ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ದಿನವೂ ನಾಮಪತ್ರ ಮಹಾಪೂರ

ಬೆಂಬಲಿಗರೊಂದಿಗೆ ರೋಡ್ ಷೋ, ಮೊಳಗಿದ ಜಯಘೋಷ, ವಿವಿಧೆಡೆ ಮೆರವಣಿಗೆ
Last Updated 18 ಏಪ್ರಿಲ್ 2013, 12:43 IST
ಅಕ್ಷರ ಗಾತ್ರ

ಹೊಳಲ್ಕೆರೆ: ಸಾವಿರಾರು ಬೆಂಬಲಿಗರೊಂದಿಗೆ ರೋಡ್ ಷೋ ನಡೆಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎಚ್. ಆಂಜನೇಯ ಬುಧವಾರ ನಾಮಪತ್ರ ಸಲ್ಲಿಸಿದರು.

ಮುಖ್ಯವೃತ್ತದಿಂದ ಬಿಪಿ ಕಾಲೇಜಿನವರೆಗೆ ಕಿಕ್ಕಿರಿದು ನೆರೆದಿದ್ದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳ ಜಯಘೋಷಗಳು ಮುಗಿಲು ಮುಟ್ಟಿದ್ದವು.

ಬೆಳಿಗಿನಿಂದಲೇ ಕ್ಷೇತ್ರದ ನಾನಾ ಭಾಗಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯ ಜನ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಬಿಪಿ ಕಾಲೇಜು ಮುಂಭಾಗ ಜಮಾಯಿಸಿದ್ದರು. ಮಧ್ಯಾಹ್ನ 12ಕ್ಕೆ ಅಭ್ಯರ್ಥಿ ಎಚ್. ಆಂಜನೇಯ ಪಕ್ಷದ ಮುಖಂಡರೊಂದಿಗೆ ರೋಡ್ ಷೋ ಹೊರಟು ಅಕ್ಕಪಕ್ಕದಲ್ಲಿ ನೆರೆದಿದ್ದ ಜನತೆಗೆ ಕೈಮುಗಿದು ಆಶೀರ್ವಾದ ಬೇಡಿದರು. ಪತ್ನಿ, ಮಗಳು ಸೇರಿದಂತೆ ಕುಟುಂಬದ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆದರು.

ಸುಮಾರು 2 ಗಂಟೆ ನಡೆದ ಮೆರವಣಿಗೆಯ ಉದ್ದಕ್ಕೂ ಜನ ತಮ್ಮ ಮುಖಂಡರಿಗೆ ಜೈಕಾರ ಹಾಕಿದರು. ಇಡೀ ಪಟ್ಟಣ ಜನರಿಂದ ತುಂಬಿದ್ದರಿಂದ ವಾಹನಗಳನ್ನು ಕಳಿಸಲು ಪೊಲೀಸರು ಹರಸಾಹಸಪಟ್ಟರು. ಕೆಲವು ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಿದವು.

ಮಧ್ಯಾಹ್ನ 2.15ಕ್ಕೆ ನಾಮಪತ್ರ ಸಲ್ಲಿಸಿದ ಎಚ್. ಆಂಜನೇಯ ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನ ಇತಿಹಾಸದಲ್ಲೇ ಇಷ್ಟು ಜನ ಸೇರಿದ ಉದಾಹರಣೆ ಇಲ್ಲ. ಇದು ಕಾಂಗ್ರೆಸ್ ಗೆಲುವಿನ ಸ್ಪಷ್ಟ ದಿಕ್ಸೂಚಿ. ನಾನು ಸರಳವಾಗಿ ನಾಮಪತ್ರ ಸಲ್ಲಿಸಬೇಕು ಎಂದುಕೊಂಡಿದ್ದರೂ, ಸ್ವಪ್ರೇರಣೆಯಿಂದ ಅಭಿಮಾನ ಇಟ್ಟು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎದ್ದಿದ್ದು, ಕ್ಷೇತ್ರದಲ್ಲೂ ಬದಲಾವಣೆಯ ಗಾಳಿ ಬೀಸಿದೆ. ರೈತರು, ಬಡವರು, ನೊಂದವರ ಪರವಾದ ಸ್ಥಿರ ಸರ್ಕಾರವನ್ನು ಜನ ನಿರೀಕ್ಷಿಸುತ್ತಿದ್ದಾರೆ. ಜನರ ನಂಬಿಕೆ, ವಿಶ್ವಾಸಗಳನ್ನು ಉಳಿಸಿಕೊಂಡು ಹೋಗಲು ಕಾಂಗ್ರೆಸ್ ಕಂಕಣಬದ್ಧವಾಗಿ ನಿಂತಿದೆ. ನನಗೆ ಬಲ ತುಂಬಿದ ಎಲ್ಲರಿಗೂ ಅಬಾರಿಯಾಗಿದ್ದೇನೆ ಎಂದು ಭಾವುಕರಾಗಿ ನುಡಿದರು.

ಕಾಂಗ್ರೆಸ್ ಮುಖಂಡ ಜಿ.ಎಸ್. ಮಂಜುನಾಥ್, ಸೇತೂರಾಂ, ಮಾಜಿ ಶಾಸಕ ಎಂ.ಬಿ. ತಿಪ್ಪೇರುದ್ರಪ್ಪ, ಮಹಬೂಬ್ ಪಾಷಾ, ಎಚ್.ಡಿ. ರಂಗಯ್ಯ, ಎಸ್‌ಎಂಎಲ್ ತಿಪ್ಪೇಸ್ವಾಮಿ, ಕಾಟಿಹಳ್ಳಿ ಶಿವಕುಮಾರ್, ಡಿ.ಕೆ. ಶಿವಮೂರ್ತಿ, ಲೋಕೇಶ್, ಜಿ.ಪಂ. ಸದಸ್ಯರಾದ ಭಾರತೀ ಕಲ್ಲೇಶ್, ಇಂದಿರಾ ಕಿರಣ್, ಎಸ್.ಜೆ. ರಂಗಸ್ವಾಮಿ, ಪಾರ್ವತಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರುದ್ರಪ್ಪ, ನಾರಪ್ಪ, ಹನುಮಂತಪ್ಪ, ಪ್ರಕಾಶ್, ಅಶೋಕ್, ಶರತ್ ಕುಮಾರ್, ರಂಗಸ್ವಾಮಿ, ಈಶ್ವರ ನಾಯ್ಕ, ಬಸವರಾಜ ನಾಯ್ಕ, ಖಾದರ್ ಬಾಷಾ, ಕೃಷ್ಣಮೂರ್ತಿ, ಲೋಹಿತ್ ಕುಮಾರ್, ಗಂಗಾಧರ್, ನಿವೃತ್ತ ಡಿವೈಎಸ್‌ಪಿ ಆಂಜನೇಯ, ರಂಗಪ್ಪ, ಇಲಿಯಸ್ ಖಾನ್, ಸಕ್ಲೈನ್ ಪಾಷಾ, ಪ್ರಭು, ಕಿರಣ್ ಕುಮಾರ್ ಯಾದವ್, ಜಯಣ್ಣ, ದೇವರಾಜಪ್ಪ ಹಾಜರಿದ್ದರು.

ಹೊಸದುರ್ಗ ವರದಿ
ವಿಧಾನಸಭಾ ಕ್ಷೇತ್ರ ಚುನಾವಣೆಗೆ ಬುಧವಾರ ಮತ್ತೆ 10 ನಾಮಪತ್ರಗಳು ಸಲ್ಲಿಕೆಯಾಗುವ ಮೂಲಕ ಒಟ್ಟು 15 ಮಂದಿಯಿಂದ 17 ನಾಮಪತ್ರಗಳು ಸಲ್ಲಿಕೆಯಾಗಿದೆ.

ಕಳೆದೆರಡು ದಿನಗಳಲ್ಲಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಬಿರುಸಿನ ಮತ ಪ್ರಚಾರದ ಕಾರ್ಯ ಆರಂಭಿಸಿದ್ದಾರೆ.

ಪುನರ್ ಆಯ್ಕೆಯನ್ನು ಬಯಸಿ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಡಿ. ಶೇಖರ್   ಅಪಾರ ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ಮತ್ತೆ ಒಂದು ನಾಮಪತ್ರ ಸಲ್ಲಿಸಿದರು.

ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಗೋವಿಂದರಾಜು ಅಪಾರ ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಪಟ್ಟಣದ ವೀರಭದ್ರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಾಲಯದಿಂದ ಟಿ.ಬಿ. ವೃತ್ತದವರೆಗೆ ಮೆರವಣಿಗೆ ಹೊರಟ ಗೋವಿಂದರಾಜು ಅವರೊಂದಿಗೆ ಕ್ಷೇತ್ರದ ಬೆಂಬಲಿಗರು ಹಾಗೂ ಅಭಿಮಾನಿಗಳು ಸಾಗಿದರು.

ಜೆಡಿಎಸ್ ಅಭ್ಯರ್ಥಿ ಟಿ.ಎಲ್. ಸುಧಾಬಾಯಿ ಕಾರ್ಯಕರ್ತರೊಂದಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಬಿಎಸ್‌ಪಿ ಪಕ್ಷದ ಅಭ್ಯರ್ಥಿ ಕೆ. ತಿಮ್ಮಪ್ಪಅನೇಕ ಕಾರ್ಯಕರ್ತರೊಂದಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಪಕ್ಷೇತರ ಅಭ್ಯರ್ಥಿಗಳಾಗಿ ಎಚ್.ಸಿ. ಮಲ್ಲಿಕಾರ್ಜುನ, ಶಿವಣ್ಣ, ರಘು, ಕೆ. ಚಂದ್ರಪ್ಪ, ಮಲ್ಲೇಶಪ್ಪ, ದನಂಜಯ್ಯ ತಮ್ಮ ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಮೊಳಕಾಲ್ಮುರು ವರದಿ
ಸ್ಥಳೀಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದ ಬುಧವಾರ 8 ಮಂದಿ ಒಟ್ಟು 9 ನಾಮಪತ್ರ ಸಲ್ಲಿಸಿದರು.

ಈ ಮೂಲಕ ಒಟ್ಟು 16 ಮಂದಿ 23 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬುಧವಾರ ಬಿಜೆಪಿ ಪರ ಪಕ್ಷದ ಎಸ್‌ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಾಸರಿ ಕೀರ್ತಿಕುಮಾರ್ ಕೆಇಬಿ ವೃತ್ತದಿಂದ ಕಾರ್ಯಕರ್ತರ ಜತೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಈ ವೇಳೆ ಕ್ಷೇತ್ರಾಧ್ಯಕ್ಷ ಪಿ.ಇ. ವೆಂಕಟಸ್ವಾಮಿ, ಉಪಾಧ್ಯಕ್ಷ ಆರ್.ಜಿ. ಗಂಗಾಧರಪ್ಪ, ಮುಖಂಡರಾದ ಜೆ.ಟಿ. ರಾಜಶೇಖರ್, ಪಿ.ಎಂ. ಚಂದ್ರಶೇಖರ್, ಜಿ.ಪಂ. ಸದಸ್ಯೆ ಮಾರಕ್ಕ ಓಬಯ್ಯ, ಎಂ.ಟಿ. ಮಲ್ಲಿಕಾರ್ಜುನಯ್ಯ, ಮಲ್ಲೂರಹಳ್ಳಿ ವೆಂಕಟೇಶ್, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಜರಿದ್ದರು.

ಜೆಡಿಎಸ್ ಪರವಾಗಿ ಚಳ್ಳಕೆರೆಯ ಡಾ.ಓಬಣ್ಣ ಪೂಜಾರ್ ನಾಮಪತ್ರ ಸಲ್ಲಿಸಿದರು.

ಅದಕ್ಕೂ ಮೊದಲು ಅವರು ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ಆಗಮಿಸಿದರು. ಕ್ಷೇತ್ರಾಧ್ಯಕ್ಷ ಭೋಗಾನಹಳ್ಳಿ ರಾಜಣ್ಣ, ಕ್ಷೇತ್ರಾಧ್ಯಕ್ಷ ಹನುಮಂತನಹಳ್ಳಿ ನಾಗರಾಜ್, ತಮ್ಮಣ್ಣ, ಖಲೀಂ, ಸತ್ಯಣ್ಣ, ಸಾಂಬಶಿವಯ್ಯ ಸ್ವಾಮಿ ಉಪಸ್ಥಿತರಿದ್ದರು. ಉಳಿದಂತೆ ಬಿ.ಎಸ್. ಬಸಣ್ಣ (ಜೆಡಿಯು), ಎಚ್. ರಾಮಣ್ಣ (ಬಿಎಸ್‌ಪಿ ), ಚಂದ್ರಣ್ಣ, ಸಣ್ಣ ಮಾರಣ್ಣ, ದೊಡ್ಡಬೋರಯ್ಯ ಮತ್ತು ಡಿ. ಬೋರಯ್ಯ (ಪಕ್ಷೇತರ)ರಾಗಿ ನಾಮಪತ್ರ ಸಲ್ಲಿಸಿದರು ಎಂದು ಚುನಾವಣೆ ಶಾಖೆ ಮೂಲಗಳು ತಿಳಿಸಿವೆ.

ಹೊಳಲ್ಕೆರೆ ವರದಿ
ಬುಧವಾರ 13 ಅಭ್ಯರ್ಥಿಗಳು ವಿವಿಧಪಕ್ಷಗಳಿಂದ ನಾಮಪತ್ರ ಸಲ್ಲಿಸಿದ್ದಾರೆ.   ಎಚ್. ಆಂಜನೇಯ- ಕಾಂಗ್ರೆಸ್, ದೇವೇಂದ್ರ ನಾಯ್ಕ- ಬಿಜೆಪಿ, ಯೋಗಮೂರ್ತಿ ನಾಯ್ಕ-ಕೆಎಂಪಿ, ಎಂ.ಜಿ. ಸತೀಶ್-ಎಸ್‌ಪಿ, ಟಿ. ಬಸವರಾಜಪ್ಪ-ಎಎನ್‌ಸಿ, ಡಿ. ರುದ್ರಪ್ಪ- ಎನ್‌ಪಿಪಿ, ಅನಂತಮೂರ್ತಿ ನಾಯ್ಕ, ಎನ್. ವೆಂಕಟೇಶ್, ಬಿ.ಎಸ್. ಚಂದ್ರಪ್ಪ, ಎಸ್. ವಿಜಯ, ಚಂದ್ರಪ್ಪ, ಜಿ.ಆರ್. ಯಶವಂತ ಕುಮಾರ, ಚಂದ್ರಪ್ಪ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT