ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ – ಸಕ್ರಮಕ್ಕೆ ಪರಿಷತ್ತಿನಲ್ಲಿ ತಕರಾರು

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ನಗರ ಪ್ರದೇಶಗಳಲ್ಲಿ ಸರ್ಕಾರದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿ ಕೊಂಡಿರುವ ವಾಸದ ಮನೆಗಳನ್ನು ಸಕ್ರಮಗೊಳಿಸು ವುದಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆ’ಯನ್ನು ಆಯ್ಕೆ ಸಮಿತಿಗೆ ಒಪ್ಪಿಸುವಂತೆ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಈ ಮಸೂದೆಯನ್ನು ಬುಧವಾರ ಪರಿಷತ್ತಿನಲ್ಲಿ ಮಂಡಿಸಿದ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಒಪ್ಪಿಗೆ ನೀಡುವಂತೆ ಮನವಿ ಮಾಡಿದರು. ಬಳಿಕ ಮಾತನಾಡಿದ ಬಿಜೆಪಿ ಸದಸ್ಯರು, ‘ಕಳೆದ ವರ್ಷ ಇದೇ ಮಸೂದೆಯನ್ನು ಅಂಗೀಕರಿಸಿ ರಾಜ್ಯ ಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು.

ಆದರೆ, ಮಸೂದೆ ಭೂಗಳ್ಳರ ಪರವಾಗಿದೆ ಎಂಬ ಸಂಶಯ ವ್ಯಕ್ತಪಡಿಸಿರುವ ರಾಜ್ಯಪಾಲ ಎಚ್‌.ಆರ್‌. ಭಾರ ದ್ವಾಜ್ ಅವರು ಮರುಪರಿಶೀಲಿಸುವಂತೆ ವಾಪಸು ಕಳುಹಿಸಿದ್ದಾರೆ. ಈಗ ಏಕಾಏಕಿ ಮಸೂದೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದರು. ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ, ಬಿಜೆಪಿ ಸದಸ್ಯರಾದ ಅಶ್ವತ್ಥನಾರಾಯಣ, ಬಿ.ಜೆ. ಪುಟ್ಟಸ್ವಾಮಿ ಸೇರಿದಂತೆ ಹಲವರು ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸುವಂತೆ ಆಗ್ರಹಿಸಿದರು.

ಜೆಡಿಎಸ್‌ ನಾಯಕ ಎಂ.ಸಿ.ನಾಣಯ್ಯ ಕೂಡ ಅದನ್ನು ಬೆಂಬಲಿಸಿದರು. ಸರ್ಕಾರದ ಪರವಾಗಿ ಸಚಿವರಾದ ಎಸ್‌.ಆರ್‌.ಪಾಟೀಲ ಹಾಗೂ ಶ್ರೀನಿವಾಸ ಪ್ರಸಾದ್ ಅವರು ಹಲವು ಬಾರಿ ಸ್ಪಷ್ಟನೆ ನೀಡಿದರೂ ವಿರೋಧ ಪಕ್ಷಗಳು ಮಣಿಯಲಿಲ್ಲ. ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರಿಗೆ ಲಿಖಿತ ಮನವಿ ಸಲ್ಲಿಸಿದ ಸದಾನಂದ ಗೌಡ ಮತ್ತು ನಾಣಯ್ಯ ಅವರು, ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸುವಂತೆ ಕೋರಿದರು.

ಈ ವಿಷಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಹಮತ ಮೂಡಿಸಲು ಸಭಾಪತಿಯವರು ಪ್ರಯತ್ನ ನಡೆಸಿದರು. ಆದರೆ, ಅದು ಸಫಲವಾಗಲಿಲ್ಲ. ಪ್ರತಿಪಕ್ಷಗಳು ತಮ್ಮ ನಿಲುವಿಗೆ ಅಂಟಿಕೊಂಡವು. ಸರ್ಕಾರದ ಕಡೆಯಿಂದ ಸಹಮತ ವ್ಯಕ್ತವಾಗಲಿಲ್ಲ. ಇನ್ನೂ ಒಂದು ಹೆಜ್ಜೆ ಮುಂದಿಟ್ಟ ವಿಪಕ್ಷಗಳು ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂಬ ಪ್ರಸ್ತಾವವನ್ನೇ ಮತಕ್ಕೆ ಹಾಕುವಂತೆ ಆಗ್ರಹಿಸಿದವು.

ಮುಖ್ಯಮಂತ್ರಿಯವರ ಜೊತೆ ಸಮಾಲೋಚಿಸಿದ ಬಳಿಕ ತಮ್ಮ ನಿಲುವು ಪ್ರಕಟಿಸುವುದಾಗಿ ಎಸ್.ಆರ್.ಪಾಟೀಲ ಮತ್ತು ಶ್ರೀನಿವಾಸ ಪ್ರಸಾದ್ ಅವರು ಸಭಾಪತಿಯವರಿಗೆ ತಿಳಿಸಿದರು. ಈ ಕಾರಣದಿಂದ ಸಭಾಪತಿಯವರು ಈ ಮಸೂದೆ ಕುರಿತ ಚರ್ಚೆಯನ್ನು ಅಷ್ಟಕ್ಕೆ ಸ್ಥಗಿತಗೊಳಿಸಿದರು. ಗುರುವಾರ ಚರ್ಚೆ ಮುಂದುವರಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT