ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತ ದೊಡ್ಡ ಕೆರೆ ಇತ್ತ ಗುಂಡಿ

Last Updated 7 ಫೆಬ್ರುವರಿ 2011, 9:55 IST
ಅಕ್ಷರ ಗಾತ್ರ

ಯಾದಗಿರಿ:  ಒಂದು ಬದಿಗೆ ವಿಶಾಲವಾದ ಕೆರೆ. ಇನ್ನೊಂದು ಬದಿಗೆ ತೆಗ್ಗು ತೋಡಲಾಗುತ್ತಿದೆ. ಮಧ್ಯದ ರಸ್ತೆಯಲ್ಲಿ ತಂತಿಯ ಮೇಲೆ ನಡೆದಂತೆ ವಾಹನಗಳು ಸಾಗುತ್ತಿವೆ. ಒಂದಿಂಚು ಹೆಚ್ಚು-ಕಡಿಮೆ ಆದರೂ ಅನಾಹುತ ಸಂಭವಿಸಿ ಬಿಡುತ್ತದೆ.

ಜಿಲ್ಲಾ ಕೇಂದ್ರದಲ್ಲಿ ಈಗ ರಸ್ತೆ ವಿಸ್ತಾರ ಕಾಮಗಾರಿಗಳು ಭರದಿಂದಲೇ ಆರಂಭವಾಗಿವೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯೂ, ಜಿಲ್ಲಾಡಳಿತದ ಕಾಳಜಿಯೋ, ಒಟ್ಟಿನಲ್ಲಿ ನಗರದ ರಸ್ತೆಗಳು ವಿಸ್ತಾರವಾಗುತ್ತಿವೆ. ಈಗಷ್ಟೇ ಸುಭಾಷ ವೃತ್ತದಿಂದ ಗಂಜ್‌ವರೆಗಿನ ರಸ್ತೆ ವಿಸ್ತಾರ ಕಾರ್ಯ ಮುಗಿಯುವ ಹಂತಕ್ಕೆ ಬಂದು ನಿಂತಿದೆ.

ಇದೀಗ ಇಲ್ಲಿಯ ಚರ್ಚ್ ಹಾಲ್‌ನಿಂದ ಅಂಬೇಡ್ಕರ್ ವೃತ್ತದವರೆಗಿನ ರಸ್ತೆ ವಿಸ್ತಾರ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಅದಕ್ಕಾಗಿಯೇ ರಸ್ತೆಯ ಎಡಬದಿಯಲ್ಲಿ ಬೆಳೆದಿದ್ದ ಕಸವನ್ನು ಕಿತ್ತು ಹಾಕಿ, ತೆಗ್ಗಿಗೆ ಮಣ್ಣು ತುಂಬುವ ಕೆಲಸ ಜೋರಾಗಿಯೇ ನಡೆಯುತ್ತಿದೆ. ಕಿರಿದಾಗಿರುವ ಈ ರಸ್ತೆಯಲ್ಲಿ ಸಂಚರಿಸುವುದೇ ಇದೀಗ ವಾಹನ ಸವಾರರಿಗೆ ಭೀತಿಯನ್ನು ತಂದೊಡ್ಡಿದೆ.

ಒಂದೆಡೆ ಕೆರೆ ಇದೆ. ಇನ್ನೊಂದೆಡೆ ರಸ್ತೆ ವಿಸ್ತಾರಕ್ಕಾಗಿ ಆರಂಭವಾಗಿರುವ ತೆಗ್ಗು ತೋಡು ಕಾಮಗಾರಿ. ಹೀಗಾಗಿ ಕಿರಿದಾದ ಈ ರಸ್ತೆಯಲ್ಲಿ ನಾಜೂಕಿನಿಂದಲೇ ಸಂಚರಿಸಬೇಕಾಗಿದೆ. ಕೆರೆಗೂ ರಕ್ಷಣಾ ಗೋಡೆಯಿಲ್ಲ. ಸ್ವಲ್ಪ ಕೆರೆಯತ್ತ ವಾಲಿದರೂ ತೆಗ್ಗಿಗೆ, ಈ ಬದಿಗೆ ಸರಿದರೂ ತೆಗ್ಗಿಗೆ ಬೀಳುವ ಅಪಾಯ ವಾಹನ ಸವಾರರು, ಪ್ರಯಾಣಿಕರನ್ನು ಕಾಡುತ್ತಿದೆ.

ಕೆರೆಯ ಪಕ್ಕದಲ್ಲಿ ರಕ್ಷಣಾ ಗೋಡೆ ನಿರ್ಮಾಣವಾಗಿದ್ದರೆ ಅಷ್ಟೊಂದು ಅಪಾಯದ ಭೀತಿ ಇರುತ್ತಿರಲಿಲ್ಲ. ಇದೀಗ ಎರಡೂ ಬದಿಗಳಲ್ಲಿ ದೊಡ್ಡ ತೆಗ್ಗುಗಳು ಇರುವುದರಿಂದ ವಾಹನಗಳ ಚಾಲಕರು ನೋಡಿಕೊಂಡೇ ವಾಹನ ಓಡಿಸಬೇಕು. ಆಚೀಚೆ ಸರಿದರೂ ಅಪಾಯ ತಪ್ಪಿದ್ದಲ್ಲ ಎನ್ನುವಂತಾಗಿದೆ.

ಕೆರೆಗೆ ರಕ್ಷಣಾ ಗೋಡೆ ಇಲ್ಲ. ಆದರೆ ಇನ್ನೊಂದು ಬದಿಯಲ್ಲಿ ಆರಂಭವಾಗಿರುವ ರಸ್ತೆ ವಿಸ್ತಾರ ಕಾಮಗಾರಿಯ ಸ್ಥಳದಲ್ಲಾದರೂ ಎಚ್ಚರಿಕೆ ನೀಡುವ ಬ್ಯಾರಿಕೇಡ್‌ಗಳನ್ನು ಹಾಕಬಹುದಾಗಿತ್ತು ಎನ್ನುವುದು ಬಹುತೇಕ ಪ್ರಯಾಣಿಕರ ಅನಿಸಿಕೆ. ಕೇವಲ ಕಲ್ಲಿಗೆ ಸುಣ್ಣ ಬಳಿದು ಇಡಲಾಗಿದ್ದು, ರಾತ್ರಿ ಸಮಯದಲ್ಲಿ ಸಂಚರಿಸುವ ವಾಹನಗಳಿಗೆ ಈ ಕಲ್ಲುಗಳೂ ಕಾಣುವುದಿಲ್ಲ. ಮೇಲಾಗಿ ಅಟೋ ರಿಕ್ಷಾಗಳು ವಿಪರೀತ ವೇಗವಾಗಿ ಸಂಚರಿಸುತ್ತಿರುವುದು ಅನಾಹುತಗಳಿಗೆ ಇನ್ನಷ್ಟು ಆಸ್ಪದ ನೀಡುವಂತಿದೆ.

“ಸ್ವಲ್ಪ ಈ ಕಡೆ ಸರದ್ರ ಕೆರ್ಯಾಗ ಬೀಳಬೇಕು. ಆ ಕಡೆ ಹೋದ್ರ ತೆಗ್ಗಿನ್ಯಾಗ ಜಾರಬೇಕು. ಅತ್ತ-ಇತ್ತ ಸರದಾಡದ್ಹಂಗ ಆಗೈತಿ ನೋಡ್ರಿ. ಇಂಥಾ ಜಾಗಾದಾಗ ಹೆಂಗರೇ ಗಾಡಿ ಓಡಸಬೇಕ್ರಿ. ರಾತ್ರಿ ಟೈಮ್ ಅಂತೂ ಹೇಳುದ ಬ್ಯಾಡ ಏಳ್ರಿ. ಮೊದಲ ರಸ್ತೆ ಕಾಣುದುಲ್ಲ. ಅಂಥಾದ್ರಾಗ ಈ ಕಡೆ ತೆಗ್ಗ ಬ್ಯಾರೇ ತೋಡ್ಯಾರ. ತೆಗ್ಗಿ ತೋಡಿದ ಜಾಗದಾಗ ಬ್ಯಾರಿಕೇಡ್‌ರೇ ಹಾಕಿದ್ರ ಭಾಳ ಛೊಲೋ ಆಗತ್ತಿತ್ತು” ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರ ನಾಗರಾಜ ಬಿ.

ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ ರಕ್ಷಣಾ ಕ್ರಮಗಳನ್ನು ಅನುಸರಿಸುವುದು ಉತ್ತಮ. ನಾಜೂಕಾಗಿರುವ ಇಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವವರು ಈ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕು. ಈಗಲಾದರೂ ಕಾಲ ಮಿಂಚಿಲ್ಲ. ಅನಾಹುತ ಆಗುವ ಮೊದಲೇ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ನಾಗರಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT