ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಹುಡಿಯಲ್ಲಿ ಕುಡಿಯುವ ನೀರಿಗೆ ತಾಪತ್ರಯ

Last Updated 13 ಜುಲೈ 2012, 9:35 IST
ಅಕ್ಷರ ಗಾತ್ರ

ಜಮಖಂಡಿ: ತಾಲ್ಲೂಕಿನ ಅಡಿಹುಡಿ ಗ್ರಾಮಸ್ಥರು ಕುಡಿಯುವ ನೀರಿನ ತಾಪತ್ರಯ ಅನುಭವಿಸುತ್ತಿದ್ದು, ನೀರಿಗಾಗಿ ಖಾಸಗಿ ವ್ಯಕ್ತಿಯೊಬ್ಬರ ಉದಾರತೆಯ ಮೇಲೆ ಅವಲಂಬಿತ ಆಗಿರುವುದು ಸೋಜಿಗದ ಸಂಗತಿ ಆಗಿದೆಯಲ್ಲದೆ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತದ ನಿಷ್ಕ್ರಿಯತೆಗೆ ಹಿಡಿದ ಕನ್ನಡಿಯಾಗಿದೆ.

ಅಡಿಹುಡಿ ಗ್ರಾಮದ ಧರೆಪ್ಪ ಪೂಜಾರಿ ಎಂಬುವವರು ತಮ್ಮ ತೋಟದ ಕೊಳವೆ ಬಾವಿಯಿಂದ ಕಳೆದ ನಾಲ್ಕು ತಿಂಗಳಿನಿಂದ ಕೊಡಮಾಡುತ್ತಿ ರುವ ಕುಡಿಯುವ ನೀರಿನ ಮೇಲೆಯೇ ಬಹುತೇಕ ಎಲ್ಲ ಗ್ರಾಮಸ್ಥರು ಅವಲಂಬಿತರಾಗಿದ್ದಾರೆ.

ಗ್ರಾಮ ಪಂಚಾಯಿತಿ ಪರವಾಗಿ ಗ್ರಾಮದಲ್ಲಿ ಕೊರೆದ ಕೊಳವೆ ಬಾವಿ ಯಿಂದ ಶುದ್ಧ ಕುಡಿಯುವ ನೀರು ಬರುವುದಿಲ್ಲ. ಈ ಕೊಳವೆ ಬಾವಿಯ ನೀರು ಪೂರೈಕೆಗೆ ಅಂದಿನ ಮುಖ್ಯ ಮಂತ್ರಿ ಡಿ.ವಿ. ಸದಾನಂದಗೌಡ ಅವರೇ ಚಾಲನೆ ನೀಡಿದ್ದರು.

ಕುಡಿಯುವ ನೀರು ಪೂರೈಸುವ ಕೊಳವೆ ಬಾವಿಗಳೆಲ್ಲವೂ ಬತ್ತಿ ಹೋಗಿವೆ. ಆದಾಗ್ಯೂ ಈ ಬಗ್ಗೆ ಗ್ರಾಮ ಪಂಚಾಯಿತಿ ತಲೆ ಕೆಡಿಸಿಕೊಂಡಿಲ್ಲ. ತಾಲ್ಲೂಕು ಆಡಳಿತ ಕೂಡ ಗ್ರಾಮಸ್ಥರ ಬೇಡಿಕೆಯ ಕುರಿತು ಗಮನ ಹರಿಸಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆಯೊಂದು ಇದೆ ಎಂಬ ಕಲ್ಪನೆ ಗ್ರಾಮಸ್ಥರಿಗಾಗಲಿ ಅಥವಾ ಗ್ರಾಮ ಪಂಚಾಯಿತಿಗಾಗಲಿ ಇದ್ದಂತೆ ತೋರುತ್ತಿಲ್ಲ.

ವಿದ್ಯುತ್ ಇರುವಾಗ ಸದಾ ಕೊಳವೆ ಬಾವಿಯ ನೀರು ಪೂರೈಕೆ ಆಗುತ್ತಿರುತ್ತದೆ. ಆದರೆ ಎಲ್ಲಾ ಗ್ರಾಮಸ್ಥರು ಅದೇ ಕೊಳವೆ ಬಾವಿಗೆ ದೌಡಾಯಿಸುತ್ತಿರುವುದರಿಂದ ಎಲ್ಲರಿಗೂ ಸಾಕಾಗುವಷ್ಟು ನೀರು ಸಿಗುತ್ತಿಲ್ಲ. ಸಿಕ್ಕಷ್ಟು ನೀರಿಗೆ ತೃಪ್ತಿ ಹೊಂದದೆ ವಿಧಿ ಇಲ್ಲದಂತಾಗಿದೆ.

ಕುಡಿಯುವ ನೀರಿನ ಕೊರತೆ ಯಿಂದಾಗಿ ಪರಸ್ಥಳದ ಸಂಬಂಧಿಕರನ್ನು ಮನೆಗೆ ಕರೆಯಲು ಆಗುತ್ತಿಲ್ಲ ಎಂದು ಮಲ್ಲವ್ವ ತಳವಾರ ತಮ್ಮ ಗೋಳು ಹೇಳುತ್ತಾರೆ. ಶಾಲಾ ಮಕ್ಕಳು ಕುಡಿಯುವ ನೀರಿಗಾಗಿ ಮನೆ ಮನೆಗೆ ತೆರಳುತ್ತಾರೆ. ಆದರೆ ನೀರು ಇಲ್ಲದೆ ಮರಳಬೇಕಾಗುತ್ತದೆ ಎಂದು ಚಂದ್ರವ್ವ ಹಳ್ಳೂರ ಹಳಹಳಿಸಿದರು.

ಲಕ್ಕವ್ವ ಕಂಬಾರ, ಅಕ್ಕವ್ವ ಗುಗ್ಗರಿ ಸೇರಿದಂತೆ ಬಹುತೇಕ ಗ್ರಾಮಸ್ಥರು ಇದೇ ಸಮಸ್ಯೆಗಳನ್ನು ಹೇಳಿಕೊಳ್ಳು ತ್ತಾರೆ. ಈಗಲಾದರೂ ಗ್ರಾ.ಪಂ. ಅಥವಾ ತಾಲ್ಲೂಕು ಆಡಳಿತ ಕುಡಿಯುವ ನೀರಿನ ಸಮಸ್ಯೆಯತ್ತ ಗಮನ ಹರಿಸಬಹುದೇ ಎಂದು ಕಾದು ನೋಡಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT