ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಿರು ಉತ್ಪಾದನೆ ಹೆಚ್ಚಳ

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದಲ್ಲಿ ಅದಿರು ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸಲು ರಾಜ್ಯ ಸರ್ಕಾರ ಕೈಗಾರಿಕಾ ಸ್ನೇಹಿಯಾಗಬೇಕು. ಮೂಲ ಸೌಕರ್ಯ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ತೋರಬೇಕು~ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಓರ್ ಟೀಮ್ ಎಕ್ಸಿಮ್ ಸಂಸ್ಥೆ ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ `ಕರ್ನಾಟಕದಲ್ಲಿ ಗಣಿಗಾರಿಕೆ ಹಾಗೂ ಉಕ್ಕು ಉತ್ಪಾದನೆಯ ಸಾಮರ್ಥ್ಯ~ ಕುರಿತ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ ಉದ್ಯಮಿಗಳು ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಜೆಎಸ್‌ಡಬ್ಲ್ಯೂ ಉಕ್ಕು ಸಂಸ್ಥೆಯ ನಿರ್ದೇಶಕ ಡಾ.ವಿನೋದ್ ನೋವಲ್ ಮಾತನಾಡಿ, `ದೇಶದ ಉಕ್ಕು ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ 25ರಷ್ಟು ಇದೆ. ರಾಜ್ಯದಲ್ಲಿ ಉದ್ಯಮ ಅಭಿವೃದ್ಧಿ ವಿಪುಲ ಅವಕಾಶಗಳಿದ್ದು, ಉದ್ಯಮಿಗಳನ್ನು ಉತ್ತೇಜಿಸಿ ಮೂಲ ಸೌಕರ್ಯ ಒದಗಿಸಲು ಸರ್ಕಾರ ಒತ್ತು ನೀಡಬೇಕು~ ಎಂದು ಆಗ್ರಹಿಸಿದರು.

`ಉಕ್ಕು ಉದ್ಯಮದ ಅಭಿವೃದ್ಧಿಗೆ ಹಣಕಾಸು ಹಾಗೂ ತಂತ್ರಜ್ಞಾನದ ಕೊರತೆ ಇಲ್ಲ. ಕಾರ್ಮಿಕರ ಸಾಮರ್ಥ್ಯವೃದ್ಧಿ ಆಗಬೇಕು. ಉಕ್ಕು ಉದ್ಯಮಕ್ಕೆ ಅಧಿಕ ಪ್ರಮಾಣದ ನೀರಿನ ಅಗತ್ಯ ಇದ್ದು, ಸರ್ಕಾರ ನೀರು ಪೂರೈಕೆಗೆ ಯೋಜನೆಗಳನ್ನು ರೂಪಿಸಬೇಕು. ಈ ಕ್ಷೇತ್ರದಲ್ಲಿ ದುಡಿಯುವ ಯುವಜನರಿಗೆ ಬಹು ಕೌಶಲ ತರಬೇತಿ ನೀಡಬೇಕಿದೆ. ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕಿದೆ. ಅದರಿನ ಮೌಲ್ಯವರ್ಧನೆ ಆಗಬೇಕು~ ಎಂದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಕೆ. ಶಿವ ಷಣ್ಮುಗಂ ಮಾತನಾಡಿ, `ರಾಜ್ಯ ಉಕ್ಕಿನ ಲಭ್ಯತೆಯಿಂದ ಪ್ರಸಿದ್ಧವಾದುದು. ಈ ಕಾರಣಕ್ಕಾಗಿಯೇ 2010 ಹಾಗೂ 2012ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉಕ್ಕು ಉದ್ಯಮದ ದಿಗ್ಗಜರು ರಾಜ್ಯದಲ್ಲಿ ಘಟಕಗಳನ್ನು ತೆರೆಯಲು ಸರ್ಕಾರದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದರು.
 
ಭೂ ಸ್ವಾಧೀನದ ಸಮಸ್ಯೆಯಿಂದಾಗಿ ಪೊಸ್ಕೊ ಸಂಸ್ಥೆಯ ಘಟಕ ಕಾರ್ಯಾರಂಭ ಮಾಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉಕ್ಕು ಉದ್ಯಮಕ್ಕೆ ಅಗತ್ಯ ಇರುವ ಭೂಮಿಗಳ ಒದಗಿಸುವಿಕೆ ಹಾಗೂ ಮೂಲಸೌಕರ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.

ಓರ್ ಟೀಮ್ ಎಕ್ಸಿಮ್ ಸಂಸ್ಥೆಯ ನಿರ್ದೇಶಕ ಸಚಿನ್ ಸೆಹಗಲ್ ಮಾತನಾಡಿ, `ರಾಜ್ಯದಲ್ಲಿ ದೊರೆಯುವ ಅದಿರಿನಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುತ್ತಿರುವುದರಿಂದ ಅದಿರಿನ ಮೌಲ್ಯವರ್ಧನೆ ಅಗತ್ಯ. 2 ವರ್ಷಗಳ ಕಾಲ ಗಣಿಗಳನ್ನು ಚಾಲನೆಯಲ್ಲಿ ಇಡದ ಕಾರಣ ಅದಿರಿನ ಗುಣಮಟ್ಟ ಕಡಿಮೆಯಾಗಿದೆ. ಗಣಿಗಳನ್ನು ಮುಚ್ಚಿರುವ ಕಾರಣ ಉಕ್ಕು ಉದ್ದಿಮೆಗೆ ಕಚ್ಚಾ ಸಾಮಗ್ರಿಯ ಕೊರತೆ ಉಂಟಾಗಿದೆ.
 
ಇಂತಹ ಸಂದರ್ಭದಲ್ಲಿ ಅದಿರಿನ ಮೌಲ್ಯವರ್ಧನೆಗೆ ಅವಕಾಶ ಹೆಚ್ಚಾಗಿದೆ. ಅಲಭ್ಯವಾಗುತ್ತಿರುವ ಉಂಡೆ ಕಬ್ಬಿಣದ ಅದಿರಿನ ಬದಲಾಗಿ ಕಬ್ಬಿಣದ ತುಣುಕು (ಪೆಲೆಟ್)ಗಳನ್ನು ಬಳಸುವುದರ ಮೂಲಕ ಮೆದು ಕಬ್ಬಿಣದ ಅದಿರಿನ ಉತ್ಪಾದನೆಯನ್ನೂ ಹೆಚ್ಚಿಸಬಹುದು~ ಎಂದರು.

ಕೇಂದ್ರ ಉಕ್ಕು ಇಲಾಖೆಯ ಜಂಟಿ ಮುಖ್ಯ ಆರ್ಥಿಕ ತಜ್ಞೆ ಸುಸ್ಮಿತಾ ದಾಸ್‌ಗುಪ್ತ, `ಭಾರತ ಸೇರಿದಂತೆ ಕೆಲವೇ ರಾಷ್ಟ್ರಗಳಲ್ಲಿ ಉಕ್ಕು ನೀತಿ ಜಾರಿಯಲ್ಲಿತ್ತು. ಈಗ ಉಳಿದ ರಾಷ್ಟ್ರಗಳು ಉಕ್ಕು ನೀತಿ ಜಾರಿಗೆ ತರಲು ಆಸಕ್ತಿ ವಹಿಸಿವೆ. ಉಕ್ಕು ಕ್ಷೇತ್ರದ ಅಭಿವೃದ್ಧಿಗೆ ಮೂಲ ಸೌಕರ್ಯ ಒದಗಿಸುವುದು ಅಗತ್ಯ ಹಾಗೂ ಕಾರ್ಮಿಕರಿಗೆ ಕೌಶಲ ತರಬೇತಿ ನೀಡಬೇಕಿದೆ~ ಎಂದರು.

ಕೈಗಾರಿಕಾ ಅಭಿವೃದ್ಧಿ ಆಯುಕ್ತಎಂ. ಮಹೇಶ್ವರ ರಾವ್, `ಕೈಗಾರಿಕೆಗಳಿಗೆ ಅಗತ್ಯ ಇರುವ ಮೂಲ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಕೈಗಾರಿಕೆಗಳಿಗೆ ಭೂಮಿ ನೀಡಲು ಒಂದು ಲಕ್ಷ ಎಕರೆ ಗುರುತಿಸಲಾಗಿದ್ದು, 49 ಸಾವಿರ ಎಕರೆ ಭೂಮಿ ನೋಟಿಫೈ ಮಾಡಲಾಗಿದೆ~ ಎಂದರು.

ಗಣಿ ಇಲಾಖೆ ನಿರ್ದೇಶಕ ಎಚ್.ಆರ್.ಶ್ರೀನಿವಾಸ್, ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾದ ಕರ್ನಾಟಕ - ಗೋವಾದ ಉಸ್ತುವಾರಿ ನಿರ್ದೇಶಕ ಆರ್.ಎನ್. ಪಾತ್ರ ಉಪಸ್ಥಿತರಿದ್ದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT