ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ತಾನಸೇನ, ಇಂದು ಭೀಮಸೇನ

Last Updated 25 ಜನವರಿ 2011, 11:25 IST
ಅಕ್ಷರ ಗಾತ್ರ

ಮಂಗಳೂರು: ‘ಪಂಡಿತ್ ಭೀಮಸೇನ ಜೋಶಿ ಅವರಿಗೂ ಮಂಗಳೂರಿಗೂ ಹಳೆಯ ನಂಟು. ಅರ್ಧ ಶತಮಾನಕ್ಕೂ ಹಿಂದಿನದು. 1946ರಿಂದಲೇ ಅವರು ಮಂಗಳೂರಿಗೆ ಆಗಾಗೆ ಬರಲಾರಂಭಿಸಿದ್ದರು. 1997ರಲ್ಲಿ ಕೊನೆಯ ಬಾರಿ ನಗರಕ್ಕೆ ಬಂದಿದ್ದರು. ಮಂಗಳೂರಿನ ವೆಂಕಟರಮಣ ದೇವಸ್ಥಾನದಲ್ಲಿ ಅವರು ಹಲವು ಬಾರಿ ಕಛೇರಿ ನೀಡಿದ್ದಾರೆ. ನಗರದ ಫೀಲ್ಡ್ ಸ್ಟ್ರೀಟ್‌ನ ಹರೇಕಳ ರಾಮಚಂದ್ರ ಪೈ ಎಂಬವರು ಜೋಶಿ ಅವರ ಸ್ನೇಹಿತರಾಗಿದ್ದು, ಅವರ ಮನೆಗೆ ಭೇಟಿ ನೀಡುತ್ತಿದ್ದರು. ಅವರ ಮೂಲಕ ಜೋಶಿ ನನಗೆ ಪರಿಚಿತರಾದರು. ನಂತರ ನಮ್ಮ ಸ್ನೇಹ ಮುಂದುವರಿಯಿತು. ಎರಡು ವರ್ಷ ಹಿಂದೆ ನಾನು ಕುಟುಂಬ ಸಹಿತ ಪುಣೆಯ ಅವರ ಮನೆಗೆ ಹೋಗಿದ್ದೆ. ಗಾಲಿ ಕುರ್ಚಿಯಲ್ಲೇ ಕುಳಿತು ಸುಮಾರು ಹೊತ್ತು ಮಾತನಾಡಿದರು. ಹಳೆಯದನ್ನು ನೆನಪು ಮಾಡಿಕೊಂಡರು’...

ಹೀಗೆ ಭಾರತರತ್ನ ಭೀಮಸೇನ ಜೋಷಿ ಅವರನ್ನು ಸ್ಮರಿಸಿ ಕೊಂಡವರು ಸಂಗೀತ ಪ್ರೇಮಿ ಎಂ.ಮಾಧವ ಕಿಣಿ.

‘ಭೀಮಸೇನ ಜೋಶಿ ಅವರ ಪ್ರತಿಭೆ ದೊಡ್ಡದು. ‘ಅಂದು ತಾನಸೇನ. ಇಂದು ಭೀಮಸೇನ’ ಎಂಬ ಮಾತನ್ನು ನಾವು  ಯುವಕರಾಗಿದ್ದಾಗಲೇ ಕೇಳುತ್ತಿದ್ದೆವು ಎಂದು ಮಾಧವ ಕಿಣಿ ನೆನಪಿಸಿಕೊಂಡರು. ಜೋಶಿ ಅವರಂತೆಯೇ ಹಿಂದೂಸ್ತಾನಿ ಸಂಗೀತದಲ್ಲಿ ಕಿಣಿ ಅವರಿಗೆ ಅಪಾರ ಆಸಕ್ತಿ. ಹಾಗಾಗಿಯೇ ಸ್ನೇಹಿತರ ಜತೆಗೂಡಿ ಮಂಗಳೂರಿನಲ್ಲಿ ಅವರು, ಜೋಶಿ ಅವರ ಹಲವು ಭಜನ್, ಅಭಂಗ, ಗಾಯನ ಕಛೇರಿಗಳನ್ನು ಏರ್ಪಡಿಸಿದ್ದರು.

‘ನನಗೆ ಗೊತ್ತಿದ್ದಂತೆ ಆರಂಭದಲ್ಲಿ ಅವರು ಮನೆಗಳಲ್ಲಿ ಕಛೇರಿ ನೀಡುತ್ತಿದ್ದರು. ನಂತರ ಪುರಭವನ, ವೆಂಕಟರಮಣ ದೇವಸ್ಥಾನ ಮೊದಲಾದ ಕಡೆ ಕಛೇರಿ ನೀಡತೊಡಗಿದರು. ನಾನು ಪ್ರತಿ ವರ್ಷ ಅವರನ್ನು ಮಂಗಳೂರಿಗೆ ಕರೆಸುತ್ತಿದ್ದೆ’ ಎನ್ನುತ್ತಾ ಅರ್ಧ ಶತಮಾನದ ಹಿಂದಿನ ದಿನಗಳಿಗೆ ಜಾರಿದರು.

‘ಅವರಿಗೆ ಆರಂಭದಲ್ಲಿ ಪ್ರತಿ ಕಾರ್ಯಕ್ರಮಕ್ಕೆ ಸಂಭಾವನೆಯಾಗಿ ರೂ. 75 ನೀಡಲಾಗುತಿತ್ತು. ಅವರ 75ನೇ ಹುಟ್ಟುಹಬ್ಬ ವೇಳೆ ಸನ್ಮಾನದ ಜತೆ ರೂ. 75,000 ನಗದು ಉಡುಗೊರೆಯಾಗಿ ಕೊಡಲಾಯಿತು. ಏಕನಾಥ ನಾಯಕ್, ನಾರಾಯಣ ಕುಡ್ವ ಈ ಮೊತ್ತ ಸಂಗ್ರಹಿಸಲು ಶ್ರಮಿಸಿದ್ದರು’ ಎಂದು ನೆನಪಿಸಿಕೊಂಡರು ಸಂಗೀತ ಪ್ರೇಮಿ ವೈದ್ಯ ಡಾ. ಕೆ.ಮೋಹನ ಪೈ.

ಹರೇಕಳ ರಾಮಚಂದ್ರ ಪೈ (ರಾಮಣ್ಣ ಎಂದೇ ಜನಪ್ರಿಯ), ಪುತ್ತೂರು ಮಾಧನ ನಾಯಕ್, ಡಾ.ಸಿ.ಆರ್.ಕಾಮತ್ ಮೊದಲಾದವರು ಅವರನ್ನು ಪ್ರೋತ್ಸಾಹಿಸಿದ್ದರು ಎನ್ನುತ್ತಾರೆ ಅವರು. ರಾಮಚಂದ್ರ ಪೈ ಮನೆಯಲ್ಲೇ ಜೋಶಿ ಕೆಲವು ದಿನ ಉಳಿದು ಬೇರೆ ಬೇರೆ ಕಡೆ ಕಾರ್ಯಕ್ರಮ ನೀಡುತ್ತಿದ್ದರು.

‘ಜೋಶಿ ಸಂಗೀತ ವಿಶ್ವವಿದ್ಯಾಲಯದಂತಿದ್ದರು...’
ಮಂಗಳೂರು:
‘ಭೀಮಸೇನ ಜೋಶಿ ತಮ್ಮದೇ ಆದ ಸಂಗೀತ ಶೈಲಿ ಹೊಂದಿದ್ದರು. ಅದನ್ನು ನಾನು ಭೀಮಸೇನ ಗಾಯನ ಶೈಲಿ ಎನ್ನುತ್ತೇನೆ. ಅವರೊಂದು ಸಂಗಿತ ವಿಶ್ವವಿದ್ಯಾಲಯದಂತಿದ್ದರು. ತುಮ್ರಿ, ಅಭಂಗ, ಭಾವಗೀತೆ, ಭಕ್ತಿಗೀತೆ ಎಲ್ಲದರಲ್ಲೂ ಅವರ ಯೋಗದಾನವಿತ್ತು....’

- ಪಂಡಿತ್ ಭೀಮಸೇನ ಜೋಶಿ ಅವರ ಶಿಷ್ಯ ಪಂಡಿತ್ ಉಪೇಂದ್ರ ಭಟ್ ಗುರುವನ್ನು ಸೋಮವಾರ ನೆನಪಿಸಿಕೊಂಡಿದ್ದು ಹೀಗೆ.

‘ಅಷ್ಟು ದೊಡ್ಡ ಗಾಯಕರಾಗಿದ್ದರೂ, ಅವರಲ್ಲಿ ಸರಳತೆಯಿತ್ತು. ಶಿಷ್ಯರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು’ ಎಂದು ಪುಣೆಯಿಂದ ಅವರು ದೂರವಾಣಿಯಲ್ಲಿ ಪ್ರಜಾವಾಣಿಗೆ ತಿಳಿಸಿದರು.

‘ನಾನು 1965ರ ಸುಮಾರಿಗೆ ಮಂಗಳೂರಿನಲ್ಲಿ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಆಗ ಅವರು ಮಂಗಳೂರಿನಲ್ಲಿ ಕೆಲವು ದಿನ ಉಳಿದುಕೊಂಡಿದ್ದರು. ಡಾ. ಎಂ.ಪಿ.ಪೈ, ಪುತ್ತೂರು ಮಾಧವ ನಾಯಕ್ ಮೊದಲಾದವರು ಅವರಿಗೆ ತಂಬೂರ್‌ನಲ್ಲಿ ಸಾಥ್ ನೀಡುವ ಅವಕಾಶವನ್ನು ನನಗೆ ಒದಗಿಸಿಕೊಟ್ಟರು. ನಂತರ ಪ್ರತಿ ಬಾರಿ ಅವರು ಬಂದಾಗ ನನಗೆ ಅವಕಾಶ ಸಿಗುತ್ತಿತ್ತು’ ಎಂದು ಸ್ಮರಿಸಿದರು.

‘ಮಂಗಳೂರಿನಲ್ಲಿ ಎಂ.ನಾರಾಯಣ ಪೈ ಅವರಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದೆ. ಅವರದ್ದೂ ಕಿರಾನಾ ಘರಾಣ ಶೈಲಿ. 1980ರಲ್ಲಿ ನನಗೆ ಪುಣೆಗೆ ಬರಲು ಹೇಳಿದರು. ಅಂದಿನಿಂದ ಅವರಲ್ಲಿ ಸಂಗೀತ ಕಲಿಯುವ ಅವಕಾಶ ದೊರೆಯಿತು’ ಎಂದು ಉಪೇಂದ್ರ ಭಟ್ ಹೆಮ್ಮೆಯಿಂದ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT