ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಕು ಸಂಸತ್ ಸ್ಪರ್ಧೆ: ಸಿಎಂ ವಿರುದ್ಧ ವಿರೋಧ ಪಕ್ಷದ ಸದಸ್ಯರ ಕಿಡಿ!

Last Updated 13 ಜನವರಿ 2012, 7:15 IST
ಅಕ್ಷರ ಗಾತ್ರ

ಹೊಸದುರ್ಗ: `ಏನ್ರೀ ಮುಖ್ಯಮಂತ್ರಿಗಳೇ ಬರೀ ಬೊಗಳೆ ಬಿಡ್ತೀರಲ್ಲ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿದಿದ್ದೀರಾ? ರೈತರು ಬರದಿಂದ ತತ್ತರಿಸುತ್ತಿರುವಾಗ ನೀವು ಎಸಿ ಕಾರಲ್ಲಿ ಓಡಾಡ್ತೀರಾ? ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಜನ ಸಾಯುತ್ತಿದ್ದಾರೆ, ಬಿಸಿಯೂಟದ ಅಕ್ಕಿ, ಬೇಳೆಯಲ್ಲಿ ಬರೀ ಹುಳು, ಕಲ್ಲು, ಕಸ-ಕಡ್ಡಿ ಇವೆ, ರಸ್ತೆಗಳಲ್ಲಿ ಹೊಂಡಗಳಾಗಿ ಗರ್ಭಿಣಿಯರಿಗೆ ಬಸ್‌ನಲ್ಲೇ ಹೆರಿಗೆಯಾಗುತ್ತಿದ್ದೆ. ನಿಮ್ಮ ಮಂತ್ರಿಗಳು ಸಾಲು, ಸಾಲಾಗಿ ಜೈಲು ಸೇರುತ್ತಿದ್ದಾರೆ. ಅಪೌಷ್ಟಿಕತೆಯಿಂದ ಮಕ್ಕಳು ಸಾಯುತ್ತಿದ್ದರೂ, ಆರೋಗ್ಯ ಸಚಿವರು ಕೈಕಟ್ಟಿ ಕುಳಿತಿದ್ದಾರೆ.....~
 -ವಿರೋಧ ಪಕ್ಷದ ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಟು ಮಾತುಗಳಿವು.

ತಾಲ್ಲೂಕಿನ ದೇವಿಗೆರೆಯಲ್ಲಿ ಗುರುವಾರ ನಡೆದ ಕ್ಲಸ್ಟರ್‌ಮಟ್ಟದ ಸಹಪಠ್ಯ ಚಟುವಟಿಕೆ ಕಾರ್ಯಕ್ರಮದ `ಅಣಕು ಸಂಸತ್~ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಧಾನಸಭಾ ಅಧಿವೇಶನದ ಅಣಕು ಪ್ರದರ್ಶಿಸಿದರು.

ಮುಖ್ಯಮಂತ್ರಿ ಸೇರಿದಂತೆ ಶಿಕ್ಷಣ, ಆರೋಗ್ಯ, ಲೋಕೋಪಯೋಗಿ ಮತ್ತಿತರ ಖಾತೆಗಳ ಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕ, ಸದಸ್ಯರು ಎದುರು-ಬದುರು ಕೂತಿದ್ದರು. ಸಭಾಪತಿಯ ಅಪ್ಪಣೆಯಂತೆ ಆರಂಭವಾದ ಕಲಾಪದಲ್ಲಿ ನೈಜ ಅಧಿವೇಶನವನ್ನು ನಾಚಿಸುವ ಮಟ್ಟಿಗೆ ವಿದ್ಯಾರ್ಥಿಗಳು ಕೆಲವು ವಿಷಯಗಳ ಕುರಿತು ಚರ್ಚಿಸಿದರು.

ಮುಖ್ಯಮಂತ್ರಿ ಮತ್ತು ಮಂತ್ರಿಗಳು ತಮ್ಮ ವ್ಯಾಪ್ತಿಯ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡುತ್ತಿದ್ದಂತೆ, `ಬಾಯಿ ಮುಚ್ರಿ ಏನ್ರೀ ಕೆಲಸ ಮಾಡಿದ್ದೀರಿ?, ಜನ ಅನ್ನ ನೀರು ಇಲ್ಲದೆ ಸಾಯುತ್ತಿದ್ದಾರೆ. ನೀವು ಆಸ್ತಿ, ಹಣ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದೀರಿ. ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಜನ ರಾಜಕಾರಣಿಗಳ ಬಗ್ಗೆ ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ. ಒಳಜಗಳ ಬಿಟ್ಟು ಮೊದಲು ಕೆಲಸ ಮಾಡಿ~ ಎಂದು ತಿರುಗೇಟು ನೀಡುತ್ತಿದ್ದರು. ಕೆಲವೊಮ್ಮೆ ಚರ್ಚೆ ತಾರಕ್ಕಕ್ಕೆ ಹೋಗಿ ಮಾರ್ಷಲ್‌ಗಳು ಹೊರಹಾಕುವ ಹಂತಕ್ಕೂ ತಲುಪುತ್ತಿತ್ತು. ವಿದ್ಯಾರ್ಥಿಗಳ ಅಭಿನಯ ಕಂಡು ನೆರೆದಿದ್ದವರೆಲ್ಲ ಅಚ್ಚರಿಗೊಂಡರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿಕ್ಷಣ ಸಂಯೋಜಕ ಟಿ.ಪಿ. ಬಸವರಾಜ್ ಮಾತನಾಡಿ, ಮಕ್ಕಳಲ್ಲಿ ರಾಜಕೀಯ ಪ್ರಜ್ಞೆ, ಪ್ರಜಾಪ್ರಭುತ್ವದ ಅರಿವು ಮೂಡಲು ಇಂತಹ ಕಾರ್ಯಕ್ರಮ ಸಹಕಾರಿಯಾಗುತ್ತವೆ. ಎಲ್ಲಾ ಮಕ್ಕಳೂ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಕಟ್ಟೆ ಪ್ರಕಾಶ್ ಮಾತನಾಡಿ, ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳು. ಮುಂದೆ ದೇಶವನ್ನು ಮುನ್ನಡೆಸುವ ಜವಾಬ್ದಾರಿ ನಿಮ್ಮದಾಗುತ್ತದೆ. ವಿದ್ಯಾರ್ಥಿ ಹಂತದಿಂದಲೇ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದರಿಂದ ಮುಂದೆ ಉತ್ತಮ ನಾಯಕರನ್ನು ನಿರೀಕ್ಷಿಸಬಹುದು ಎಂದರು.
ದೇವಿಗೆರೆ, ಕಬ್ಬಳ, ಮಾವಿನಕಟ್ಟೆ, ಹೇರೂರು, ಜಂತಿಕೊಳಲು ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಬಿಆರ್‌ಪಿ ಸುರೇಶ್, ಪರಮೇಶ್ವರಪ್ಪ, ಶಿವಶಂಕರಯ್ಯ, ಮಂಜುನಾಥ್, ಭಾಗೀರಥಮ್ಮ, ಸಾಕಮ್ಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT