ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ ಕುರಿತ ತನಿಖೆ: ಸರ್ಕಾರದ ಸಹಕಾರ ಕೋರಿದ ಸಿಬಿಐ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:ಬಳ್ಳಾರಿ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಎರಡು ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ತನಿಖೆಗೆ ಅಗತ್ಯ ಸಹಕಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿಯೇ ಕೋರಿಕೆ ಸಲ್ಲಿಸಿದ್ದಾರೆ. ತನಿಖಾ ವೆಚ್ಚದ ಬಾಬ್ತು 25 ಲಕ್ಷ ರೂಪಾಯಿಯನ್ನೂ ಪಾವತಿಸುವಂತೆ ಕೋರಿದ್ದಾರೆ.

ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರನ್ನು ಶುಕ್ರವಾರ ಭೇಟಿ ಮಾಡಿದ ಸಿಬಿಐ ಅಧಿಕಾರಿಗಳು, ತನಿಖೆಗೆ ಸಹಕಾರ ಕೋರಿರುವ ಪತ್ರವನ್ನು ಸಲ್ಲಿಸಿದರು. ತನಿಖೆಗೆ ಸಂಬಂಧಿಸಿದಂತೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ಅಗತ್ಯವಿರುವ ಎಲ್ಲ ಸಹಕಾರವನ್ನೂ ಒದಗಿಸುವುದಾಗಿ ಮುಖ್ಯ ಕಾರ್ಯದರ್ಶಿಯವರು ಸಿಬಿಐಗೆ ಭರವಸೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ಆದೇಶದಂತೆ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಮತ್ತು ಬಳ್ಳಾರಿಯ ರಾಜೇಂದ್ರ ಜೈನ್ ಒಡೆತನದ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ (ಡಿಎಂಎಸ್) ವಿರುದ್ಧ ಸಿಬಿಐ ತನಿಖೆ ಆರಂಭಿಸಿದೆ. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವುದು, ಪರಿಶೀಲನೆ ಸಂದರ್ಭದಲ್ಲಿ ಸ್ಥಳೀಯ ಪೊಲೀಸರಿಂದ ಭದ್ರತೆ ಒದಗಿಸುವುದು, ರಾಜ್ಯ ಸರ್ಕಾರದ ವಶದಲ್ಲಿರುವ ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡುವುದು ಸೇರಿದಂತೆ ಪೂರ್ಣ ಸಹಕಾರ ನೀಡುವಂತೆ ಸಿಬಿಐ ರಾಜ್ಯ ಸರ್ಕಾರವನ್ನು ಕೋರಿದೆ.

ಎರಡೂ ಪ್ರಕರಣಗಳಲ್ಲಿ ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಮತ್ತು ವಿವಿಧ ಕಡೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ದಾಖಲೆಗಳನ್ನು ಆಧರಿಸಿ ಮುಂದಿನ ತನಿಖೆಯ ಬಗ್ಗೆ ಯೋಜನೆಯೊಂದನ್ನು ರೂಪಿಸಿರುವ ಸಿಬಿಐ ಅಧಿಕಾರಿಗಳು, ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಸಹಕಾರ ಕೋರಿದ್ದಾರೆ. ತನಿಖೆಯ ಸಂದರ್ಭದಲ್ಲಿ ಯಾವ ಬಗೆಯ ಸಹಕಾರ ಅಗತ್ಯವಿದೆ ಎಂಬ ಪೂರ್ಣ ವಿವರವನ್ನು ಮುಖ್ಯ ಕಾರ್ಯದರ್ಶಿಯವರಿಗೆ ನೀಡಿರುವ ಪತ್ರವಲ್ಲಿ ಒದಗಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಎಎಂಸಿ ಮತ್ತು ಡಿಎಂಎಸ್‌ಗೆ ಸಂಬಂಧಿಸಿದ ಗಣಿ ಗುತ್ತಿಗೆಗಳ ನವೀಕರಣಕ್ಕೆ ಸಂಬಂಧಿಸಿದ ಸಮಗ್ರ ದಾಖಲೆಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಂತಿಮವಾಗಿ ಅನುಮೋದಿಸಿದ್ದ ಗಣಿ ಗುತ್ತಿಗೆ ನಕ್ಷೆ, ಈ ಸಂಬಂಧ ರಾಜ್ಯಪತ್ರದ ಮೂಲಕ ಹೊರಡಿಸಿದ್ದ ಅಧಿಸೂಚನೆಯ ಪ್ರತಿಗಳು, ಎರಡೂ ಗಣಿಗಳಿಂದ ಅದಿರು ಸಾಗಣೆಗೆ ನೀಡಿದ್ದ ಪರವಾನಗಿಗಳ ಪೂರ್ಣ ವಿವರ, ಎರಡೂ ಗಣಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಈ ಹಿಂದೆ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ದೂರುಗಳು ಮತ್ತಿತರ ವಿವರವನ್ನು ಒದಗಿಸುವಂತೆ ಸಿಬಿಐ ಕೋರಿದೆ. ಈ ಎಲ್ಲ ಮಾಹಿತಿಗಳ ಜೊತೆ ಸಂಬಂಧಿಸಿದ ಪೂರ್ಣ ದಾಖಲೆಗಳನ್ನೂ ನೀಡುವಂತೆ ತನಿಖಾ ತಂಡ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರಮುಖೇನ ತಿಳಿಸಿದೆ.

ವೆಚ್ಚ ಪಾವತಿಗೂ ಮನವಿ:
ರಾಜ್ಯದೊಳಗಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಪೂರಕವಾಗಿ 25 ಲಕ್ಷ ರೂಪಾಯಿ ವೆಚ್ಚವನ್ನೂ ಭರಿಸುವಂತೆ ಸಿಬಿಐ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಅಲ್ಲದೇ ತನಿಖೆಯ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಇಲಾಖೆ ಒದಗಿಸುವ ಭದ್ರತೆಗೆ ಶುಲ್ಕ ವಿಧಿಸದಂತೆಯೂ ಕ್ರಮ ಕೈಗೊಳ್ಳಲು ಕೋರಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT