ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಡವಿ ಜೇನು ಸಂರಕ್ಷಣೆ ಯೋಜನೆ'

ಯಲ್ಲಾಪುರ ಅರಣ್ಯ ಪ್ರದೇಶದಲ್ಲಿ ಪ್ರಥಮ ಬಾರಿಗೆ ಅನುಷ್ಠಾನ
Last Updated 24 ಡಿಸೆಂಬರ್ 2012, 8:59 IST
ಅಕ್ಷರ ಗಾತ್ರ

ಯಲ್ಲಾಪುರ: `ಸಸ್ಯ ಮತ್ತು ಜೀವ ಸಂಕುಲದ ಮಹತ್ವದ ಜಾಲವಾದ ಜೇನಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಡವಿ ಜೇನು ಮರ ಸಂರಕ್ಷಣೆ, ಅಭಿವೃದ್ಧಿಯ ಬಗ್ಗೆ ಸಮಗ್ರ ಮಾದರಿ ರೂಪಿಸುವ ಅಡವಿ ಜೇನು ಸಂರಕ್ಷಣೆ ಯೋಜನೆ ರಾಜ್ಯದಲ್ಲೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದೆ. ಯಲ್ಲಾಪುರ ಅರಣ್ಯ ವಲಯದಲ್ಲಿ ಸಮಗ್ರ ಜೇನು ಅಭಿವೃದ್ಧಿಗಾಗಿ ಯಲ್ಲಾಪುರ, ಆನಗೋಡ, ದೇಹಳ್ಳಿ, ಕಣ್ಣಿಗೇರಿ, ನಂದೊಳ್ಳಿ ಭಾಗಗಳನ್ನು ಆಯ್ದುಕೊಳ್ಳಲಾಗಿದೆ' ಎಂದು ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ಪಟ್ಟಣದ ಎಪಿಎಂಸಿಯ ಟಿಎಂಎಸ್ ಸಭಾಭವನದಲ್ಲಿ ಅರಣ್ಯ ಇಲಾಖೆ, ಪಶ್ಚಿಮ ಘಟ್ಟ ಕಾರ್ಯಪಡೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ ಅಡವಿ ಜೇನು ಸಂರಕ್ಷಣೆ ಹಾಗೂ ಅಭಿವೃದ್ಧಿ ಯೋಜನೆಯ ಕುರಿತು ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

`ಪಶ್ಚಿಮ ಘಟ್ಟದ ಎಂಟು ಜಿಲ್ಲೆಯಲ್ಲಿ ಜೇನು ಸಂರಕ್ಷಣೆ ಯೋಜನೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಜೇನು ಸಂರಕ್ಷಣೆಯಿಂದ ಪರೋಕ್ಷವಾಗಿ ತೋಟಗಾರಿಕಾ ಉತ್ಪಾದನೆ, ಉಪ ಉತ್ಪನ್ನ, ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯ. ಬರುವ ಬಜೆಟ್‌ನಲ್ಲಿ ಯೋಜನೆಗಾಗಿ 3 ಕೋಟಿ ರೂಪಾಯಿ ತೆಗೆದಿರಿಸಲು ಅರಣ್ಯ ಮಂತ್ರಿಗಳನ್ನು ಒತ್ತಾಯಿಸಲಾಗಿದೆ' ಎಂದರು.

`ಜಿಲ್ಲೆಯಲ್ಲಿ ಜೇನು ಮೇಳ ನಡೆಸಿ, ಜೇನು ಉತ್ಪನ್ನ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಜೇನು ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆಯಡಿ 11.5 ಲಕ್ಷ ರೂಪಾಯಿ ಅನುದಾನ ಬಂದಿದೆ' ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಭಟ್ಟ ಮಾತನಾಡಿ, `ಜೇನು ಸಂತತಿ ಕ್ಷೀಣಿಸುತ್ತಿದ್ದು, ತುಪ್ಪ ಸಂಗ್ರಹ ಕುಸಿದಿದೆ. ಈ ಹಿನ್ನೆಲೆಯಲ್ಲಿ ಅಡವಿ ಜೇನು ಸಂರಕ್ಷಣೆ ಕಾರ್ಯಾಗಾರ ಉಪಯುಕ್ತ' ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಟಿ.ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ತೋಟಗಾರಿಕಾ ನಿರ್ದೇಶಕ ಎಚ್.ಆರ್.ನಾಯಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ನಾಯ್ಕ, ಕದಂಬ ಸಂಸ್ಥೆ ಅಧ್ಯಕ್ಷ ಶಂಭುಲಿಂಗ ಹೆಗಡೆ, ಲ್ಯಾಂಪ್ ಸೊಸೈಟಿ ಅಧ್ಯಕ್ಷ ರವಿ ಸಿದ್ದಿ, ಆರ್.ಎಫ್.ಒಗಳಾದ ಕೆ.ಸಿ.ಆನಂದ, ಪಿ.ಎಸ್.ವರೂರ ಮುಂತಾದವರಿದ್ದರು.

ತಜ್ಞರಾದ ಡಾ.ಸುಭಾಶ್ಚಂದ್ರನ್, ದಿವಾಕರ ಹೆಗಡೆ, ಎನ್.ಆರ್.ಹೆಗಡೆ, ಬಾಲಚಂದ್ರ ಹೆಗಡೆ, ವಿಶ್ವೇಶ್ವರ ಭಟ್ಟ, ಎಸ್.ಎನ್.ಭಟ್ಟ ಮುಂತಾದವರು ಜೇನು ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು. ಭುವನೇಶ್ವರಿ ಹೆಗಡೆ ಪ್ರಾರ್ಥನಾಗೀತೆ ಹಾಡಿದರು. ಪಶ್ಚಿಮ ಘಟ್ಟ ಕಾರ್ಯಪಡೆ ಸದಸ್ಯ ಶಾಂತಾರಾಮ ಸಿದ್ದಿ ಸ್ವಾಗತಿಸಿದರು. ಎಸಿಎಫ್ ಗೋಪಾಲಕೃಷ್ಣ ಹೆಗಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT