರ ಮೀಸಲಾತಿಯಲ್ಲಿ ತಮಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಅವರಿಗೆ ಇತ್ತು. ಯಾಕೆಂದರೆ ಎಂ ಕಾಂ ನಲ್ಲಿ ಇಬ್ಬರೂ ಉತ್ತಮ ಅಂಕ ಪಡೆದಿದ್ದರು. ಎಂಫಿಲ್ ಪದವಿ ಇತ್ತು. ಜಾಫರ್ ಪಿಎಚ್‌ಡಿ ಮಾಡಿದ್ದರು.

ಚಂದ್ರಕಾಂತ್ ಪಿಎಚ್‌ಡಿ ಮಾಡುತ್ತಿದ್ದರು. ಆದರೆ ಆಯ್ಕೆ ಪಟ್ಟಿ ಪ್ರಕಟವಾದಾಗ ಅವರ ನಂಬಿಕೆ ಹುಸಿಯಾಯಿತು. ಇಬ್ಬರಿಗೂ ನೌಕರಿ ಸಿಗಲಿಲ್ಲ.

ಚಂದ್ರಕಾಂತ ಪೋಲಿಯೊ ಪೀಡಿತರು. ಅವರಿಗೆ ನಡೆಯಲು ಬರುವುದಿಲ್ಲ. ಕೃತಕ ಸಾಧನದ ಅಳವಡಿಸಿಕೊಂಡು ನಡೆಯುತ್ತಾರೆ. ಡಾ.ಮೊಹಮ್ಮದ್ ಜಾಫರ್ ಅವರಿಗೆ ಒಂದು ಕೈ ಇಲ್ಲ.  ಜಾಫರ್ ಅವರದ್ದು ಒಟ್ಟಾರೆ ಶೇ 67 ಅಂಕ, ಚಂದ್ರಕಾಂತ್ ಅವರದ್ದು ಶೇ 68.40 ಅಂಕ. ಆದರೆ ಇವರಿಗಿಂತ ಕಡಿಮೆ ಅಂಕ ಪಡೆದವರಿಗೆ ಕೆಲಸ ಸಿಕ್ಕಿತು.

ಇದನ್ನು ಪ್ರಶ್ನಿಸಿ ಕೆಪಿಎಸ್‌ಸಿಗೆ ಪತ್ರ ಬರೆದರೆ ಸೂಕ್ತ ಉತ್ತರ ಬರಲಿಲ್ಲ. ನಂತರ ಅವರು ರಾಷ್ಟ್ರಪತಿಗೆ ಪತ್ರ ಬರೆದರು.
ರಾಷ್ಟಪತಿ ಕಚೇರಿಯಿಂದ ಕೆಪಿಎಸ್‌ಸಿಗೆ `ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ' ಎಂಬ ಸೂಚನೆ ಬಂತು. ಆಗ ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಎಲ್.ಎಸ್. ಕುಕ್ಕೇನ್ ಅವರು ಚಂದ್ರಕಾಂತ್ ಅವರಿಗೆ ಸ್ಪಷ್ಟನೆಯೊಂದನ್ನು ನೀಡಿ `ಸಾಮಾನ್ಯ ಅರ್ಹತೆಯ ಅಂಗವಿಕಲರಿಗೆ 9 ಹುದ್ದೆಗಳು ಮೀಸಲಾಗಿದ್ದವು.

ಅವುಗಳಲ್ಲಿ 3 ಹುದ್ದೆಗಳನ್ನು ದೃಷ್ಟಿದೋಷದವರಿಗೆ, 3 ಹುದ್ದೆಗಳನ್ನು ದೈಹಿಕ ಅಂಗವಿಕಲರಿಗೆ ಹಾಗೂ 3 ಹುದ್ದೆಗಳನ್ನು ಶ್ರವಣ ದೋಷವುಳ್ಳವರಿಗೆ ಮೀಸಲು ಇಡಲಾಗಿತ್ತು. ಶ್ರವಣ ದೋಷ ಇರುವವರು ಲಭ್ಯವಿಲ್ಲದ ಕಾರಣ ಆ 3 ಹುದ್ದೆಗಳನ್ನೂ ದೈಹಿಕ ಅಂಗವಿಕಲರಿಗೆ ನೀಡಲಾಗಿದೆ. ನೌಕರಿ ಪಡೆದ ಅಂಗ ವೈಕಲ್ಯ ಹೊಂದಿದ ಕಡೆಯ ಅಭ್ಯರ್ಥಿ ಅಂಕ ಶೇ 71.70 ಆಗಿದ್ದು ತಮ್ಮ ಅಂಕ ಶೇ 68.40 ಆಗಿದ್ದರಿಂದ ತಮಗೆ ನೌಕರಿ ಸಿಕ್ಕಿಲ್ಲ' ಎಂದು ತಿಳಿಸಿದರು.

ಆದರೆ ಚಂದ್ರಕಾಂತ್ ಮತ್ತು ಮೊಹಮ್ಮದ್ ಜಾಫರ್ ಅವರು ಇದನ್ನು ಒಪ್ಪಲಿಲ್ಲ. ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಎಲ್ಲ ಮಾಹಿತಿಯನ್ನು ಪಡೆದಾಗ ತಮಗೆ ಅನ್ಯಾಯವಾಗಿರುವುದು ಖಚಿತವಾಯಿತು. ಅದಕ್ಕೆ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ದೂರು ಸಲ್ಲಿಸಿದರು.

ಮೀಸಲಾತಿ ಸೌಲಭ್ಯವನ್ನು ಪಡೆಯುವ ಅಭ್ಯರ್ಥಿ ಅತಿ ಹೆಚ್ಚು ಅಂಕ ಪಡೆದರೆ ಸಾಮಾನ್ಯ ವರ್ಗದಲ್ಲಿಯೇ ಆಯ್ಕೆಯಾಗುತ್ತಾರೆ.
ಪರಿಶಿಷ್ಟ, ಹಿಂದುಳಿದ ವರ್ಗ ಅಥವಾ ಅಂಗವಿಕಲರ ಮೀಸಲಾತಿ ಸೌಲಭ್ಯ ಪಡೆಯುವರಿಗೂ ಇದು ಅನ್ವಯವಾಗುತ್ತದೆ. ಶರ್ಲಿ ಶುಭಾ ಎಂಬ ಅಂಗವಿಕಲ ಅಭ್ಯರ್ಥಿ ಒಟ್ಟಾರೆ 74.84 ಅಂಕ ಪಡೆದಿದ್ದರು. ಇವರು ಸಾಮಾನ್ಯ ವರ್ಗದಲ್ಲಿಯೇ ಆಯ್ಕೆಯಾಗಬೇಕಿತ್ತು.
ಯಾಕೆಂದರೆ ಸಾಮಾನ್ಯ ವರ್ಗದ ಮಹಿಳೆಯ ಅತಿ ಹೆಚ್ಚು ಅಂಕ ಶೇ 74.80 ಆಗಿತ್ತು. ಆದರೆ ಶರ್ಲಿ ಶುಭಾ ಅವರನ್ನು ಅಂಗವಿಕಲರ ಕೋಟಾದಲ್ಲಿಯೇ ಆಯ್ಕೆ ಮಾಡಲಾಗಿದೆ ಎಂದು ಚಂದ್ರಕಾಂತ್ ಕೆಎಟಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಾವು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಯನ್ನೂ ಅವರು ನೀಡಿದ್ದಾರೆ.

ಅಂಗವಿಕಲ ಅಭ್ಯರ್ಥಿಗಳಿಗೆ 9 ಹುದ್ದೆಗಳು ಮೀಸಲಾಗಿದ್ದವು. ಯಾವುದೇ ಅಂಗವಿಕಲರನ್ನು ಈ ಮೀಸಲಾತಿ ಅನ್ವಯ ಆಯ್ಕೆ ಮಾಡಬಹುದಾಗಿತ್ತು. ಆದರೆ ಹಾಗೆ ಮಾಡದೆ ತಮಗೆ ಅನ್ಯಾಯ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಂಗವಿಕಲ ಅಭ್ಯರ್ಥಿಗಳನ್ನು ಅದೇ ವರ್ಗದಲ್ಲಿ ಆಯ್ಕೆ ಮಾಡದೆ ಅವರನ್ನೂ ಸಹ ಅಂಗವಿಕಲರ ಕೋಟಾದಲ್ಲಿಯೇ ಆಯ್ಕೆ ಮಾಡಿದ್ದು ಕೂಡ ತಮಗೆ ಅನ್ಯಾಯವಾಗಲು ಕಾರಣ ಎಂದು ಅವರು ವಿವರಿಸಿದ್ದಾರೆ.

ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ 2 ಹುದ್ದೆಗಳು ಪರಿಶಿಷ್ಟ ಜಾತಿ ಅಂಗವಿಕಲರಿಗೆ ಮೀಸಲಾಗಿತ್ತು. ಅದರಲ್ಲಿ ದೃಷ್ಟಿ ಮಾಂದ್ಯರಿಗೂ ಅವಕಾಶವಿತ್ತು. ಆದರೆ ದೃಷ್ಟಿ ಮಾಂದ್ಯರನ್ನು ಈ ಮೀಸಲಾತಿಯಲ್ಲಿ ಆಯ್ಕೆಮಾಡದೆ ಇರುವುದರಿಂದ ಕೂಡ ಅನ್ಯಾಯವಾಗಿದೆ. ಈ ರೀತಿ ಆಯ್ಕೆಯಾದವರ ಅಂಕ ಶೇ 62.64. ಅವರಿಗಿಂತ ಹೆಚ್ಚು ಅಂಕ ಪಡೆದ ತಮಗೆ ನೌಕರಿ ನೀಡಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
2008ರಲ್ಲಿಯೇ ಚಂದ್ರಕಾಂತ್ ಮತ್ತು ಮೊಹಮ್ಮದ್ ಜಾಫರ್ ಅವರು ಕೆಎಟಿಗೆ ತಮ್ಮ ದೂರು ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ.

`ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮೀಸಲಾತಿ ಸೌಲಭ್ಯ ಒದಗಿಸಲು ಎಲ್ಲ ನಿಯಮಗಳನ್ನು ಉಲ್ಲಂಘನೆ ಮಾಡುವ ಕೆಪಿಎಸ್‌ಸಿ, ಕಾನೂನು ದೃಷ್ಟಿಯಿಂದ ನಮಗೆ ಸಿಗಬೇಕಾದ ಉದ್ಯೋಗವನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸಿದೆ' ಎಂದು ಅವರು ದೂರುತ್ತಾರೆ.

ಕಾಲು ಪೊಲಿಯೊ ಪೀಡಿತವಾಗಿದ್ದರೂ ಚಂದ್ರಕಾಂತ್ ಅವರು ಛಲ ಬಿಡದೆ ವಿದ್ಯಾಭ್ಯಾಸ ಪೂರೈಸಿದ್ದಾರೆ. ಗುಲ್ಬರ್ಗದ ವಾಣಿಜ್ಯ ಕಾಲೇಜಿನಲ್ಲಿ 4 ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 10 ವರ್ಷಗಳಿಂದ ಕೆಎಸ್‌ಎಫ್‌ಸಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದಾರೆ. `ಕಾಲು, ಕೈ ಇಲ್ಲದವರನ್ನು ನೋಡಿಯೂ ಕೆಪಿಎಸ್‌ಸಿಯಲ್ಲಿರುವವರಿಗೆ ಕರುಣೆ ಬರಲಿಲ್ಲ' ಎಂದು ಅವರು ವಿಷಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT