ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿ ವಿರುದ್ಧ ಕ್ರಮ ಖಚಿತ

Last Updated 18 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿಯ (ಸಿಇಸಿ) ಪ್ರಮುಖ ಶಿಫಾರಸುಗಳು ಮತ್ತು ನ್ಯಾಯಾಲಯ ನೀಡುವ ಎಲ್ಲ ನಿರ್ದೇಶನಗಳನ್ನೂ ಜಾರಿಗೆ ತರಲು ಬದ್ಧವಾಗಿರುವುದಾಗಿ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಇದೇ ವೇಳೆ ಗುರುವಾರ ಪ್ರಕರಣದ ವಿಚಾರಣೆ ನಡೆದ ಬಳಿಕ   ಸಿಇಸಿ ವರದಿಯಲ್ಲಿ ಪ್ರಸ್ತಾಪಿಸಿರುವ ಗಣಿ ಕಂಪೆನಿಗಳ ವಿರುದ್ಧ ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಕ್ರಮ ಗಣಿಗಾರಿಕೆ ತಡೆಯಲು ಈಗಾಗಲೇ ಕೈಗೊಂಡಿರುವ ಕ್ರಮಗಳು ಮತ್ತು ಉದ್ದೇಶಿತ ಯೋಜನೆಯ ಬಗ್ಗೆಯೂ ಸುಪ್ರೀಂಕೋರ್ಟ್‌ಗೆ ವಿವರಣೆ ನೀಡಲು ಸರ್ಕಾರ ನಿರ್ಧರಿಸಿದೆ.

ಸತತ ಮೂರನೇ ದಿನವಾದ ಸೋಮವಾರವೂ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಸರ್ಕಾರದ ಉತ್ತರವನ್ನು ಅಂತಿಮಗೊಳಿಸುವ ಪ್ರಯತ್ನ ನಡೆಯಿತು. ಸಂಜೆ ವಿಧಾನಸೌಧದಲ್ಲಿ ಆರಂಭವಾದ ಸಭೆ ತಡರಾತ್ರಿಯವರೆಗೂ ನಡೆಯಿತು. ಎಸ್,ವಿ. ರಂಗನಾಥ್, ಅರಣ್ಯ ಇಲಾಖೆ ಪ್ರಧಾನ ಕಾರ್ಯ ದರ್ಶಿ ಕೌಶಿಕ್ ಮುಖರ್ಜಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಬಿ,ಎಸ್.ರಾಮಪ್ರಸಾದ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಎಚ್.ಆರ್.ಶ್ರೀನಿವಾಸ್, ಅಡ್ವೊಕೇಟ್ ಜನರಲ್ ಆಶೋಕ ಹಾರ್ನಹಳ್ಳಿ, ಸರ್ಕಾರದ ಪರ ವಕೀಲ ರವೀಂದ್ರ ಜಿ.ಕೊಲ್ಲೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಬಳ್ಳಾರಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಿಇಸಿ ಶುಕ್ರವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಐದು ಮಧ್ಯಂತರ ವರದಿಗಳ ಬಗ್ಗೆಯೂ ರಾಜ್ಯ ಸರ್ಕಾರ ಪ್ರಮಾಣಪತ್ರದ ಮೂಲಕ ಉತ್ತರ ಸಲ್ಲಿಸಲಿದೆ. ವರದಿಯಲ್ಲಿ ಪ್ರಸ್ತಾಪಿಸಿರುವ ಎಲ್ಲ ವಿಷಯಗಳ ಬಗ್ಗೆಯೂ ಈಗಾಗಲೇ ಕೈಗೊಂಡಿರುವ ಕ್ರಮ ಮತ್ತು ಉದ್ದೇಶಿತ ಕ್ರಮಗಳ ವಿವರವನ್ನು ನ್ಯಾಯಾಲಯದ ಮುಂದಿಡಲು ಸರ್ಕಾರ ಸಿದ್ಧತೆ ನಡೆಸಿದೆ. ಪ್ರಮಾಣಪತ್ರದ ಕರಡು ಪ್ರತಿ ಸಿದ್ಧವಾಗಿದ್ದು, ಅದನ್ನು ಅಂತಿಮಗೊಳಿಸಿ ಬುಧವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ.

ಅದಿರು ರಫ್ತು ನಿಷೇಧ, ಅದಿರು ಸಾಗಣೆ ಮತ್ತು ಸಂಗ್ರಹಣೆ ನಿಯಂತ್ರಣಕ್ಕಾಗಿ ಇತ್ತೀಚೆಗೆ ಹೊಸ ನಿಯಮ ಜಾರಿಗೊಳಿಸಿರುವುದು, ಅದಿರು ಸಾಗಣೆಗೆ ಇ-ಪರವಾನಗಿ ಪದ್ಧತಿ ರೂಪಿಸಿರುವುದು, ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಲೋಕಾಯುಕ್ತ ವರದಿ ಆಧರಿಸಿ ಮೊಕದ್ದಮೆ ದಾಖಲಿಸಿರುವುದು ಮತ್ತಿತರ ವಿವರಗಳನ್ನು ಪ್ರಮಾಣ ಪತ್ರದಲ್ಲಿ ನೀಡಲು ಸರ್ಕಾರ ಮುಂದಾಗಿದೆ.

‘ಅಕ್ರಮ ಗಣಿಗಾರಿಕೆ ನಿಯಂತ್ರಿಸುವ ವಿಷಯದಲ್ಲಿ ಸರ್ಕಾರ ಗಂಭೀರವಾಗಿದೆ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗವುದು. ಈ ಸಂಬಂಧ ಈಗಾಗಲೇ ಕೈಗೊಂಡಿರುವ ಕ್ರಮಗಳು, ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಬಗ್ಗೆ ಪ್ರಮಾಣ ಪತ್ರದಲ್ಲಿ ವಿವರಣೆ ನೀಡಲಾಗುವುದು. ಅಕ್ರಮ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದ್ಧತೆಯನ್ನೂ ವ್ಯಕ್ತಪಡಿಸಲಾಗುವುದು’ ಎಂದು ಸರ್ಕಾರದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ವಿಚಾರಣೆ ನಂತರ ಕ್ರಮ
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿವೆ ಎಂದು ಹೆಸರಿಸಿರುವ ಗಣಿ ಕಂಪೆನಿಗಳ ವಿರುದ್ಧ ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ವಿಚಾರಣೆ ಬಳಿಕ ಸರ್ಕಾರ ತೀರ್ಮಾನಕ್ಕೆ ಬರಲಿದೆ. ಅಕ್ರಮದಲ್ಲಿ ಭಾಗಿಯಾದ ಕಂಪೆನಿಗಳ ಗುತ್ತಿಗೆ ರದ್ಧತಿ, ಅದಿರು ಸಾಗಣೆ ಪರವಾನಗಿ ರದ್ಧು, ಕ್ರಿಮಿನಲ್ ಮೊಕದ್ದಮೆ ದಾಖಲು ಮತ್ತಿತರ ಗಂಭೀರ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT