ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬುಲೆನ್ಸ್‌ಗೆೆ ಕಲ್ಲು; ಅಹೋರಾತ್ರಿ ಹೆದ್ದಾರಿ ತಡೆ

Last Updated 9 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ಮದ್ದೂರು: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿ ತಡೆ, ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಟ್ಟಣದ ಟಿ.ಬಿ ವೃತ್ತದ ಬಳಿ ವಳಗೆರೆಹಳ್ಳಿ ಗ್ರಾಮಸ್ಥರು ಶಾಸಕರಾದ ಕಲ್ಪನ ಸಿದ್ದರಾಜು, ಬಿ.ರಾಮಕೃಷ್ಣ ಅವರ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಿದರು.

ಜೆಡಿಎಸ್ ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಕಾರ್ಯಾಧ್ಯಕ್ಷ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಲಲಿತಾ ಪ್ರಕಾಶ್, ಮಾಜಿ ಅಧ್ಯಕ್ಷ ಸುರೇಶ್‌ಕಂಠಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್, ಉಪಾಧ್ಯಕ್ಷೆ ದೇವರಾಜಮ್ಮ, ಮುಖಂಡರಾದ ಪ್ರಸನ್ನ, ನವೀನ್, ಶೇಖರ್, ನಾರಾಯಣ್, ಶ್ರೀನಿವಾಸ್, ಯೋಗಾನಂದ, ತ್ಯಾಗರಾಜು, ಪೈರೋಜ್, ಗಿರೀಶ್, ಕೆಂಪಣ್ಣ ಪಾಲ್ಗೊಂಡಿದ್ದರು.

ನಿರಂತರ ಹೆದ್ದಾರಿ ತಡೆ: ಟಿಬಿ ವೃತ್ತದಲ್ಲಿ ನಡೆಯುತ್ತಿದ್ದ ಹೆದ್ದಾರಿ ತಡೆ ಸ್ಥಳಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ ರೈತಸಂಘದ ಮುಖಂಡ ವಿ.ಅಶೋಕ್, ಜಿಲ್ಲಾಧ್ಯಕ್ಷ ಕೆ.ನರಸರಾಜು, ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲ್ಲೂಕು ಅಧ್ಯಕ್ಷ ಅಶೋಕ್, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಧರಣಿಯಲ್ಲಿ ಪಾಲ್ಗೊಂಡರು. ಈ ಕೂಡಲೇ ಜಲಾಶಯದಿಂದ ನೀರು ನಿಲ್ಲಿಸಲು ಸರ್ಕಾರ ಮುಂದಾಗಬೇಕು. ಅಲ್ಲಿಯ ವರೆಗೆ ಆಹೋರಾತ್ರಿ ನಿರಂತರ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಘೋಷಿಸಿದರು.

ಅಂಬುಲೆನ್ಸ್‌ಗೆ ಗಾಜಿಗೆ ಕಲ್ಲು:  ಹೆದ್ದಾರಿ ತಡೆ ನಡೆಸುತ್ತಿದ್ದ ಪ್ರತಿಭಟನಾಕಾರರ ಗುಂಪು ಅಂಬುಲೆನ್ಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ಸಂಜೆ ಟಿಬಿ ವೃತ್ತದ ಬಳಿ ನಡೆಯಿತು. ಬೆಂಗಳೂರಿಗೆ ತೆರಳಿದ್ದ ಮಂಡ್ಯ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್ ವಾಹನವೊಂದು ವಾಪಾಸ್ಸಾಗುವಾಗ ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದನ್ನು ಕಂಡು ಉದ್ರಿಕ್ತಗೊಂಡ ಪ್ರತಿಭಟನಾಕಾರರು ಅಂಬುಲೆನ್ಸ್ ಗಾಜುಗಳನ್ನು ಕಲ್ಲು ಹಾಗೂ ದೊಣ್ಣೆಗಳಿಂದ ಪುಡಿ ಪುಡಿ ಮಾಡಿದರು. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಉದ್ರಿಕ್ತ ಗುಂಪು ಚೆದುರಿಸಿದರು.

ಸ್ವಾಮೀಜಿಗಳಿಂದ ಪ್ರತಿಭಟನೆ: ಅಖಿಲ ಭಾರತ ವೀರಶೈವ ಮಹಾಸಭಾ ಒಕ್ಕೂಟದ ಸದಸ್ಯರು ಸೋಮವಾರ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನೀರು ಹರಿಸುವುದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು. 

ಬೇಬಿ ಮಠದ ತಿನೇಂತ್ರನಂದ ಸ್ವಾಮೀಜಿ, ವೈದ್ಯನಾಥಪುರದ ಕದಂಬ ಜಂಗಮ ಮಠದ ರೇಣುಕಾಶಿವಾಚಾರ್ಯ ಸ್ವಾಮೀಜಿ, ಷಡಾಕ್ಷರಿ ಸ್ವಾಮೀಜಿ, ಮಹಂತೇಶ ಸ್ವಾಮೀಜಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮಹಾಸಭಾದ ತಾಲ್ಲೂಕು ಅಧ್ಯಕ್ಷ ಸಿದ್ದರಾಮು, ಕಾರ್ಯದರ್ಶಿ ಬಿ.ವಿ.ಮಂಜುನಾಥ್, ಎಚ್.ಬಿ.ಸ್ವಾಮಿ, ಪ್ರಕಾಶ್, ವೀರಭದ್ರಸ್ವಾಮಿ, ಕರುಣ, ಮಹೇಶ್, ಶಿವರಾಂ, ಮಹದೇವಪ್ಪ ಪಾಲ್ಗೊಂಡಿದ್ದರು.

ವರ್ತಕರ ಪ್ರತಿಭಟನೆ: ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಎಪಿಎಂಸಿ ಮಾರುಕಟ್ಟೆ ವರ್ತಕರು ಹಾಗೂ ಹಮಾಲಿಗಳು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿಯೇ ಅಡುಗೆ ತಯಾರಿಸಿ ಸಂಜೆಯ ವರೆಗೂ ನಿರಂತರ ಧರಣಿ ನಡೆಸಿದರು. ವರ್ತಕರ ಸಂಘದ ಅಧ್ಯಕ್ಷ ರವಿಚನ್ನಸಂದ್ರ, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ರಾಜಣ್ಣ, ಕೆಂಪಿರಯ್ಯ, ಸಲೀಂ ಶಹಬುದ್ದಿನ್, ಸಿ.ಸಿ.ಸುರೇಶ್, ಸತೀಶ್, ಲಿಂಗೇಗೌಡ, ಜಯರಾಂ, ಸುನೀಲ್, ಯೋಗೇಶ್, ಶಿವಣ್ಣ, ಸಿದ್ದರಾಜು ಭಾಗವಹಿಸಿದ್ದರು.

ಲಾರಿ ಟ್ರ್ಯಾಕ್ಟರ್ ಮೆರವಣಿಗೆ:  ತಾಲ್ಲೂಕು ಲಾರಿ ಟ್ರ್ಯಾಕ್ಟರ್ ಮಾಲೀಕರ ಸಂಘದ ಸದಸ್ಯರು ಸೋಮವಾರ ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ ನೀರು ಬಿಡುಗಡೆಗೊಳಿಸುವುದನ್ನು ಖಂಡಿಸಿ ಟ್ರ್ಯಾಕ್ಟರ್, ಲಾರಿಗಳ ಮೆರವಣಿಗೆ ನಡೆಸಿದರು.

ಶಿವಪುರ ಧ್ವಜಸತ್ಯಾಗ್ರಹ ಸೌಧದಿಂದ ಟಿಬಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಅವರು ತಮಿಳುನಾಡು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ವಿರುಪಾಕ್ಷ, ಕಾರ್ಯದರ್ಶಿ ಜಿ.ಪುಟ್ಟಸ್ವಾಮಿ, ಶಿವರಾಂ, ಅರುಣ್, ಅಮರಬಾಬು, ಅಶೊಕ್, ಸುನೀಲ್, ಅನಿಲ್, ಶೇಖರ್ ಇದ್ದರು.

ಧರಣಿ ಪ್ರತಿಭಟನೆ: ಇಲ್ಲಿನ ತಾಲ್ಲೂಕು ಕಚೇರಿ ಎದುರು ಸೋಮವಾರ ಸರ್ಕಾರಿ ನೌಕರರ ಸಂಘ, ಪ್ರೌಢಶಾಲಾ ಮುಖ್ಯ ಶಿಕ್ಷಕ್ಷರ ಸಂಘ, ಸಹಶಿಕ್ಷಕರ ಸಂಘ, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಪ್ರತಿನಿಧಿಗಳು ಧರಣಿ ಪ್ರತಿಭಟನೆ ನಡೆಸಿದರು.

ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ ನೀರು ಬಿಡುಗಡೆಗೊಳಿಸುವುದನ್ನು ಖಂಡಿಸಿ ಧರಣಿ ನಡೆಸಿದ ಅವರು ಈ ಕೂಡಲೇ ಸರ್ಕಾರ ನೀರು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ರಾಜು, ಚಿಕ್ಕಪುಟ್ಟಯ್ಯ, ಜೋಗಿಗೌಡ, ಮುರುಳಿ, ಆರಾಧ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಶ್, ಕಾರ್ಯದರ್ಶಿ ಶಿವರಾಂ, ಖಜಾಂಚಿ ಕೆಂಚೇಗೌಡ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ದೇವೇಗೌಡ, ಖಜಾಂಚಿ ಜಿ.ಸಿ.ಶಿವಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಿದಾನಂದಮೂರ್ತಿ, ಜಿಲ್ಲಾಕಾರ್ಯದರ್ಶಿ ಜಯರಾಂ, ಉಪನ್ಯಾಸಕ ಸಂಘದ ಅಧ್ಯಕ್ಷ ವಿ.ಎಂ.ಶಿವಕುಮಾರ್, ನರೇಂದ್ರಬಾಬು, ಅಂದಾನಿಗೌಡ ಭಾಗವಹಿಸಿದ್ದರು.

ಜನಜಾಗೃತಿ ವೇದಿಕೆ: ಪಟ್ಟಣದ ಜನಜಾಗೃತಿ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು. ಜಿಲ್ಲಾ ಸಂಚಾಲಕ ಸತೀಶ್, ಕೃಷ್ಣಚಾರಿ, ಮಾಯಮ್ಮ, ಮಹೇಶ್, ದೇವರಾಜು, ಮಹೆಬೂಬ್‌ಪಾಷ ಭಾಗವಹಿಸಿದ್ದರು.

ಬಿಎಸ್‌ಆರ್ ಪಕ್ಷ: ಪಟ್ಟಣದ ತಾಲ್ಲೂಕು ಕಚೇರಿ ಎದುರು  ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಧರಣಿ ಪ್ರತಿಭಟನೆ ನಡೆಸಿದರು. ಮುಖಂಡರಾದ ಅಪ್ಪು ಪಿ.ಗೌಡ, ಸಿದ್ದರಾಜು, ಅಂಬರೀಷ್, ಚೇತನ್, ಪುಟ್ಟಸ್ವಾಮಿ, ಚಿಕ್ಕಸ್ವಾಮಿ, ಕೃಷ್ಣ, ಮನು, ವಸಂತ್ ಭಾಗವಹಿಸಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT