ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್‌ನಲ್ಲಿ ತ್ರಿವೇಣಿ ಹ್ಯಾಟ್ರಿಕ್ ಸಾಧನೆ

Last Updated 21 ಏಪ್ರಿಲ್ 2013, 10:25 IST
ಅಕ್ಷರ ಗಾತ್ರ

ಔರಾದ್ ಪಟ್ಟಣದ ಅಮರೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಗುಲ್ಬರ್ಗ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಸತತ ಮೂರು ವರ್ಷಗಳ ಕಾಲ ಚಿನ್ನದ ಪದಕ ಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ.

ಬಿ.ಕಾಂ. ಅಂತಿಮ ವರ್ಷದಲ್ಲಿ ಓದುತ್ತಿರುವ ತ್ರಿವೇಣಿ ಗೋಪಾಲರಾವ 2011ರಿಂದ ಮೂರು ವರ್ಷಗಳ ಕಾಲ ಗುಂಡು ಎಸೆತ (ಶಾಟಪುಟ್)ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ, ಚೆಕ್ರ ಎಸೆತದಲ್ಲಿ ಎರಡು ಬೆಳ್ಳಿ, ಒಂದು ಕಂಚು ಮತ್ತು ಬಲ್ಲೆ ಎಸೆತದಲ್ಲಿ  ಒಂದು ಕಂಚು ಹಾಗೂ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾಳೆ. ಇದೇ ವರ್ಷ ಚೆನೈನಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಮಹಿಳಾ ವಿಭಾಗದ ಕಬ್ಬಡಿ ತಂಡದ ನಾಯಕಿಯಾಗಿ ಭಾಗವಹಿಸಿದ ತ್ರಿವೇಣಿಗೆ ಆಟ ಎಂದರೆ ಪಂಚಪ್ರಾಣ.

ಸರ್ಕಾರಿ ಶಾಲೆ ಶಿಕ್ಷಕರಾದ ಇವರ ತಂದೆ ಗೋಪಾಲರಾವ ಕೂಡ ಕಬ್ಬಡಿ ಕ್ರೀಡಾಪಟು. ಹೀಗಾಗಿ ಚಿಕ್ಕವಳಿಂದಲೇ ಇವಳಿಗೆ ಕ್ರೀಡೆ ಬಗ್ಗೆ ಹೆಚ್ಚು ಆಸಕ್ತಿ. ಕಮಠಾಣಾ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವಾಗ ಅಲ್ಲಿಯ ಪ್ರಾಚಾರ್ಯ ವೀರಭದ್ರ ಅವರ ಪ್ರೋತ್ಸಾಹದಿಂದ ಮೈಸೂರಿನ ದಸರಾ ಕ್ರೀಡಾಕೂಟದಲ್ಲಿ ಕಬ್ಬಡಿ ಆಡಿದ್ದೆ. ಪಿಯುಸಿಯಲ್ಲಿದ್ದಾಗ ಧಾರವಾಡದಲ್ಲಿ ನಡೆದ ಅಥ್ಲೆಟಿಕ್ಸ್‌ನಲ್ಲಿ ಆಡಿರುವುದರಿಂದ ನನಗೆ ಮತ್ತುಷ್ಟು ಆತ್ಮಸ್ಥೈರ್ಯ ಹೆಚ್ಚಿ ಯಾವುದೇ ಸಂಕೋಚಪಡದೆ ದೈರ್ಯದಿಂದ ಆಡುತ್ತೇನೆ ಎಂದು ಹೇಳುತ್ತಾಳೆ ತ್ರಿವೇಣಿ.

ಬಿ.ಕಾಂ.ಗೆ ಪ್ರವೇಶ ಪಡೆದ ನಂತರ ದೈಹಿಕ ಶಿಕ್ಷಣ ಬೋಧಕ ಪ್ರೊ. ಹಾವಗಿರಾವ ವಟಗೆ ಅವರ ಮಾರ್ಗದರ್ಶನ ಮತ್ತು ಪ್ರಾಚಾರ್ಯ ಕಾರ್ತಿಕ ಸ್ವಾಮಿ ದೇವಣೆ ಅವರ ಸಹಕಾರದಿಂದ ಗುಲ್ಬರ್ಗದಲ್ಲಿ ನಡೆದ ಅಂತರ ಕಾಲೇಜು ಪಟ್ಟದ ಅಥ್ಲೆಟಿಕ್ಸ್‌ನಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಪಡೆದುಕೊಂಡಿರುವುದಾಗಿ ಹೆಮ್ಮೆಯಿಂದ ಹೇಳುತ್ತಾಳೆ. ಇವಳಿಗೆ ಕಬ್ಬಡಿ ಮತ್ತು ಓಟದಲ್ಲಿ ಹೆಚ್ಚಿನ ಆಸಕ್ತಿ ಇದ್ದು, ಇನ್ನಷ್ಟು ಸಾಧಿಸುವ ಛಲ ಇಟ್ಟುಕೊಂಡಿದ್ದಾಳೆ. ಮಗಳಿಗೆ ಕ್ರೀಡಾಕೂಟದಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ಬಿಪಿಎಡ್ ಓದಿಸಿ ದೈಹಿಕ ಶಿಕ್ಷಕ ವೃತ್ತಿಗೆ ಸೇರಿಸುವ ವಿಚಾರವಿದೆ ಎಂದು ಹೇಳುತ್ತಾರೆ ತ್ರಿವೇಣಿ ತಂದೆ ಗೋಪಾಲರಾವ.

ಹಿಂದಿನಂತೆ ಇಂದಿನ ವಿದ್ಯಾರ್ಥಿಗಳು ಕ್ರೀಡೆ ಬಗ್ಗೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಅದರಲ್ಲೂ ವಿದ್ಯಾರ್ಥಿನಿಯರು ಆಟ ಆಡುವುದು ಅಪರೂಪ. ಅಂತಹದರಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯಬ್ಬಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡುತ್ತಿರುವುದು ಅತ್ಯಂತ ಹೆಮ್ಮೆಪಡುವ ಸಂಗತಿ ಎಂದು ದೈಹಿಕ ಬೋಧಕ ಪ್ರೊ. ಹಾವಗಿರಾವ ವಟಗೆ ಸಂತಸ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT