ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಟೋಲ್ ಸಂಗ್ರಹ ಕೇಂದ್ರಗಳ ಧ್ವಂಸ

Last Updated 25 ಜುಲೈ 2013, 6:06 IST
ಅಕ್ಷರ ಗಾತ್ರ

ಆನೇಕಲ್: ಬಿ.ಇ.ಟಿ.ಎಲ್ (ಬೆಂಗಳೂರು ಎಲಿವೆಟೆಡ್ ಟೋಲ್ ವೇ ಲಿಮಿಟೆಡ್) ಸಂಸ್ಥೆಯವರು ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಹೊಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 7ರ ಅತ್ತಿಬೆಲೆ ಗಡಿ ಭಾಗದ ಸರ್ವೀಸ್ ರಸ್ತೆಯಲ್ಲಿನ ಟೋಲ್ ಕೇಂದ್ರಗಳನ್ನು ಬುಧವಾರ ಬೆಳಿಗ್ಗೆ ಧ್ವಂಸಗೊಳಿಲಾಯಿತು.

ಕಾರ್ಯಾಚರಣೆಯ ನೇತೃತ್ವವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಡಾ. ಸಿ.ಪ್ರಕಾಶ್ ವಹಿಸಿದ್ದರು.
ಅತ್ತಿಬೆಲೆಯು ತಾಲ್ಲೂಕಿನ ಗಡಿ ಭಾಗದಲ್ಲಿದ್ದು ಇಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯು ಬೆಂಗಳೂರಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದೆ.

ಈ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಸರ್ವೀಸ್ ರಸ್ತೆಯಿದ್ದು ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಮೂಲಕ ಸಂಚರಿಸಿದರೆ ಪ್ರತಿನಿತ್ಯವೂ ಟೋಲ್ ತೆರಬೇಕಾದ ಪರಿಸ್ಥಿತಿ ಇತ್ತು. ಬೆಂಗಳೂರು ಎಲಿವೆಟೆಡ್ ಟೋಲ್ ವೇ ಲಿಮಿಟೆಡ್ ಸಂಸ್ಥೆಯವರು ಸುಮಾರು 3 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಇಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹವನ್ನು ಮಾಡುತ್ತಿದ್ದರು ಎಂದು ದೂರಲಾಗಿತ್ತು. 

ಈ ಬಗ್ಗೆ ಸ್ಥಳೀಯರು ಮತ್ತು ಟಿಪ್ಪರ್ ಲಾರಿ ಮಾಲೀಕರು ಹಲವು ಬಾರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಬುಧವಾರ ಬೆಳಿಗ್ಗೆ ಜಿಲ್ಲಾಧಿಕಾರಿ, ಉಪ ವಿಭಾಗ ಅಧಿಕಾರಿ ಎಲ್.ಸಿ.ನಾಗರಾಜ್, ತಹಶೀಲ್ದಾರ್ ಶಿವೇಗೌಡ ಸೇರಿದಂತೆ ಹಲವು ಅಧಿಕಾರಿಗಳು ಜೆಸಿಬಿ ಯಂತ್ರಗಳೊಂದಿಗೆ ಸರ್ವೀಸ್ ರಸ್ತೆಯಲ್ಲಿರುವ ಟೋಲ್ ಸಂಗ್ರಹದ ಸ್ಥಳಕ್ಕೆ ಆಗಮಿಸಿದರು. ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಈ ಕೇಂದ್ರಗಳನ್ನು ಧ್ವಂಸಗೊಳಿಸಲಾಯಿತು. ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಯಾವುದೇ ಟೋಲ್ ಸಂಗ್ರಹವಿಲ್ಲದೆ ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು.

ಕಾನೂನು ಕ್ರಮ: `ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಅತ್ತಿಬೆಲೆಯಿಂದ ಹೊಸೂರು ಕಡೆಗೆ ಹೋಗುವ ಮಾರ್ಗದಲ್ಲಿ ಹಾಗೂ ಹೊಸೂರು ಕಡೆಯಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಒಂದೊಂದು ಟೋಲ್ ಸಂಗ್ರಹ ಕೇಂದ್ರ ನಿರ್ಮಿಸಲಾಗಿತ್ತು. ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಈ ಕೇಂದ್ರಗಳಲ್ಲಿ ವಾಹನ ಸವಾರರಿಂದ ಒತ್ತಾಯದಿಂದ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ ಎಂಬ ದೂರುಗಳು ನಮಗೆ ಬಂದಿದ್ದವು. ಹಾಗೂ ಈ ವಿಷಯದ ಬಗ್ಗೆ ಸಂಬಂಧಿಸಿದ ಸಂಸ್ಥೆಗಳಿಗೆ ಹಲವು ನೋಟಿಸ್‌ಗಳನ್ನು ನೀಡಿ ಎಚ್ಚರಿಸಲಾಗಿತ್ತು.

ಆದರೆ ಬಿಇಟಿಎಲ್ ಸಂಸ್ಥೆಯವರು ನೋಟಿಸ್‌ಗೆ ಸರಿಯಾಗಿ ಸ್ಪಂದಿಸದೆ ಕಾನೂನು ಉಲ್ಲಂಘಿಸಿದ ಪರಿಣಾಮ ಸರ್ವೀಸ್ ರಸ್ತೆಯಲ್ಲಿರುವ ಈ ಕೇಂದ್ರಗಳನ್ನು ಧ್ವಂಸಗೊಳಿಸಲಾಗಿದೆ. ಹಲವಾರು ವರ್ಷಗಳಿಂದ ಸಂಗ್ರಹಿಸಿರುವ ಟೋಲ್‌ನ್ನು ಸರಾಸರಿಯ ಆಧಾರದ ಮೇಲೆ ಕಾನೂನು ರೀತಿಯಲ್ಲಿ ಮರಳಿ ಸರ್ಕಾರಕ್ಕೆ ಹಿಂದುರಿಗಿಸಬೇಕು ಎಂದು ನೋಟಿಸ್ ನೀಡಲಾಗಿದೆ' ಎಂದು ಜಿಲ್ಲಾಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.

ಅಪಾಯಕಾರಿ ಕೆರೆಗಳ ಸಮೀಕ್ಷೆ
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸಿ.ಪ್ರಕಾಶ್, `ಹಾಸನ ಜಿಲ್ಲೆ ಬೇಲೂರಿನಲ್ಲಿ ಸಂಭವಿಸಿದ ಬಸ್ ದುರಂತದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿರುವ ಕೆರೆ ಪ್ರದೇಶಗಳ ಬಗ್ಗೆ ಸಮೀಕ್ಷೆ ಮಾಡಿ ಅಪಘಾತಗಳು ಸಂಭವಿಸದಂತೆ ತಡೆಗೋಡೆಗಳನ್ನು ನಿರ್ಮಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ನೀಡಲಾಗುವುದು' ಎಂದು ತಿಳಿಸಿದರು.

ಆನೇಕಲ್ ತಾಲ್ಲೂಕಿನಲ್ಲಿ 234 ಕೆರೆಗಳಿದ್ದು ಅದರಲ್ಲಿ 70ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ.  80 ಕೆರೆಗಳ ಅಳತೆ ಮಾಡಲಾಗಿದೆ. ಇನ್ನುಳಿದ ಕೆರೆಗಳನ್ನು ಅಳತೆ ಮಾಡಿಸಿ ಅವುಗಳಲ್ಲಿನ ಹೂಳು ತೆಗೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

`ಲಾರಿ ಮಾಲಿಕರ ಸಂಘದ ಅಧ್ಯಕ್ಷ ಗೋಪಾಲ ರೆಡ್ಡಿ ಮಾತನಾಡಿ, `ಅತ್ತಿಬೆಲೆಯ ಗಡಿಭಾಗದಲ್ಲಿರುವ ಟೋಲ್ ಸಂಗ್ರಹ ಕೇಂದ್ರದವರು ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ಸ್ಥಳೀಯರಿಂದಲೂ ಒತ್ತಾಯದಿಂದ ಶುಲ್ಕ ಸಂಗ್ರಹಿಸುತ್ತಿದ್ದರು. ಸ್ಥಳೀಯರು ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಈಗ ಕಾನೂನು ರೀತಿಯಲ್ಲಿ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿರುವುದಕ್ಕೆ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಡಿವೈಎಸ್‌ಪಿ ಕುಮಾರಸ್ವಾಮಿ, ಅತ್ತಿಬೆಲೆ ಪಿಎಸ್‌ಐ ಗೀರಿಶ್, ಲಾರಿ ಮಾಲಿಕರ ಸಂಘದ ವಿಶ್ವನಾಥ, ನಂಜೇಗೌಡ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT