ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬುಲೆನ್ಸ್ ಚಾಲಕರೇ ಹುಷಾರ್

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೆಂಪು ದೀಪದೊಂದಿಗೆ ಅಬ್ಬರಿಸಿಕೊಂಡು ಸಿಗ್ನಲ್ ಬಳಿ ಬಂದಿತು ಅಂಬುಲೆನ್ಸ್ . ಸಂಚಾರ ಪೊಲೀಸ್ ಕಣ್ಣಿಗೆ ಅದು ಕಾಣುತ್ತಿದ್ದಂತೆ ಆತ ಬೇರೆ ಸಿಗ್ನಲ್‌ಗಳನ್ನು ನಿಲ್ಲಿಸಿ, ಎಂದಿನಂತೆ ಆ ಅಂಬುಲೆನ್ಸ್ ಬರುತ್ತಿದ್ದ ರಸ್ತೆಯನ್ನು ತೆರವು ಮಾಡಿದರು. ಆ ವಾಹನದಲ್ಲಿ ಯಾರೂ ಇರಲಿಲ್ಲ. ಖಾಲಿ ವಾಹನಕ್ಕೆ ಸೈರನ್ ಹಾಕಲಾಗಿತ್ತು. ಈ ವಿಚಾರ ತಿಳಿದದ್ದೇ ಪೊಲೀಸ್ ಕ್ಷಣಕಾಲ ದಿಗ್ಭ್ರಾಂತರಾಗಿ, ಕೇಸು ದಾಖಲಿಸಿ ದಂಡವನ್ನೂ ವಸೂಲಿ ಮಾಡಿದರು.

ಹೇಳಿಕೇಳಿ ಸಂಚಾರದಟ್ಟಣೆಯ ನಗರ ಬೆಂಗಳೂರಿನಲ್ಲಿ ಗಂಟೆಗಟ್ಟಲೆ ಸಿಗ್ನಲ್ ದೀಪಗಳ ಹತ್ತಿರ ಕಾಯುವ ವಾಹನ ಚಾಲಕರು, ಅಂಬುಲೆನ್ಸ್ ಕಂಡೊಡನೆ ದಾರಿ ತೆರವು ಮಾಡುತ್ತಾರೆ. ಆತ್ಮಹತ್ಯೆಗೆ ಯತ್ನಿಸಿದ, ಅಪಘಾತದಿಂದ ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ವ್ಯಕ್ತಿಗಳನ್ನು ಹೊತ್ತೊಯ್ಯುವ `ಸಂಜೀವಿನಿ' ಈ ವಾಹನ ಎಂಬ ಭಾವನೆ ಸಾರ್ವಜನಿಕರಲ್ಲಿದೆ. ಆದರೆ ಕೆಲವು ಚಾಲಕರು ತಮಗೆ ಇರುವ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ 2012ರಲ್ಲಿ ದಾಖಲಾದ ಪ್ರಕರಣಗಳು.

ಕಳೆದ ವರ್ಷ ಅಂಬುಲೆನ್ಸ್ ಚಾಲಕರು ಎಸಗಿದ ತಪ್ಪಿನಿಂದಾಗಿ (ವೈದ್ಯಕೀಯ ತುರ್ತು ಸಂದರ್ಭಗಳ ಹೊರತುಪಡಿಸಿ) ಅವರ ವಿರುದ್ಧ 987 ಪ್ರಕರಣಗಳು ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಒಟ್ಟುರೂ 71,400 ದಂಡ ವಸೂಲಾಗಿದೆ. ಪ್ರಸಕ್ತ ವರ್ಷ ಇಲ್ಲಿಯವರೆಗೂ 257 ಪ್ರಕರಣಗಳು ದಾಖಲಾಗಿದ್ದು, ಅವರಿಂದ 19,100 ದಂಡ ವಸೂಲಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸುತ್ತವೆ.

ಮದ್ಯ ಸೇವಿಸಿ ಚಾಲನೆ ಮಾಡುವ, ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಹಾಗೂ ಸ್ವಂತ ಉದ್ದೇಶಕ್ಕಾಗಿ ಸೈರನ್ ಹಾಕಿಕೊಂಡು ವಾಹನ ದುರುಪಯೋಗ ಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದಲ್ಲಿ ಸುಮಾರು 30 ಸರ್ಕಾರಿ ಅಂಬುಲೆನ್ಸ್‌ಗಳಿವೆ (108), 150ಕ್ಕೂ ಹೆಚ್ಚು ಖಾಸಗಿ ಅಂಬುಲೆನ್ಸ್ ಕಾರ್ಯನಿರ್ವಹಿಸುತ್ತಿವೆ. ನೋ ಪಾರ್ಕಿಂಗ್, ಸಿಗ್ನಲ್ ಜಂಪ್, ಡ್ರೈವಿಂಗ್ ಲೈಸೆನ್ಸ್ ಇಲ್ಲದ ಹಾಗೂ ಇತರೆ ಪ್ರಕರಣಗಳಲ್ಲಿ ಅಂಬುಲೆನ್ಸ್ ಚಾಲಕರು ಹೆಚ್ಚಾಗಿ ಕಾನೂನು ನಿಯಮ ಉಲ್ಲಂಘಿಸುತ್ತಿದ್ದಾರೆ. ಸಂಚಾರ ಪೊಲೀಸರ ಮಾಹಿತಿ ಪ್ರಕಾರ ಹೆಚ್ಚಾಗಿ ಖಾಸಗಿ ಆಸ್ಪತ್ರೆ ಅಂಬುಲೆನ್ಸ್ ಚಾಲಕರೇ ಈ ರೀತಿಯ ದುರುಪಯೋಗ ಪಡಿಸಿಕೊಂಡ ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಿರುವುದಂತೆ. ಇನ್ನು ಕೆಲವು ಖಾಸಗಿ ಆಸ್ಪತ್ರೆಗಳ ವಾಹನಗಳಲ್ಲಿ ಚಾಲನಾ ಪರವಾನಗಿ ಇಲ್ಲದ ಚಾಲಕರು ಕೂಡ ಇದ್ದಾರೆ.

`ನಾವು ಕೆಲಸ ನಿರ್ವಹಿಸುವಾಗ ಅಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನಗಳು ಕಂಡರೆ ಸಾಕು, ಇತರೆ ವಾಹನಗಳನ್ನು ನಿಲ್ಲಿಸಿ ಅವುಗಳಿಗೆ ಅನುವು ಮಾಡಿಕೊಡುತ್ತೇವೆ. ಆದರೆ ಇತ್ತೀಚೆಗೆ ಅಂಬುಲೆನ್ಸ್‌ಗಳನ್ನೂ ದುರುಪಯೋಗಪಡಿಸಿಕೊಳ್ಳುವ ಚಾಲಕರಿದ್ದಾರೆ. ಅವರಿಗೆ ಶಿಕ್ಷಣದ ಕೊರತೆ ಇದೆ. ಚಾಲಕರನ್ನು ನೇಮಿಸಿಕೊಳ್ಳುವಾಗಲೇ ಶಿಕ್ಷಣದ ಅರ್ಹತೆ ಗಮನಿಸಬೇಕು. ಚಾಲಕರಿಗೆ ಮೂರು ತಿಂಗಳಿಗೊಮ್ಮೆ ತರಬೇತಿ ನೀಡಬೇಕು. ಒಬ್ಬರ ಪ್ರಾಣ ಉಳಿಸಲು ಒನ್ ವೇಗಳಲ್ಲಿ ವೇಗವಾಗಿ ಓಡಿಸಿ ಹಲವರ ಸಾವು-ನೋವಿಗೆ ಕಾರಣವಾದರೆ ಏನು ಪ್ರಯೋಜನ?  ಆದ್ದರಿಂದ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮಾತ್ರ ವಾಹನ ಬಳಕೆ ಮಾಡಿಕೊಳ್ಳುವುದು ಸೂಕ್ತ' ಎಂದು ಸಲಹೆ ನೀಡುತ್ತಾರೆ ಶಿವಾಜಿನಗರ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೇಬಲ್ ವಿ.ಶಂಕರಪ್ಪ.

`ಒಂದು ವರ್ಷದಿಂದ ಅಂಬುಲೆನ್ಸ್‌ನಲ್ಲಿ (108) ಕೆಲಸ ಮಾಡುತ್ತಿದ್ದೇನೆ. ಕೆಲಸದ ಹೊರತಾಗಿ ಯಾವುದೇ ಬಳಕೆಗೂ ವಾಹನವನ್ನು ಬಳಸಿಕೊಂಡಿಲ್ಲ. ಕಾಲ್ ಸೆಂಟರ್‌ನಿಂದ ಕರೆ ಬಂದಾಗ ಸೈರನ್ ಹಾಕಿಕೊಂಡು ಹೋಗುತ್ತೇವೆ. ಆ ಸಂದರ್ಭದಲ್ಲಿ ತೊಂದರೆಗೊಳಗಾದವರು ಅಂಬುಲೆನ್ಸ್‌ನೊಳಗೆ ಇರುವುದಿಲ್ಲ. ಇದನ್ನು ನೋಡಿದ ಸಾರ್ವಜನಿಕರಿಗೆ ವಾಹನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಬರುತ್ತದೆ. ಕೆಲವು ಚಾಲಕರು ಮಾಡುವ ತಪ್ಪಿಗಾಗಿ ನಮ್ಮ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ.

ಆದ್ದರಿಂದ ಯಾವುದೇ ಅಂಬುಲೆನ್ಸ್ ಚಾಲಕರು ಕಾನೂನು ದುರುಪಯೋಗಪಡಿಸಿ ಕೊಳ್ಳಬಾರದು. ಜಿವಿಕೆ ಫೌಂಡೇಷನ್ ಚಾಲಕರನ್ನು ಆಯ್ಕೆ ಮಾಡಿಕೊಳ್ಳುವಾಗ ಐದು ವರ್ಷ ಅನುಭವವುಳ್ಳ, ಚಾಲನಾ ಪರವಾನಗಿ ಇರುವವರನ್ನೇ ನೇಮಕ ಮಾಡಿಕೊಳ್ಳುವುದು. ಹಾಗಾಗಿ ಬಹುತೇಕ ನಮ್ಮ ಚಾಲಕರು ಬೇರೆ ಸಂದರ್ಭಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವುದಿಲ್ಲ' ಎಂದು ಸಮಜಾಯಿಷಿ ನೀಡುತ್ತಾರೆ ಇಂದಿರಾನಗರ ವ್ಯಾಪ್ತಿಯ ಅಂಬುಲೆನ್ಸ್ ಚಾಲಕ ಶರಣಪ್ಪ.

ರಸ್ತೆ ಅಪಘಾತಗಳಾಗಲಿ, ಆತ್ಮಹತ್ಯೆ ಯತ್ನಗಳಾಗಲಿ ಅಥವಾ ಇತರೆ ಅವಘಡಗಳಾದಲ್ಲಿ ಕರೆ ಮಾಡಿದ 16ರಿಂದ 20 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸುವ ಅಂಬುಲೆನ್ಸ್‌ಗಳಿಗೆ ರಸ್ತೆಯಲ್ಲಿ ಮೊದಲ ಆದ್ಯತೆ ನೀಡುತ್ತೇವೆ. ಸಂಚಾರ ಪೊಲೀಸರು ಅಷ್ಟೇ ಪ್ರಾಮುಖ್ಯ ನೀಡುತ್ತಾರೆ. ಆದರೆ ಸರ್ಕಾರಿ ವಾಹನಗಳ, ಅದರಲ್ಲೂ ವೈದ್ಯಕೀಯ ತುರ್ತು ವಾಹನಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ಸರಿ?

ಅಂಬುಲೆನ್ಸ್‌ನಲ್ಲಿ ಮಕ್ಕಳು!
ಪ್ರಾಣ ರಕ್ಷಣ ಅಂಬುಲೆನ್ಸ್‌ಗಳಿಗೆ ರಸ್ತೆಗಳಲ್ಲಿ ಆದ್ಯತೆ ನೀಡುತ್ತೇವೆ. ಆದರೆ ಇತ್ತೀಚೆಗೆ ಕೆಲವು ಚಾಲಕರು ಅವರಿಗೆ ನೀಡಿರುವ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಂಥವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡು, ದಂಡ ವಸೂಲಿ ಮಾಡಿದ್ದೇವೆ. ಇನ್ನೂ ಕೆಲವರು ಶಾಲಾ ಮಕ್ಕಳನ್ನು ಕೂರಿಸಿಕೊಂಡು, ಅನಗತ್ಯ ಸೈರನ್ ಹಾಕಿಕೊಂಡು ಹೋಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ.

ಹಾಗಾಗಿ ಮುಂದಿನ ದಿನಗಳಲ್ಲಿ ಇಂಥ ತಪ್ಪುಗಳು ನಡೆಯದಂತೆ ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಳ್ಳುತ್ತೇವೆ. ಅದಕ್ಕಾಗಿ ನೂತನ ತಂತ್ರಜ್ಞಾನ ಬಳಸಿಕೊಳ್ಳಲಿದ್ದೇವೆ. ರಸ್ತೆಯಲ್ಲಿರುವ ಅಂಬುಲೆನ್ಸ್‌ಗಳ ಮೇಲೆ ನಿಗಾ ವಹಿಸುವ ಮೂಲಕ ದುರುಪಯೋಗ ತಡೆಯುತ್ತೇವೆ. ಜೊತೆಗೆ ಆಸ್ಪತ್ರೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ.
-ಎಂ.ಎ. ಸಲೀಂ,
ಹೆಚ್ಚುವರಿ ಸಂಚಾರ ಪೊಲೀಸ್ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT