ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಾರಿ ನಡೆಸುವರ ಕಥೆ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಆಯ್ ಅಲ್ಲಾ ಹಮಾರ ಇಝತ್ ತೆರೆ ಹಾತ್ ಮೆ ಹೈ. ತು ಅಂಬಾರಿ ಕಿ ಇಫಾಝತ್ ಫರ್ಮಾ~.
(ಓ ಅಲ್ಲಾ, ಪರಮಾತ್ಮ, ನಾವೇನೋ ಮಾಡೋದು ಮಾಡ್ಬುಟ್ಟಿದ್ದೀವಿ. ಇನ್ ನಮ್ ಕೈಯಲ್ಲಿ ಸಾಧ್ಯ ಇಲ್ಲ. ಮರ‌್ಯಾದೆ ಉಳಿಸೋನು ನೀನೇ. ಈ ಅಂಬಾರಿದು, ಮತ್ತೆ ನಮ್ ಮರ‌್ಯಾದೆ ನಿನ್ ಕೈಲಿದೆ. ಕಾಪಾಡು- ಆಮಿನ್).

ಪ್ರತಿ ವರ್ಷ ವಿಜಯದಶಮಿಯ ದಿನ ಮೈಸೂರು ದಸರಾ ಮೆರವಣಿಗೆಯಲ್ಲಿ ಬಲರಾಮ ಮಣಭಾರದ ಅಂಬಾರಿಯನ್ನು ಹೊತ್ತುಕೊಂಡು ಅರಮನೆ ಆವರಣದಿಂದ ಬನ್ನಿಮಂಟಪ ತಲುಪಿ ಅಂಬಾರಿಯನ್ನು ಕೆಳಗೆ ಇಳಿಸುವರೆಗೆ ಝಕಾವುಲ್ಲಾ, ಪಾಶಾ, ಅಕ್ರಂ ಅವರ ಹೃದಯ ಈ ರೀತಿ ಡವಗುಡುತ್ತಿರುತ್ತದೆ.

`ದೇವ್ರೇ.. ಬಲರಾಮ ಕ್ಷೇಮವಾಗಿರಲಿ. ಅವನ ಬೆನ್ನಿಗೆ ಕಟ್ಟಿದ ಅಂಬಾರಿ ವಾಲದಿರಲಿ. ಜಾರದಿರಲಿ. ಅಂಬಾರಿಯೊಳಗೆ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿಗೆ ಏನೂ ಆಗದಿರಲಿ~ ಅಂತ ಕ್ಷಣಕ್ಷಣಕ್ಕೂ ಅವರು ಅಲ್ಲಾನನ್ನು ಪ್ರಾರ್ಥಿಸುತ್ತಾರೆ!
ತಾಯಿ ಚಾಮುಂಡೇಶ್ವರಿಯ ಮೆರವಣಿಗೆ ನಿರಾತಂಕವಾಗಿ ಸಾಗಲಿ ಅಂತ ಆ ಹಿರಿಯ ಜೀವಗಳು ಈ ರೀತಿ ತುಡಿಯುವುದಕ್ಕೆ ಕಾರಣವೂ ಇದೆ.

ಬಲರಾಮನ ಬೆನ್ನಿನ ಮೇಲೆ ಅಂಬಾರಿಗಿಂತ ಮೊದಲು ಕೂರಿಸುವ ಮೆತ್ತೆಗಳಾದ ನಮ್ದ, ಗಾದಿ ಹಾಗೂ ಚಾಪು- ಇವುಗಳನ್ನು ದಶಕಗಳಿಂದ ತಯಾರು ಮಾಡುತ್ತಿರುವವರು ಅವರೇ. ಬಲರಾಮನ ಬೆನ್ನಿನ ಮೇಲೆ ಚಾಮುಂಡೇಶ್ವರಿ ಆಸೀನಳಾಗಿರುವ ಚಿನ್ನದ ಅಂಬಾರಿಯನ್ನು ಕ್ರೇನ್ ಮೂಲಕ ಎತ್ತಿ ಕೂರಿಸುವುದು, ಆ ಅಂಬಾರಿ ವಾಲದಂತೆ ಹಾಗೂ ಇಟ್ಟ ಜಾಗದಿಂದ ಜಾರದಂತೆ ಬಿಗಿಯಾಗಿ ಕಟ್ಟುವಲ್ಲಿ ಪ್ರಧಾನ ಪಾತ್ರ ವಹಿಸುವವರೂ ಅವರೇ!

ಹೀಗಾಗಿ ಬಲರಾಮನ ಬೆನ್ನಿನ ಮೇಲೆ ಅಂಬಾರಿ ಕೂರಿಸಿದ ಕ್ಷಣದಿಂದ ಝಕವುಲ್ಲಾ, ಪಾಶಾ ಹಾಗೂ ಅಕ್ರಂ ಅವರಿಗೆ ಆತಂಕ ಶುರುವಾಗುತ್ತದೆ. ಅಲ್ಲಿಂದ ಆರೇಳು ಗಂಟೆ- ಮೆರವಣಿಗೆ ಅರಮನೆ ಆವರಣದಿಂದ ಶುರುವಾಗಿ ಸಂಜೆ ಹೊತ್ತು ಬನ್ನಿಮಂಟಪ ತಲುಪಿ ಅಂಬಾರಿ ಕೆಳಗೆ ಇಳಿಸುವವರೆಗೆ- ಅವರಿಗೆ ಬರೀ ಟೆನ್ಷನ್.. ಟೆನ್ಷನ್!
ಆನೆಯ ಬೆನ್ನಿನ ಮೇಲೆ ಕೂರಿಸಿದ ಅಂಬಾರಿ ವಾಲಬಾರದು. ಜಾರಬಾರದು. ಹಾಗೇನಾದರೂ ಆದಲ್ಲಿ ನೋಡುಗರಿಂದ ಟೀಕೆ ತಪ್ಪಿದ್ದಲ್ಲ.

`ಅಂಬಾರಿ ವಾಲಿದ್ರೆ ಜನ ಸುಮ್ನಿರ‌್ತರಾ ಸ್ವಾಮಿ? ಯಾವನೋ ಅವನು ಅಂಬಾರಿ ಕಟ್ದೋನು? ಅಂಬಾರಿ ಹೆಂಗೆ ವಾಲಿದೆ ನೋಡ್ಲ...ಅಂತ ಜನ ಬೈತಾರೆ. ಇನ್ನು ಅಂಬಾರಿ ಅಥವಾ ಬಲರಾಮನಿಗೆ ಏನಾದ್ರು ಆದ್ರೂನು ನಮ್ಮ ಮೇಲಧಿಕಾರಿಗಳಿಗೆ ನಾವು ಮುಖ ತೋರ‌್ಸೋದು ಹೇಗೆ ಸ್ವಾಮಿ? ಹಾಗೇನಾದ್ರೂ ಕೆಟ್ಟದು ನಡೀತೂ ಅಂತಾದ್ರೆ ಮರ‌್ಯಾದೆ ಹೋಗೋದು ನಮ್ದು, ನಮ್ಮ ಅಧಿಕಾರಿಗಳದ್ದು. ನಾವು ತಪ್ಪು ಮಾಡಿದ್ರೂ ಕೇಳೋದು ಅವರ‌್ನ. ಅಧಿಕಾರಿಗಳು ಅವ್ರ ಮೇಲ್ನೋರ‌್ಗೆ ಏನೂಂತ ಉತ್ರ ಕೊಡೊಕಾಯ್ತದೆ?. ನಾವು ಎಲ್ರ ಮರ‌್ಯಾದೆ ಉಳಿಸ್ಬೇಕು~ ಎನ್ನುತ್ತಾರೆ ಝಕವುಲ್ಲಾ.

ಸದ್ಯದ ಮಟ್ಟಿಗೆ ಮೈಸೂರು ದಸರಾ ಆನೆಗಳಿಗೆ ನಮ್ದ, ಗಾದಿ ಹಾಗೂ ಚಾಪು ತಯಾರಿಸುವವರು ಈ ಮೂವರೇ. ಇವರನ್ನು ಬಿಟ್ಟರೆ ಈ ಕೆಲಸ ಮಾಡುವವರು ಇನ್ಯಾರೂ ಇಲ್ಲ. ನಮ್ದ ಅದರಲ್ಲೂ ಗಾದಿ ತಯಾರಿಸೋದು ಅಷ್ಟು ಸುಲಭದ ಕೆಲಸವಲ್ಲ.

`ನಮ್ದ~ ಅಂದರೆ ಆನೆಯ ಬೆನ್ನಿನ ಮೇಲೆ ಹಾಕುವ ಮೆತ್ತನೆಯ ಹಾಸು. ತೆಂಗಿನ ಸಿಪ್ಪೆ (ಮಟ್ಟೆ)ಯನ್ನು ಚೆನ್ನಾಗಿ ಸುಲಿದು ಅದರ ನಾರನ್ನು ಹೂವಿನಂತೆ ಮೃದುವಾಗಿ ಹದ ಮಾಡಿ, ಅದನ್ನು ತೆಳು ಗೋಣಿ ಚೀಲದೊಳಗೆ ಹಾಸಿಗೆಯಂತೆ ಸೇರಿಸಿ ರೂಪಿಸಿದ ಮೆತ್ತೆ.

`ಗಾದಿ~ ಎಂದರೆ ಆಯತಾಕಾರದ ನಡುವೆ ದೊಡ್ಡ ತೂತು ಇರುವ ದಪ್ಪನೆಯ ಮೆತ್ತೆ. ಅಂಬಾರಿ ಅತ್ತಿತ್ತ ಜರುಗದಂತೆ ಆನೆಯ ಬೆನ್ನಿಗೆ ಆಧಾರ ಕೊಡುವುದು ಈ ಗಾದಿಯೇ. ಗಾದಿ ನಡುವಿನ ತೂತು ಇರುವ ಜಾಗದಲ್ಲಿ ಅಂಬಾರಿ ಆನೆಯ ಬೆನ್ನು ಮೂಳೆ ಸರಿಯಾಗಿ ಕೂರಬೇಕು. ಆಗ ಗಾದಿ ಸುಲಭವಾಗಿ ಅತ್ತಿತ್ತ ಜರಗುವುದಿಲ್ಲ.

ಗಾದಿಯನ್ನು ಮರವಣಿಗೆಯ ದಿನಕ್ಕಿಂತ ವಾರಗಟ್ಟಲೆ ಮೊದಲೆ ತಯಾರು ಮಾಡಬೇಕು. ದಸರಾ ಆನೆಗಳ ತಾಲೀಮು ಸಂದರ್ಭದಲ್ಲೂ ಈ ಗಾದಿಯನ್ನು ಆನೆಯ ಬೆನ್ನಿಗೆ ಕಟ್ಟಿ, ಅದರ ಮೇಲೆ ಡಮ್ಮಿ ಅಂಬಾರಿ ಕೂರಿಸಿ ಅದರೊಳಗೆ ಮಣ ಭಾರದ ಮರಳು ಮೂಟೆಯನ್ನು ಇಟ್ಟು ರಿಹರ್ಸಲ್ ನಡೆಸಿರುತ್ತಾರೆ.

ಗಾದಿಯನ್ನು ಕೆರೆ ಬದಿಯಲ್ಲಿ ಸಿಗುವ ಜೊಂಡಿನಿಂದ (ಉರ್ದುವಿನಲ್ಲಿ `ಪಟೇರ~) ತಯಾರಿಸುತ್ತಾರೆ. ಆಯತಾಕಾರದ ತೆಳುಗೋಣಿ ಚೀಲದೊಳಗೆ ಒಣಗಿದ ಜೊಂಡನ್ನು ಸೇರಿಸಿ ದಪ್ಪ ಮಾಡುತ್ತಾರೆ. ಅಂಬಾರಿ ಭಾರಕ್ಕೆ ಬತ್ತದ ಹುಲ್ಲು ಹುಡಿಯಾಗುವುದು. ಹಾಗಾಗಿ ಅದಕ್ಕೆ ಜೊಂಡನ್ನೇ ಬಳಸಬೇಕು. ಒಟ್ಟಿನಲ್ಲಿ ಆನೆಯ ಬೆನ್ನಿನ ಮೇಲೆ ಕೂರಿಸುವ ಗಾದಿ ಸಮತಟ್ಟಾಗಿರಬೇಕು. ಮಟ್ಟದಿಂದ ಕೂಡಿರಬೇಕು. ಇಲ್ಲದಿದ್ದರೆ ಅಂಬಾರಿ ವಾಲುವುದು ಖಚಿತ ಎನ್ನುತ್ತಾರೆ ಪಾಶಾ.

`ನಮ್ದ~ ಸುಮಾರು 70 ಕೆಜಿ ಭಾರ ಇದ್ದರೆ `ಗಾದಿ~ ಸುಮಾರು 250ರಿಂದ 300 ಕೆಜಿ ತೂಕ ಇದೆ. ಗಾದಿಯ ಮೇಲೆ ಹಾಸುವ ನಮ್ದ (ಚಾಪು) ಸುಮಾರು 35 ಕೆಜಿ ತೂಕ ಇದೆ. ಇವುಗಳ ಮೇಲೆ ಬಣ್ಣದ `ಜೂಲಾ~ವನ್ನು ಹಾಸಿ ಅದರ ಮೇಲೆ 750 ಕೆಜಿಯ ಅಂಬಾರಿ ಕೂರಿಸುತ್ತಾರೆ. ಇವನ್ನೆಲ್ಲ ಸೇರಿಸಿದರೆ ಬಲರಾಮ ಒಂದು ಟನ್‌ಗೂ ಮಿಕ್ಕಿ ಭಾರ ಹೊತ್ತಂತಾಯಿತು!

ಝಕವುಲ್ಲಾ ಅವರಿಗೆ 65 ವರ್ಷ ದಾಟಿದೆ. ಬಂಡೀಪುರದ ಆನೆ ಶಿಬಿರಗಳ ವಿವಿಧ ಆನೆ ಶಿಬಿರಗಳಲ್ಲಿ ಕಾವಡಿ, ಮಾವುತನಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದರೆ.

ಕರ್ತವ್ಯದಿಂದ ನಿವೃತ್ತರಾಗಿದ್ದರೂ ದಸರಾ ಅಂಬಾರಿ ಸೇವೆಯಿಂದ ಅವರಿಗೆ ನಿವೃತ್ತಿ ಇಲ್ಲ. ಪಾಶಾ ಕೂಡ ಅಷ್ಟೇ ಅವರೂ ಕೂಡ ಮಾವುತನಾಗಿ ಈಗ ನಿವೃತ್ತರಾಗಿದ್ದಾರೆ. ಕಳೆದ 25 ವರ್ಷಗಳಿಂದ ಇವರಿಬ್ಬರೂ ಈ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಕ್ರಂ ಸಹಾಯಕರಾಗಿದ್ದಾರೆ.

`ಈ ಹಿಂದೆ ಹಿರಿಯ ಮಾವುತರಾಗಿದ್ದ ವಹಾಬ್ ಸಾಹೇಬ್, ಮಹಮ್ಮದ್ ಸುಲ್ತಾನರಿಂದ ಗಾದಿ, ನಮ್ದ ಹೊಲಿಯುವುದನ್ನು ಕಲಿತೆವು. ಹಳಬರೆಲ್ಲ ಒಬ್ಬೊಬ್ಬರಾಗಿ ಹೊರಟ್ಹೋದ್ರು. ಆದ್ರೆ ಈಗಿನ ಮಾವುತರಾಗಲಿ, ಕಾವಡಿಗಳಾಗಲಿ ಈ ಕೆಲ್ಸ ಕಲಿಯುವ ಆಸಕ್ತಿ ತೋರಿಸುತ್ತಿಲ್ಲ~ ಎಂದು ಬೇಸರದಿಂದ ಹೇಳುತ್ತಾರೆ ಝಕಾವುಲ್ಲ.

ದಸರಾ ಮೆರವಣಿಗೆ ವಿಶ್ವವಿಖ್ಯಾತ. ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಕೂರಿಸಿಕೊಂಡು ರಾಜ ಗಾಂಭೀರ್ಯದಿಂದ ನಡೆಯುವ ಬಲರಾಮ ನೋಡುಗರ ಕಣ್ಣಿಗೆ ಹಬ್ಬ. ಬಲರಾಮನ ಅಂಬಾರಿ ಸವಾರಿಯ ಹಿಂದೆ ಅದೆಷ್ಟು ಸಿದ್ಧತೆಗಳು, ಅದೆಷ್ಟು ಗೌಜುಗದ್ದಲ! ಇವೆಲ್ಲವುಗಳ ನಡುವೆ ಮೆರವಣಿಗೆ ಹೊರಟ ತಾಯಿ ಚಾಮುಂಡಿಯ ಸುಗಮ ಯಾತ್ರೆಗಾಗಿ ಮಿಡಿಯುವ ಝಕಾವುಲ್ಲ, ಪಾಶಾ ಹಾಗೂ ಅಕ್ರಂ ಅವರ ಹೃದಯದ ಡವಡವ ಸದ್ದು ಮಾತ್ರ ಯಾರಿಗೂ ಕೇಳಿಸುವುದಿಲ್ಲ.

 ದಸರಾ ಮೆರವಣಿಗೆಯಲ್ಲಿ ಬಲರಾಮನ ಅಂಬಾರಿ ಸವಾರಿ ಇಷ್ಟು ವರ್ಷದಿಂದ ಅಷ್ಟು ಸೊಗಸಾಗಿ ನಡೆಯುತ್ತಿದ್ದರೆ ಅದರ ಹಿಂದೆ ಇರುವ ಈ ಮೂವರ ಕೊಡುಗೆ ಅನನ್ಯವಾದದ್ದು. ಆದರೆ ಅವರ ಶ್ರಮ, ಶ್ರದ್ಧೆ, ಆತಂಕ ಯಾರಿಗೂ ಅರ್ಥವಾಗುವುದಿಲ್ಲ. ಅವರನ್ನು ಗುರುತಿಸುವವರೇ ಇಲ್ಲ.

ಈ ಬಗ್ಗೆ ಅವರಿಗೆ ಬೇಸರವಿಲ್ಲ. ಏಕೆಂದರೆ ಅದನ್ನೆಲ್ಲ ಅವರು ನಿರೀಕ್ಷಿಸುವುದೇ ಇಲ್ಲ. ಅವರ ನಿರೀಕ್ಷೆ ಇಷ್ಟೆ.. ತಾಯಿ ಚಾಮುಂಡಿಯ ಅಂಬಾರಿ ಮೆರವಣಿಗೆ ಸುಗಮವಾಗಿ ನಡೆಯಲಿ... ಕನ್ನಡಿಗರ ಮಾನ ಉಳಿಯಲಿ.. ಮೆರೆಯಲಿ..

ಸೌಹಾರ್ದ ಅಂದರೆ ಇದೇ ಅಲ್ಲವೇ? ಇದಕ್ಕಾಗಿಯೇ ದಸರಾ ನಾಡ ಹಬ್ಬ. ಕನ್ನಡಿಗರ ಹಬ್ಬ. ನಮ್ಮೆಲ್ಲರ ಹಬ್ಬ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT