ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಗಣಿಗಾರಿಕೆ ತಡೆಗೆ ಕ್ರಮ

Last Updated 6 ಏಪ್ರಿಲ್ 2011, 8:05 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಹಾಲಿ ನಡೆದಿರುವ ಅಕ್ರಮ ಮರಳು ಗಣಿಗಾರಿಕೆ ಹಾಗೂ ಅಕ್ರಮ ಸಾಗಣೆ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾ  ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸರ್ಕಾರದ ನೂತನ ಮರಳು ನೀತಿ ಜಾರಿಯಲ್ಲಿ ಇರುವ ಲೋಪದೋಷಗಳು ಹಾಗೂ ಅಕ್ರಮ  ಮರಳು ಗಣಿಗಾರಿಕೆ ಮತ್ತು ಅಕ್ರಮ ಸಾಗಣೆ ಕುರಿತಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಡನೆ ಚರ್ಚೆ ನಡೆಸಿ ಅವರು ಮಾತನಾಡಿದರು.

ಅಕ್ರಮ ಮರಳು ಗಣಿಗಾರಿಕೆಯ ಹಿನ್ನೆಲೆಯಲ್ಲಿ ನಡೆದಿರುವ ಗೂಂಡಾ ಪ್ರವೃತ್ತಿಗಳನ್ನು ತಡೆಗಟ್ಟಲು ಸೂಕ್ತ ಕ್ರಮವನ್ನು ಕೂಡಲೇ ಕೈಗೊಳ್ಳಲು  ಸೂಚಿಸಿದರು. ಸಾರ್ವಜನಿಕರಿಗೆ ಮರಳನ್ನು ವಿತರಿಸಲು ಆಗುತ್ತಿರುವ ಲೋಪದೋಷಗಳ ಬಗ್ಗೆ ಚರ್ಚಿಸಿದ ಅವರು, ಹೊಸ ಮರಳು ನೀತಿ ಜಾರಿಯಿಂದ ಜಿಲ್ಲೆಯಲ್ಲಿ ಆಗಬಹುದಾದ ಲೋಪಗಳ ಬಗ್ಗೆ, ಅದರಿಂದ ಸಾರ್ವಜನಿಕರಿಗೆ ಉಂಟಾಗಬಹುದಾದ ತೊಂದರೆಗಳ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಡನೆ ಚರ್ಚಿಸಿ ಅಗತ್ಯ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆಯ ಲೋಪದೋಷಗಳು ಮತ್ತು ನೂತನ  ಮರಳು ನೀತಿಯ ಜಾರಿ ಬಗ್ಗೆ ಸಾಧಕ-ಬಾಧಕಗಳನ್ನು ಹಾಗೂ ಕೈಗೊಳ್ಳಬೇಕಾದ ಪೂರ್ವಸಿದ್ಧತೆ ವಿವರಗಳನ್ನು ಸಚಿವರ ಗಮನಕ್ಕೆ ತಂದರು.ಸದ್ಯಕ್ಕೆ ಮರಳು ನೀತಿ ಜಾರಿಯಲ್ಲಿ ತಡವಾಗುತ್ತಿರುವುದರಿಂದ ಮರಳು ಗಣಿಗಾರಿಕೆಗೆ ತ್ವರಿತವಾಗಿ ಬದಲಿ ವ್ಯವಸ್ಥೆ ಮಾಡಬೇಕಿದೆ. ಈಗಿರುವ ಖಾಸಗಿ  ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸುವ ಮೂಲಕ ಅವರಿಗೆ ಬದಲಾವಣೆಯ ಪರ್ವ ಒದಗಿಸಬೇಕಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಇರುವ ಸಮಸ್ಯೆಗಳ ಆಳಕ್ಕೆ ಇಳಿದು ಅರ್ಥ ಮಾಡಿಕೊಂಡಿದ್ದು, ಇದನ್ನು ರಾಜ್ಯಮಟ್ಟದಲ್ಲಿ ಚರ್ಚಿಸಿ ಪರಿಹಾರ ರೂಪಿಸಬೇಕಿದೆ.

ಸದ್ಯಕ್ಕೆ ಕಾನೂನು  ಬಾಹಿರವಾಗಿ ಮರಳು ಗಣಿಗಾರಿಕೆ ತಡೆಗಟ್ಟಲು ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ತಡೆಗೆ ಇರುವ ತೊಂದರೆಗಳನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಪೊಲೀಸ್  ಡಿವೈಎಸ್‌ಪಿ ವೆಂಕಟಸ್ವಾಮಿ, ಗಣಿ, ಅರಣ್ಯ, ಪರಿಸರ, ಸಾರಿಗೆ ಹಾಗೂ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT