ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥೆನ್ಸ್‌ನಲ್ಲಿ ಕನ್ನಡದ ಶೋಭಾಯಾತ್ರೆ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

 ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಆ ಘಟನೆ ನಡೆದು ಎಂಟು ವರ್ಷಗಳೇ ಗತಿಸಿದವು. ಬೀಜಿಂಗ್ ಒಲಿಂಪಿಕ್ ಕೂಟವೂ ಸರಿದುಹೋಗಿದೆ. ಹೀಗಿದ್ದೂ ಟಿವಿಯಲ್ಲಿ ಕಂಡ ಆ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ನಮ್ಮ ಹುಬ್ಬಳ್ಳಿ ಪಕ್ಕದ ಪುಟ್ಟ ಗ್ರಾಮ ಪಶುಪತಿಹಾಳದ ಶೋಭಾ ಜಗದೀಶಪ್ಪ ಜಾವೂರ (ಜೆ.ಜೆ.) ಅವತ್ತು ಗಾಯದ ನಡುವೆಯೂ ಸ್ಪರ್ಧೆಯನ್ನು ಪೂರ್ಣಗೊಳಿಸಿ ನೋವು ತಾಳದೆ ಟ್ರ್ಯಾಕ್ ಮೇಲೇ ಉರುಳಿ ಬಿದ್ದಿದ್ದರು. ಚಿನ್ನ ಗೆದ್ದ ಹುಡುಗಿಗಿಂತ 29ನೇ ಸ್ಥಾನ ಗಳಿಸಿದ ಶೋಭಾ ಅವರೇ ಕ್ರೀಡಾಪ್ರಿಯರ ಕಣ್ಮಣಿ ಆಗಿಬಿಟ್ಟಿದ್ದರು.

ಊರಿಗೆ ಬಂದಿದ್ದ ಶೋಭಾ ಅವರನ್ನು ಮಾತನಾಡಿಸಲು ಹೋದಾಗ ಅವತ್ತು ದಸರಾ ಹಬ್ಬ. ಪಶುಪತಿಹಾಳದ `ಮಾಲತೇಶ ನಿಲಯ~ವನ್ನು ತಲುಪಿದಾಗ ಮೇಕೆಗಳು ಚಿನ್ನಾಟವಾಡುತ್ತಾ ಸ್ವಾಗತ ಕೋರಿದರೆ, ಒಳಗೆ ದನದ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಗುಟುರು ಹಾಕುತ್ತಿದ್ದವು. `ಎಲ್ಲಿ ಶೋಭಾ~ ಎಂದು ಅವರ ತಂದೆ ಜಗದೀಶಪ್ಪ ಅವರನ್ನು ಕೇಳಿದಾಗ, `ಒಳಗ ಅಡಗಿ ಮಾಡಾಕ ಕುಂತಾಳ್ರೀ~ ಎಂದಿದ್ದರು.

ಅಥ್ಲೀಟ್ ಶೋಭಾ, ಸೌಟು ಹಿಡಿದು ಪಾಕಪ್ರವೀಣೆಯಾಗಿ ಎದುರಿಗೆ ನಿಂತಿದ್ದರು. ಇಂತಹ ಕುಗ್ರಾಮದಿಂದ ಬಂದ ಈ ಹುಡುಗಿಯೇ ಜಗತ್ತಿನ ಗಮನಸೆಳೆದ ಆ ಅಥ್ಲೀಟ್ ಎಂಬ ಅಚ್ಚರಿ ಅಲ್ಲಿದ್ದವರಿಗೆ. ಹೆಪ್ಟಥ್ಲಾನ್‌ನಲ್ಲಿ ಸ್ಪರ್ಧಿಸಿದ್ದ ಶೋಭಾ, ಜಾವೆಲಿನ್ ಥ್ರೋದ ಎರಡನೇ ಯತ್ನದಲ್ಲಿದ್ದಾಗ ಮಂಡೆಚಿಪ್ಪಿನ ಮೇಲೆ ಅಧಿಕ ಒತ್ತಡ ಬಿದ್ದು, ಉರುಳಿ ಬಿದ್ದಿದ್ದರು. ಸ್ಟ್ರೇಚರ್ ಮೇಲೆ ಅವರನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು.

ಜಾವೆಲಿನ್ ಥ್ರೋ ಮುಗಿದು ಒಂದು ಗಂಟೆಯ ಬಳಿಕ 800 ಮೀ ಓಟದ ಸ್ಪರ್ಧೆ ಇತ್ತು. ಅದು ಹೆಪ್ಟಾಥ್ಲಾನ್‌ನ ಕೊನೆಯ ಸ್ಪರ್ಧೆಯಾಗಿತ್ತು. ಎಲ್ಲರೂ ಅವರಿಗೆ ಓಡುವುದು ಬೇಡ ಎನ್ನುವ ಸಲಹೆಯನ್ನೇ ನೀಡಿದ್ದರು.

`ಇಷ್ಟು ದೂರ ಬಂದಿದ್ದೇ ಸ್ಪರ್ಧಿಸಲು. ಈಗ ಹಿಂದೆ ಸರಿಯುವುದು ಹೇಗೆ~ ಎಂಬ ಚಿಂತೆಯಲ್ಲಿ ಮುಳುಗಿದ ಶೋಭಾ ಕೊನೆಗೆ ಓಡಲು ನಿರ್ಧರಿಸಿದರು. ನಡೆಯಲೂ ಆಗದ ಅಥ್ಲೀಟ್ ಓಡತೊಡಗಿದ್ದರು. ಗುರಿ ತಲುಪಿದ ಮೇಲೆ ನೆಲಕ್ಕೆ ಉರುಳಿದರು. ಪ್ರೇಕ್ಷಕರಿಂದ ಸಿಕ್ಕಾಪಟ್ಟೆ ಬೆಂಬಲವೂ ಅವರಿಗೆ ಸಿಕ್ಕಿತ್ತು.

ಭಾರತಕ್ಕೆ ವಾಪಸು ಬಂದು ತಪಾಸಣೆ ಮಾಡಿಸಿಕೊಂಡಾಗ ಎಡಗಾಲಿನ ಅಸ್ತಿರಜ್ಜು (ಲಿಗಾಮೆಂಟ್)ನಲ್ಲಿ ತೊಂದರೆ ಕಾಣಿಸಿಕೊಂಡಿರುವುದು ಪತ್ತೆಯಾಯಿತು. ಬಳಿಕ ಶಸ್ತ್ರಚಿಕಿತ್ಸೆಗೂ ಅವರು ಒಳಗಾಗಿದ್ದರು. ಆಮೇಲೆ ಶೋಭಾ ಏಕೋ ಮಂಕಾದರು.
ಪಶುಪತಿಹಾಳದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಶೋಭಾಗೆ ಆಟೋಟದ `ಹುಚ್ಚು~ ಹಿಡಿಯಿತು. ಮಧ್ಯಮ ದೂರದ ಓಟ ಹಾಗೂ ಎಸೆತಗಳ ಸ್ಪರ್ಧೆಯಲ್ಲಿ ಚೆನ್ನಾಗಿದ್ದ ಶೋಭಾ ಕೂಡಿಗೆ ಕ್ರೀಡಾ ವಸತಿ ಶಾಲೆಗೆ ಆಯ್ಕೆಯಾದರು.
 
`ಮೊದಲು ಲಾಂಗ್‌ಜಂಪ್‌ನಲ್ಲಿ ನನ್ನನ್ನು ತರಬೇತುಗೊಳಿಸಿ ನಂತರ ಹೆಪ್ಟಾಥ್ಲಾನ್‌ಗೆ ವರ್ಗಾಯಿಸಲಾಯಿತು. ಮುಂದೆ ಮೈಸೂರಿನ ಟೆರೆಶಿಯನ್ ಕಾಲೇಜು ಸೇರಿದೆ. 1997ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟ (ಬೆಂಗಳೂರು)ದಲ್ಲಿ ನನಗೆ ಕಂಚಿನ ಪದಕ (ಹೆಪ್ಟಾಥ್ಲಾನ್) ಸಿಕ್ಕಿತು. ರಾಷ್ಟ್ರಮಟ್ಟದ ನನ್ನ ಮೊದಲ ಗಳಿಕೆ ಅದು~ ಎಂದು ವಿವರಿಸುತ್ತಾರೆ ಶೋಭಾ.

ದಕ್ಷಿಣ ಮಧ್ಯ ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ಶೋಭಾ ಸಿಕಂದರಾಬಾದ್‌ನಲ್ಲಿ ನೆಲೆಸಿದ್ದಾರೆ. ಬೆಂಗಳೂರು ರಾಷ್ಟ್ರೀಯ ಕ್ರೀಡಾಕೂಟದ ಕಂಚಿನ ಪದಕವಲ್ಲದೆ, ಮಣಿಪುರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ, ಬೂಸಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು, ಹೈದರಾಬಾದ್ ಆಫ್ರೋ-ಏಷ್ಯನ್ ಕೂಟದಲ್ಲಿ ಬಂಗಾರ, ಹೈದರಾಬಾದ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಂಗಾರ (ಎಲ್ಲವೂ ಹೆಪ್ಟಥ್ಲಾನ್), 4X400 ಮೀ ರಿಲೆಯಲ್ಲಿ ಬಂಗಾರ, ಹೈದರಾಬಾದ್ ಕೂಟದ ಲಾಂಗ್‌ಜಂಪ್‌ನಲ್ಲಿ ಕಂಚು, 4X100 ಹಾಗೂ 4X400 ರಿಲೆಯಲ್ಲಿ ಬಂಗಾರ, ಬ್ಯಾಂಕಾಕ್‌ನ ಏಷ್ಯನ್ ಗ್ರ್ಯಾನ್ ಪ್ರಿ ಲಾಂಗ್‌ಜಂಪ್‌ನಲ್ಲಿ ಬಂಗಾರ ಸೇರಿದಂತೆ ನೂರಾರು ಪದಕಗಳಿಂದ ಅವರ ಮನೆಯ ಶೋಕೇಸ್ ತುಂಬಿಹೋಗಿದೆ.

ಶೋಭಾಗೆ ಅವಳಿ ಸಹೋದರಿ ಕೂಡ ಇದ್ದಾರೆ. ಅವರ ಹೆಸರು ಶಶಿಕಲಾ. ಹುಟ್ಟಿದ ಕ್ಷಣದಿಂದ ಕ್ರೀಡಾಯಾತ್ರೆವರೆಗೆ  ಇಬ್ಬರೂ ಸಹೋದರಿಯರು ಜೊತೆಯಾಗಿಯೇ ಹೆಜ್ಜೆ    ಹಾಕಿದವರು. ಶಶಿಕಲಾ ಕೂಡ ಕೂಡಿಗೆ ಕ್ರೀಡಾ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. ಸ್ಪರ್ಧೆಯೊಂದರಲ್ಲಿ ಓಡುವಾಗ ಕಾಲಿಗೆ ಗಾಯ ಮಾಡಿಕೊಂಡ ಶಶಿಕಲಾ ಕ್ರೀಡಾ ರಂಗದಿಂದಲೇ ಹೊರಗೆ ಉಳಿಯಬೇಕಾಯಿತು.

ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ರಂಗದಲ್ಲಿ ಸಾಕಷ್ಟು ಸಾಧನೆ ಮಾಡಿದರೂ ರಾಜ್ಯದಿಂದ ಶೋಭಾಗೆ ಒಂದಿನಿತೂ ಪ್ರೋತ್ಸಾಹ ಸಿಗಲಿಲ್ಲ. ಆದ್ದರಿಂದಲೇ ಕರ್ನಾಟಕದ ಈ ಹೆಸರಾಂತ ಅಥ್ಲೀಟ್ ಆಂಧ್ರಕ್ಕೆ ವಲಸೆ ಹೋಗಬೇಕಾಯಿತು. ಅಲ್ಲಿ ಆಗಿನ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಅಗತ್ಯ ತರಬೇತಿ ವ್ಯವಸ್ಥೆ ಮಾಡುವ ಜೊತೆಗೆ ಕೈತುಂಬಾ ಹಣವನ್ನೂ ನೀಡಿತು. ರಾಷ್ಟ್ರೀಯ ಕೂಟದಲ್ಲಿ ಅವರು ಆಂಧ್ರದ ಪರವೇ ಸ್ಪರ್ಧಿಸಿ, ಪದಕ ಗೆದ್ದು ತಂದರು. ಈಗ ಸಿಕಂದರಾಬಾದ್ ಶೋಭಾ ಅವರ ತವರು ಮನೆಯಾಗಿಬಿಟ್ಟಿದೆ.

34ರ ಹರೆಯದ ಶೋಭಾ (ಜನನ: 14-1-1978) ಆಗಲೇ ತಮ್ಮ ಕ್ರೀಡಾ ಜೀವನದ ಉತ್ತುಂಗವನ್ನು ಮುಟ್ಟಿ, ಈಗ ನಿರಾಳರಾಗಿದ್ದಾರೆ. ತಮ್ಮ ಪೈಪೋಟಿ ದಿನಗಳಲ್ಲಿ ಸೋಮಾ ಬಿಸ್ವಾಸ್ ಹಾಗೂ ಪ್ರಮೀಳಾ ಅಯ್ಯಪ್ಪ ಅವರಂತಹ ಕ್ರೀಡಾಪಟುಗಳಿಗಿಂತ ಸಾಕಷ್ಟು ಎತ್ತರದ ಸಾಧನೆ ಮಾಡಿದವರು ಆಕೆ.

ಅಥೆನ್ಸ್‌ನಲ್ಲಿ ತಮ್ಮ ಮಗಳು ಮಾಡಿದ ಸಾಧನೆಯಿಂದ ಬೀಗಿದ್ದ ಜಗದೀಶಪ್ಪ ಜಾವೂರ ಈಗಿಲ್ಲ. ಅಮ್ಮ ಜಯಶ್ರೀ ಮಾತ್ರ ಮಗಳ ಕ್ರೀಡಾ ಯಾತ್ರೆಯನ್ನು ಬೆರಗುಗಣ್ಣಿನಿಂದ ನೋಡುತ್ತಲೇ ಇದ್ದಾರೆ. ಪಶುಪತಿಹಾಳದ ಶಾಲೆಗೆ ಕ್ರೀಡಾಂಗಣ ನಿರ್ಮಿಸಲು ಧನಸಹಾಯವನ್ನೂ ಮಾಡಿದ್ದಾರೆ ಶೋಭಾ. ರಾಷ್ಟ್ರಮಟ್ಟದ ಅಥ್ಲೀಟ್-ಕೊಕ್ಕೊ ಪಟುಗಳನ್ನೂ ಆ ಶಾಲೆ ತಯಾರುಮಾಡಿದೆ. ಅಲ್ಲಿಯ ಕ್ರೀಡಾಪಟುಗಳಿಗೆ ಶೋಭಾ ಅವರೇ ಆದರ್ಶವಾಗಿದ್ದಾರೆ. 
 

ಚಿತ್ರಗಳು: ಕೆ.ಎನ್.ಶಾಂತ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT