ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟ್ಟಕ್ಕಲರಿಉತ್ಸವ

Last Updated 26 ಜನವರಿ 2011, 19:30 IST
ಅಕ್ಷರ ಗಾತ್ರ

ನೃತ್ಯವೆಂದರೆ ಹೃದಯದಿಂದ ಹುಟ್ಟುವ ಸಂತಸದ ಕ್ರಿಯೆ. ಮೇಲ್ನೋಟಕ್ಕೆ ಅದೊಂದು ಆಂಗಿಕ ಚಲನೆ. ಬರೀ ಆಂಗಿಕ ಚಲನೆಯಾದರೆ ಅದು ವ್ಯಾಯಾಮದಂತೆ ಕಂಡೀತು. ಆದರೆ, ನೃತ್ಯದಲ್ಲಿ ದೇಹ ಮತ್ತು ಮನಸ್ಸುಗಳ ನಿರಂತರ ಸಂವಾದ ನಡೆಯುತ್ತಿರುತ್ತದೆ.ಮುಖದಲ್ಲಿ ಭಾವಗಳ ಮೆರವಣಿಗೆ ಇರುತ್ತದೆ.

ಯಾವ ನೃತ್ಯ ಪ್ರಕಾರಗಳು ಇದಕ್ಕೆ ಹೊರತಾಗಿಲ್ಲ. ಸಮೃದ್ಧ ಸಾಂಸ್ಕೃತಿಕ ಪರಂಪರೆ ಹೊಂದಿರುವ ಭಾರತದಲ್ಲಿ ನಮ್ಮ ನೆಲದ ಭರತನಾಟ್ಯ, ಕೇರಳದ ಕಥಕ್ಕಳಿ, ಮೋಹಿನಿ ಆಟ್ಟಂ, ಆಂಧ್ರದ ಕೂಚಿಪುಡಿ, ಉತ್ತರ ಭಾರತದ ಕಥಕ್, ಒಡಿಶಾದ ಒಡಿಸ್ಸಿ, ಈಶಾನ್ಯದ ಮಣಿಪುರಿ, ಬಿಹು... ಹೀಗೆ ವಿಭಿನ್ನ ನೃತ್ಯ ಪ್ರಕಾರಗಳ ಸಾಲೇ ಇದೆ. ಈ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಿಗೆ ಸಿದ್ಧ ಚೌಕಟ್ಟು ಇರುತ್ತದೆ. ಇಂಥದ್ದೇ ಸಂಗೀತ ನುಡಿಸಬೇಕು ಎಂಬ ಅಲಿಖಿತ ನಿಯಮವಿರುತ್ತದೆ.

ನೃತ್ಯದ ಕಥಾ ವಸ್ತುವೂ ಒಂದೇ ತೆರನಾಗಿರುತ್ತದೆ.  ಆದರೆ, ಸಮಕಾಲೀನ ನೃತ್ಯ ಹಾಗಲ್ಲ. ಇಲ್ಲಿ ನೃತ್ಯ ನಿರ್ದೇಶಕ ಸಮಕಾಲೀನ ಸಮಾಜಕ್ಕೆ ಸ್ಪಂದಿಸಬೇಕು. ಜಗತ್ತನ್ನು ಕಾಡುವ ಸಮಸ್ಯೆಗಳಿಗೆ ಪ್ರತಿಕ್ರಿಯಿಸಬೇಕು. ನವ್ಯ ಕಲೆಯಂತೆ, ಆಧುನಿಕ ಸಾಹಿತ್ಯದಂತೆ ಸಮಕಾಲೀನ ನೃತ್ಯ ಎಲ್ಲ ಸಿದ್ಧ ಸೂತ್ರಗಳನ್ನು ಮುರಿಯುತ್ತದೆ.

20ನೇ ಶತಮಾನದ ಆರಂಭದಲ್ಲಿ ಯುರೋಪ್ ಮತ್ತು ಅಮೆರಿಕದಲ್ಲಿ ಶಾಸ್ತ್ರೀಯ ಬ್ಯಾಲೆಗಳ ಕಟ್ಟನಿಟ್ಟಾದ ನಿಯಮಗಳನ್ನು ಉಲ್ಲಂಘಿಸಿ ಕೆಲ ನೃತ್ಯ ಕಲಾವಿದರು ಭಾವನೆಗಳನ್ನು ಹೊಸ ಆಯಾಮದಲ್ಲಿ ವ್ಯಕ್ತಪಡಿಸಲು ಆರಂಭಿಸಿದರು. ಭಾರತದಲ್ಲಿ ಸಮಕಾಲೀನ ನೃತ್ಯದ ಹುಟ್ಟಿಗೆ ಕಾರಣರಾದರು ಉದಯ್ ಶಂಕರ್. ಅವರು ಖ್ಯಾತ ಸಿತಾರ್ ವಾದಕ ರವಿ ಶಂಕರ್ ಅವರ ಸಹೋದರ.

ಉದಯ್ ಶಂಕರ್ ಪಶ್ಚಿಮದ ರಂಗಭೂಮಿಯ ಪದ್ಧತಿಗಳನ್ನು ನೃತ್ಯದಲ್ಲಿ ಅಳವಡಿಸಿಕೊಂಡರು. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರದೊಂದಿಗೆ ಜಾನಪದ, ಬುಡಕಟ್ಟು ನೃತ್ಯಗಳ ಹೆಜ್ಜೆಗಳನ್ನು ಬೆರೆಸಿದರು. 20, 30ರ ದಶಕದಲ್ಲಿ ವಿದೇಶಗಳಿಗೆ ತಮ್ಮ ತಂಡ ತೆಗೆದುಕೊಂಡು ಹೋಗಿ ಭಾರತೀಯ ನೃತ್ಯವನ್ನು ಅಲ್ಲಿ ಜನಪ್ರಿಯಗೊಳಿಸಿದರು.

 ಸಮಕಾಲೀನ ನೃತ್ಯ ಈಗ ಭಾರತದಲ್ಲಿ ದೊಡ್ಡದೊಂದು ಶಾಖೆಯಾಗಿ ಬೆಳೆದಿದೆ. ಕೇರಳದ ಕಳರಿಪಯಟ್ಟು, ಪೂರ್ವ ಭಾರತದ ‘ಚಾವ್’ ಬುಡಕಟ್ಟು ನೃತ್ಯದ ಅಂಶಗಳನ್ನು ಬಹುತೇಕ ಸಮಕಾಲೀನ ನೃತ್ಯ ಸಂಸ್ಥೆಗಳು ನೃತ್ಯ ಸಂಯೋಜನೆಯಲ್ಲಿ ಬಳಸಿಕೊಳ್ಳುತ್ತಿವೆ.ಸಮಕಾಲೀನ ನೃತ್ಯ ರೂಪಕಗಳಲ್ಲಿ ವ್ಯಕ್ತಿಯ ಒಳತೋಟಿ, ಸಮಕಾಲೀನ ಸಮಸ್ಯೆ ಬಿಂಬಿತವಾಗಿರುತ್ತದೆ.

ಈ ಬೆಳವಣಿಗೆಯಲ್ಲಿ ಬೆಂಗಳೂರು ಹಿಂದೆ ಬಿದ್ದಿಲ್ಲ. ಅಟ್ಟಕ್ಕಲರಿ, ನೃತ್ಯರುತ್ಯದಂತಹ ಸಂಸ್ಥೆಗಳು ಸಮಕಾಲೀನ ನೃತ್ಯವನ್ನು ಜನಪ್ರಿಯಗೊಳಿಸಲು ಕಂಕಣ ತೊಟ್ಟಿವೆ. ಈ ಕ್ಷೇತ್ರದಲ್ಲಿ ವಿಶ್ವ ಮಟ್ಟದ ವೃತ್ತಿಪರತೆ ತೋರುತ್ತಿವೆ.  ಕಲಾವಿದ ಜಯಚಂದ್ರನ್ ಪಳಜಿ ನೇತೃತ್ವದ ‘ಅಟ್ಟಕ್ಕಲರಿ’ ಪ್ರತಿ ಎರಡು ವರ್ಷಗಳಿಗೊಮ್ಮೆ  ನೃತ್ಯ ಉತ್ಸವ ಏರ್ಪಡಿಸಿ ಸಮಕಾಲೀನ ನೃತ್ಯದ ವೈವಿಧ್ಯ, ವಿಸ್ತಾರವನ್ನು ಬೆಂಗಳೂರು ಜನರ ಮುಂದಿಡುತ್ತಿದೆ.

ದೇಶದ ಅತಿ ದೊಡ್ಡ ಅಂತರ್‌ರಾಷ್ಟ್ರೀಯ ಸಮಕಾಲೀನ ನೃತ್ಯೋತ್ಸವ ‘ಅಟ್ಟಕ್ಕಲರಿ’ ಇಂಡಿಯಾ ದ್ವೈವಾರ್ಷಿಕ ಉತ್ಸವ ಜನವರಿ 28 ರಿಂದ ಫೆಬ್ರುವರಿ 6ರವರೆಗೆ ನಡೆಯಲಿದೆ. ಈ ಉತ್ಸವಕ್ಕಾಗಿ ನ್ಯಾಷನಲ್ ಮಾಡರ್ನ್ ಆರ್ಟ್ ಗ್ಯಾಲರಿ, ಅಟ್ಟಕ್ಕಲರಿ ಜೊತೆ ಕೈಜೋಡಿಸಿದೆ. ‘ಸಾಂಪ್ರದಾಯಿಕ ದೈಹಿಕ ಜ್ಞಾನ, ಆವಿಷ್ಕಾರ ಹಾಗೂ ತಂತ್ರಜ್ಞಾನ’ ಈ ನೃತ್ಯೋತ್ಸವದ ಥೀಮ್.

ಸ್ವಿಟ್ಜರ್‌ಲೆಂಡ್, ನಾರ್ವೆ, ಇರಾಕ್, ಸ್ವೀಡನ್, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯ, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಇಸ್ರೇಲ್, ಜಪಾನ್, ಇಟಲಿ, ದಕ್ಷಿಣ ಕೊರಿಯಾ ಹಾಗೂ ಅಮೆರಿಕದ 16ಕ್ಕೂ ಹೆಚ್ಚು ತಂಡಗಳ, 150 ಕಲಾವಿದರು ಭಾಗವಹಿಸಲಿದ್ದಾರೆ. ಉತ್ಸವ ರಂಗಶಂಕರ, ಚೌಡಯ್ಯ ಸ್ಮಾರಕ ಸಭಾಂಗಣ, ಅಲಯನ್ಸ್ ಫ್ರಾನ್ಸೆ ಮತ್ತು ನ್ಯಾಷನಲ್ ಮಾಡರ್ನ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.  ನೃತ್ಯ ಪ್ರದರ್ಶನಗಳ ಹೊರತಾಗಿ ಖ್ಯಾತ ಕಲಾವಿದರಿಂದ ನೃತ್ಯಪಾಠ, ನೃತ್ಯಕ್ಕೆ ಸಂಬಂಧಿಸಿದ ಸಿನಿಮಾ ಪ್ರದರ್ಶನ, ಮೂರು ದಿನಗಳ ವಿಚಾರ ಸಂಕಿರಣ ನಡೆಯಲಿದೆ. ಈ ಬಾರಿಯ ನೃತ್ಯೋತ್ಸವದಲ್ಲಿ ದಕ್ಷಿಣ ಏಷ್ಯಾದ ಯುವ ನೃತ್ಯ ನಿರ್ದೇಶಕರಿಗೆ ಹೆಚ್ಚಿನ ಅವಕಾಶ. ಲ್ಯಾವೆಲ್ಲೆ ರಸ್ತೆಯ ಗೋಥೆ ಇನ್‌ಸ್ಟಿಟ್ಯೂಟ್‌ನಲ್ಲಿ  (ಮ್ಯಾಕ್ಸ್ ಮುಲ್ಲರ್ ಭವನ) ಶ್ರೀಲಂಕಾ, ಸಿಂಗಪುರ, ಇರಾನ್, ಪಾಕಿಸ್ತಾನದ ಕಲಾವಿದರು ಪ್ರದರ್ಶನ ನೀಡುತ್ತಾರೆ. ಅಲ್ಲದೇ ನೃತ್ಯ ನಿರ್ದೇಶಕರು ಕಾರ್ಯಾಗಾರ ನಡೆಸಿಕೊಡುತ್ತಾರೆ.

ರಂಗಶಂಕರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಟಿಕೆಟ್ ದರ ರೂ 200. ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ 500, 200 ಮತ್ತು 100 ರೂ. ಅರಮನೆ ರಸ್ತೆಯ ನ್ಯಾಷನಲ್ ಗ್ಯಾಲರಿ ಮತ್ತು ವಸಂತ ನಗರದ ಅಲಯನ್ಸ್ ಫ್ರಾನ್ಸೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮ, ವಿಚಾರ ಸಂಕಿರಣಗಳಿಗೆ ಉಚಿತ ಪ್ರವೇಶ.

ಶುಕ್ರವಾರ ನೃತ್ಯೋತ್ಸವ ಉದ್ಘಾಟನೆ.  ‘ಕಾರ್ಪೋರಿಯಲ್ ಕೆಲಿಡೊಸ್ಕೋಪ್’ ನೃತ್ಯ ಪ್ರದರ್ಶನ.

ಸ್ಥಳ: ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಅರಮನೆ ರಸ್ತೆ, ವಸಂತನಗರ. ಸಂಜೆ: 6.30 ಉದ್ಘಾಟನೆ ದಿನ ಆಹ್ವಾನಿತರಿಗೆ ಮಾತ್ರ ಪ್ರವೇಶ.

ಮಾಹಿತಿಗೆ 2212 3684/ 4146 7690 ವೆಬ್‌ಸೈಟ್ ವಿಳಾಸ: www.attakkalaribiennial.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT