ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಶಾಮಕ ಠಾಣೆ ಆರಂಭಕ್ಕೆ ಇನ್ನೂ 3 ತಿಂಗಳು

Last Updated 7 ಡಿಸೆಂಬರ್ 2012, 6:54 IST
ಅಕ್ಷರ ಗಾತ್ರ

ಧಾರವಾಡ: ನಗರದಲ್ಲಿಯೇ ಒಂದು ಅಗ್ನಿಶಾಮಕ ಠಾಣೆ ಇದ್ದರೆ ಸೂಪರ್ ಮಾರ್ಕೆಟ್‌ನಲ್ಲಿ ಮಂಗಳವಾರ ಬೆಳಗ್ಗಿನ ಜಾವ ಸಂಭವಿಸಿದ ದುರಂತದ ಪ್ರಮಾಣವನ್ನು ತಗ್ಗಿಸಬಹುದಿತ್ತೇ? ಹೀಗೊಂದು ಪ್ರಶ್ನೆ ನಗರದ ನಾಗರಿಕರನ್ನು ಕಾಡುತ್ತಿದೆ.

ಆದರೆ, ಕಳೆದ ನವೆಂಬರ್‌ನಲ್ಲಿಯೇ ಮುಕ್ತಾಯವಾಗಬೇಕಿದ್ದ ಇಲ್ಲಿನ ಎಪಿಎಂಸಿ ಬಳಿಯ ಅಗ್ನಿಶಾಮಕ ಠಾಣೆಯ ಕಟ್ಟಡ ಇನ್ನೂ ಮುಕ್ತಾಯಗೊಂಡಿಲ್ಲ. ನಿರ್ಮಾಣ ಗುತ್ತಿಗೆದಾರರು ಫೆಬ್ರುವರಿವರೆಗೆ ಹೆಚ್ಚುವರಿ ಸಮಯಾವಕಾಶ ಕೇಳಿದ್ದಾರೆ. ಅಗ್ನಿಶಾಮಕ ಇಲಾಖೆಯೂ ಸಮಯವನ್ನು ದಯಪಾಲಿಸಿದೆ. ಜಿಲ್ಲಾ ಕೇಂದ್ರ, ಮೇಲಾಗಿ ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿರುವ ಧಾರವಾಡಕ್ಕೇ ಇನ್ನೂ ಒಂದು ಅಗ್ನಿಶಾಮಕ ಠಾಣೆ ಇಲ್ಲ ಎಂದರೆ ನೀವು ನಂಬಲೇಬೇಕು.

ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಅಗ್ನಿಶಾಮಕ ಠಾಣೆಗೆ ಉತ್ತರ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಹಣಕಾಸು ನೆರವು ನೀಡಿದೆ. ಇದರೊಟ್ಟಿಗೆ ರಾಣೆಬೆನ್ನೂರಿನಲ್ಲಿಯೂ ಇಷ್ಟೇ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆಯೊಂದು ನಿರ್ಮಾಣವಾಗುತ್ತಿದೆ.

ಆದರೆ ದಿನೇ ದಿನೇ ವಿಳಂಬವಾಗುತ್ತಿರುವುದರಿಂದ ಅಗ್ನಿಶಾಮಕ ಇಲಾಖೆಯ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ.
ತಿಂಗಳ ಹಿಂದೆಯಷ್ಟೇ ನಗರದ ಹಳೆ ಬಸ್ ನಿಲ್ದಾಣಕ್ಕೆ ಹತ್ತಿಕೊಂಡಂತೆ ಇರುವ ಬೇಕರಿ ಮಳಿಗೆ ಅಗ್ನಿ ಆಕಸ್ಮಿಕದಿಂದ ಸುಟ್ಟು ಹೋಗಿತ್ತು. ಆಗಲೂ ಅಗ್ನಿಶಾಮಕ ದಳದವರು ದೂರದ ಅಮರಗೋಳದಿಂದಲೇ ಬಂದಿದ್ದರು.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಪ್ರಧಾನ ಅಗ್ನಿಶಾಮಕ ಅಧಿಕಾರಿ ಐ.ಎಫ್. ಬಡಬಡೆ, `ಜಿಲ್ಲಾ ಕೇಂದ್ರವಾದ ಧಾರವಾಡಕ್ಕೆ ಈಗಾಗಲೇ 6 ಅಗ್ನಿಶಾಮಕ ವಾಹನಗಳು, 45 ಸಿಬ್ಬಂದಿಯನ್ನು ಮಂಜೂರು ಮಾಡಲಾಗಿದೆ. ನವೆಂಬರ್ ತಿಂಗಳಿಗೇ ಮುಕ್ತಾಯವಾಗಿ ಈಗಾಗಲೇ ಕೆಲಸ ಆರಂಭವಾಗಬೇಕಿತ್ತು. ಆದರೆ ಇನ್ನೂ ಅಂತಿಮ ಹಂತದ ಕಾಮಗಾರಿ ಮಾತ್ರ ಬಾಕಿ ಇದೆ' ಎಂದರು.

ಸೂಪರ್ ಮಾರ್ಕೆಟ್‌ನಲ್ಲಿರುವ ಅಂಗಡಿಗಳನ್ನು ಒತ್ತೊತ್ತಾಗಿ ನಿರ್ಮಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, `ಆ ಪ್ರದೇಶದಲ್ಲಿ ವಾಹನ ಹೋಗಲೂ ಕಷ್ಟವಾಯಿತು. ಅಂಗಡಿಗಳ ಸಾಲಿನ ಮಧ್ಯೆ ಒಂದು ವಾಹನ ಹೋಗುವಷ್ಟಾದರೂ ಜಾಗ ಬಿಡಬೇಕಿತ್ತು.
ಈ ಬಗ್ಗೆ ಅಂದಿನ ಪಾಲಿಕೆ ಆಯುಕ್ತ ಪಿ.ಎಸ್.ವಸ್ತ್ರದ ಅವರ ಗಮನಕ್ಕೂ ತಂದಿದ್ದೆ' ಎಂದು ಸ್ಮರಿಸಿದರು.

ಸಿಎಂ ನಿರೀಕ್ಷೆಯಲ್ಲಿ ವ್ಯಾಪಾರಿಗಳು: ಅಗ್ನಿ ದುರಂತದಲ್ಲಿ ಸುಟ್ಟು ಭಸ್ಮವಾದ ಅಂಗಡಿಗಳನ್ನು ವೀಕ್ಷಿಸಿ ಪರಿಹಾರ ಘೋಷಿಸಲು ಮುಖ್ಯಮಂತ್ರಿಗಳು ಬರಲಿದ್ದಾರೆ ಎಂಬ ನಿರೀಕ್ಷೆಯನ್ನು ಇಲ್ಲಿನ ಅಂಗಡಿಕಾರರು ಹೊಂದಿದ್ದಾರೆ.

ಪಾಲಿಕೆ ಮಂಗಳವಾರ ಸೇರಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ತಲಾ 25 ಸಾವಿರ ರೂಪಾಯಿಗಳ ಪರಿಹಾರ ಘೋಷಿಸಿದೆ. ಆದರೆ ರಾಜ್ಯ ಸರ್ಕಾರದಿಂದ ಇನ್ನೂ ಪರಿಹಾರದ ಭರವಸೆ ದೊರೆತಿಲ್ಲ. ಅದಕ್ಕೆಂದೇ ಸಿಎಂ ಜಗದೀಶ ಶೆಟ್ಟರ ಅವರ ನಿರೀಕ್ಷೆಯಲ್ಲಿದ್ದಾರೆ.
ಪಕ್ಕದ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಬರುತ್ತಾರೆ ಎಂಬ ಆಸೆ ಕಂಗಳಿಂದ ಮುರಿದು ಹೋದ ಅಂಗಡಿಗಳನ್ನು ಸರಿಪಡಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT