ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಅಂಧ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಡಿಸೆಂಬರ್‌ನಲ್ಲಿ ಕಂಪ್ಯೂಟರ್ ತರಬೇತಿ ಮತ್ತು ಸಂಪನ್ಮೂಲ ಕೇಂದ್ರವನ್ನು ಆರಂಭಿಸಲಾಗುವುದು~ ಎಂದು ಕುಲಪತಿ ಡಾ.ಎನ್.ಪ್ರಭುದೇವ್ ತಿಳಿಸಿದರು.

ವಿವಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ, ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಪಠ್ಯ ಪುಸ್ತಕ ಮತ್ತು ಆಡಿಯೊ ಕ್ಯಾಸೆಟ್‌ಗಳ ವಿತರಿಸಿ ಅವರು ಮಾತನಾಡಿದರು.

`ಸಂಪನ್ಮೂಲ ಕೇಂದ್ರದಲ್ಲಿ ಎಲ್ಲಾ ಬಗೆಯ ಓದುವ ಸಾಮಗ್ರಿಗಳನ್ನು ಒದಗಿಸಲಾಗುವುದು. ವಿಶ್ವವಿದ್ಯಾಲಯದ ವ್ಯಾಪ್ತಿಯ ವಿದ್ಯಾರ್ಥಿಗಳು ಮಾತ್ರವಲ್ಲದೆ ಬೇರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೂಡ ಕೇಂದ್ರವನ್ನು ಬಳಸಿಕೊಳ್ಳಬಹುದಾಗಿದೆ. ಜಾವಾ, ಮೈಕ್ರೋಸಾಫ್ಟ್ ಆಫೀಸ್ ಮುಂತಾದ ವಿಷಯಗಳ ಕುರಿತು ಕಂಪ್ಯೂಟರ್ ತರಬೇತಿ ವೇಳೆ ಬೋಧಿಸಲಾಗುವುದು~ ಎಂದರು.

`ಕೇಂದ್ರದಲ್ಲಿ ಸಹಾಯವಾಣಿಯನ್ನು ಸ್ಥಾಪಿಸಿ ಬೇರೆ ಬೇರೆ ಊರುಗಳ ಅಂಧ ವಿದ್ಯಾರ್ಥಿಗಳ ಸಮೂಹವನ್ನು ಬಲಪಡಿಸಲಾಗುವುದು. ಇ-ಪುಸ್ತಕಗಳು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳುವಂತೆ ವ್ಯವಸ್ಥೆ ಕಲ್ಪಿ ಲಾಗುವುದು.  ಎರಡನೇ ಹಂತವಾಗಿ ಕೇಂದ್ರದಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ವೃತ್ತಿ ಸಮಿತಿ ಹಾಗೂ ಉದ್ಯೋಗ ಕೇಂದ್ರವನ್ನು ಸ್ಥಾಪಿಸಲಿದೆ~ ಎಂದರು.

`ಇ- ಅಧ್ಯಯನ ಕೇಂದ್ರ ಸ್ಥಾಪಿಸುವ ಯೋಜನೆ ಕೂಡ ವಿಶ್ವವಿದ್ಯಾಲಯಕ್ಕಿದೆ. ಅಲ್ಲಿ ದೃಶ್ಯ ಶ್ರವ್ಯ ಮುಂತಾದ ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ಅಂಗವಿಕಲ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವು ಕಲ್ಪಿಸಲಾಗುವುದು. ವಿವಿಯು ಬ್ರೈಲ್ ಪುಸ್ತಕಗಳ ಮುದ್ರಣಾಲಯವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ~ ಎಂದು ಹೇಳಿದರು.

`ಪ್ರಸ್ತುತ 25 ಕಾಲೇಜುಗಳ 150 ವಿದ್ಯಾರ್ಥಿಗಳಿಗೆ ಬ್ರೈಲ್ ಪುಸ್ತಕ ಮತ್ತು ಆಡಿಯೊ ಕ್ಯಾಸೆಟ್‌ಗಳನ್ನು ವಿತರಿಸಲಾಗಿದೆ. ಪೋಷಕರು ಅಂಗವಿಕಲ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕಿದೆ. ಅಂಧ ವಿದ್ಯಾರ್ಥಿಗಳು ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಗತಿ ಸಾಧಿಸಬೇಕಿದೆ~ ಎಂದರು.

`ವಿಶ್ವದಲ್ಲಿ 40 ದಶಲಕ್ಷ ಸಂಪೂರ್ಣ ಅಂಧರಿದ್ದಾರೆ. 150 ದಶಲಕ್ಷ ಜನರಿಗೆ ಗುಣಪಡಿಸಲಾಗದಂತಹ ದೃಷ್ಟಿದೋಷ ಇದೆ. 2020ರ ವೇಳೆಗೆ ಇದು ದ್ವಿಗುಣವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

 ಶೇ 90ರಷ್ಟು ದೃಷ್ಟಿದೋಷವುಳ್ಳ ಜನ ಅಭಿವೃದ್ಧಿ ಶೀಲ ದೇಶದಲ್ಲಿದ್ದಾರೆ. 13 ದಶಲಕ್ಷ ಜನರಿಗೆ ಭಾರತದಲ್ಲಿ      ನೇತ್ರ ಸಂಬಂಧಿ ದೋಷಗಳಿವೆ~ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮ ಸಂಯೋಜಕಿ ಪ್ರಸನ್ನಾ ಉಡುಪೀಕರ್, `ಎಲ್ಲ ವಿವಿಗಳಿಗಿಂತಲೂ ಮೊದಲು ಬೆಂಗಳೂರು ವಿವಿ ಅಂಧರ ನೆರವಿಗೆ ಬಂದಿರುವುದು ವಿಶೇಷ ಸಂಗತಿ. ಅಲ್ಲದೇ ಅಂಧರಿಗೆ ವಿದ್ಯಾರ್ಥಿ ವೇತನ, ಗ್ರಂಥಾಲಯ ವ್ಯವಸ್ಥೆ ಒದಗಿಸಲಾಗಿದೆ.  ವಿದ್ಯಾರ್ಥಿಗಳು ಇವುಗಳ ಸದುಪಯೋಗಯೋಗ ಪಡಿಸಿಕೊಳ್ಳಬೇಕು~ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಂಧ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಿಜಿಸ್ಟ್ರಾರ್ ಪ್ರೊ.ಎನ್.ರಂಗಸ್ವಾಮಿ, ಮೌಲ್ಯಮಾಪನ ರಿಜಿಸ್ಟ್ರಾರ್ ಪ್ರೊ.ಟಿ.ಆರ್.ಸುಬ್ರಮಣ್ಯ, ಕರ್ನಾಟಕ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಪರಶಿವಮೂರ್ತಿ, ರಾಷ್ಟ್ರೀಯ ಅಂಧರ ಒಕ್ಕೂಟದ ಅಧ್ಯಕ್ಷ ಗೌತಮ್ ಅಗರ್‌ವಾಲ್, ಮಿತ್ರಜ್ಯೋತಿ ಅಂಧರ ಸಂಪನ್ಮೂಲ ಕೇಂದ್ರದ ನಿರ್ದೇಶಕಿ ಮಧು ಸಿಂಘಲ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT