ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಬಿಟ್ಟು ತೊಲಗಿ

Last Updated 21 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: `ಜನ ಲೋಕಪಾಲ ಮಸೂದೆ ಅಂಗೀಕರಿಸಿ ಇಲ್ಲವೆ ಅಧಿಕಾರ ಬಿಟ್ಟು ತೊಲಗಿ~ ಎಂದು ರಾಮಲೀಲಾ ಮೈದಾನದಲ್ಲಿ ಗುಡುಗಿರುವ ಅಣ್ಣಾ ಹಜಾರೆ, ಆಗಸ್ಟ್ 30ರೊಳಗೆ ತಮ್ಮ ತಂಡ ಸಿದ್ಧಪಡಿಸಿರುವ ಮಸೂದೆ ಅಂಗೀಕರಿಸದಿದ್ದರೆ ಯಾರೂ ನಿರೀಕ್ಷಿಸಿದಂಥ ದೊಡ್ಡ ಕ್ರಾಂತಿಯೇ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಇಂಡಿಯಾ ಗೇಟ್‌ನಿಂದ ರಾಮಲೀಲಾ ಮೈದಾನದವರೆಗೆ ಭಾನುವಾರ ರಾತ್ರಿ ರ‌್ಯಾಲಿ ನಡೆಸಿದ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾ ಹಜಾರೆ, ಜನ ಲೋಕಪಾಲ ಮಸೂದೆ ಅಂಗೀಕರಿಸಲು ನಿಮಗೆ ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ತಾಕೀತು ಮಾಡಿದರು.

 ~ಸೋಮವಾರದಿಂದ ಮಂತ್ರಿಗಳು, ಸಂಸದರ ಮನೆ ಮುಂದೆ ಭಜನೆ ಮಾಡಿ. ಭಜನೆಗೆ ದೊಡ್ಡ ಶಕ್ತಿ ಇದೆ. ಇದನ್ನು ನಾನು ಅನುಭವದಿಂದ ಕಂಡುಕೊಂಡಿದ್ದೇನೆ~ ಎಂದು ಹೇಳಿದರು.

~ರಘುಪತಿ ರಾಘವ ರಾಜಾರಾಂ. ಸಬ್‌ಕೋ ಸನ್ಮತಿ ದೇ ಭಗವಾನ್ ಎಂದು ಭಜನೆ ಮಾಡಿ~ ಎಂದು ಅಣ್ಣಾ ಕರೆ ನೀಡಿದರು. ಸರ್ಕಾರ ನಾಗರಿಕ ಸಂಘಟನೆಗಳ ಮುಖಂಡರನ್ನು ವಂಚಿಸಿದೆ. ಭ್ರಷ್ಟಾಚಾರ ಹತ್ತಿಕ್ಕುವ ವಿಷಯದಲ್ಲಿ ಅದಕ್ಕೆ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಆರು ವರ್ಷಗಳ ಹಿಂದೆ ಅಂಗೀಕರಿಸಲಾಗಿರುವ ಮಾಹಿತಿ ಹಕ್ಕು ಯಾರು ಎಷ್ಟು ಹಣ ನುಂಗಿದ್ದಾರೆ ಎಂಬ ಮಾಹಿತಿ ನೀಡುತ್ತದೆ. ತಮ್ಮ ಜನ ಲೋಕಪಾಲ ಮಸೂದೆ ನುಂಗಿರುವ ಹಣವನ್ನು ವಾಪಸ್ ವಸೂಲು ಮಾಡಲಿದೆ. ಈ ಕಾರಣಕ್ಕೆ ನಾವು ಜನ ಲೋಕಪಾಲ ಮಸೂದೆ ಅಂಗೀಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಆದರೆ, ಇದು ಸರ್ಕಾರಕ್ಕೆ ಬೇಡವಾಗಿದೆ ಎಂದು ಅಣ್ಣಾ ದೂರಿದರು.

`ಜನ ಲೋಕಪಾಲ ಮಸೂದೆ ಬಳಿಕ ವ್ಯವಸ್ಥೆ ಪರಿವರ್ತನೆಗೆ ಹೋರಾಟ ಮಾಡೋಣ. ನಿಮ್ಮ (ಯುವಕರು) ಶಕ್ತಿಯನ್ನು ನನಗೆ ಧಾರೆ ಎರೆಯಿರಿ. ವ್ಯವಸ್ಥೆ ವಿರುದ್ಧದ ನಿಮ್ಮ ಸಿಟ್ಟು ಆಕ್ರೋಶ ತಣ್ಣಗಾಗಲು ಬಿಡಬೇಡಿ. ನಾನು ಬದುಕಿರಲಿ ಅಥವಾ ಬಿಡಲಿ ನಿಮ್ಮ ಹೋರಾಟ ಮುಂದುವರೆಯಲಿ~ ಎಂದು ಅಣ್ಣಾ ಕರೆ ಕೊಟ್ಟರು.

ಏಪ್ರಿಲ್‌ನಲ್ಲಿ ನಾನು ಉಪವಾಸ ಕುಳಿತ ಬಳಿಕ ಸರ್ಕಾರ ಜಂಟಿ ಸಮಿತಿ ರಚನೆ ಮಾಡಿತು. ಎರಡು ತಿಂಗಳ ಚರ್ಚೆಯ ಬಳಿಕ ಏನೂ ಸಾಧನೆ ಆಗಲಿಲ್ಲ. ನಾಗರಿಕ ಸಂಘಟನೆಗಳಿಗೆ ಸರ್ಕಾರ ವಂಚನೆ ಮಾಡಿತು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಸರ್ಕಾರದ ಕಾಳಜಿ ಕಪಟ ಎಂಬುದು ರುಜುವಾಯಿತು ಎಂದು ಹಿರಿಯ ಗಾಂಧಿವಾದಿ ಲೇವಡಿ ಮಾಡಿದರು.  ಜನ ಲೋಕಪಾಲ ಮಸೂದೆಗೆ ಆಗ್ರಹಿಸಿ ನಡೆಯುತ್ತಿರುವ ಚಳವಳಿಯನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಅಣ್ಣಾ ಮತ್ತೆ ಬಣ್ಣಿಸಿದರು.

 `ನಾವು ಸರ್ಕಾರದ ಜತೆ ಚರ್ಚೆಗೆ ಸಿದ್ಧ. ಆದರೆ, ಪ್ರಧಾನಿ ಕಚೇರಿ ಮತ್ತು ಉನ್ನತ ನ್ಯಾಯಾಂಗವನ್ನು ಲೋಕಪಾಲ ಮಸೂದೆ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ~ ಎಂದು ಅಣ್ಣಾ ತಂಡ ಸ್ಪಷ್ಟಪಡಿಸಿದೆ. ಭಾನುವಾರ ಸೇರಿದ್ದ  ಅಣ್ಣಾ ಹಜಾರೆ ತಂಡ `ಯಾವುದೇ ಕಾರಣಕ್ಕೂ ಬೇಡಿಕೆಯಿಂದ ಹಿಂದೆ ಸರಿಯಬಾರದು~ ಎಂಬ ನಿರ್ಣಯಕ್ಕೆ ಬಲವಾಗಿ ಅಂಟಿಕೊಂಡಿತು.

ಬಿಕ್ಕಟ್ಟು ನಿವಾರಣೆಗೆ ಸರ್ಕಾರದ ಪ್ರಸ್ತಾವ

ನವದೆಹಲಿ : ಲೋಕಪಾಲ ಮಸೂದೆ ಕುರಿತ ಬಿಕ್ಕಟ್ಟು ನಿವಾರಣೆಗೆ ಸರ್ಕಾರ ಭಾನುವಾರ ರಾತ್ರಿ ಪ್ರಸ್ತಾವ ಕಳುಹಿಸಿದೆ.

ರಾಮಲೀಲಾ ಮೈದಾನದಲ್ಲಿ ಅಣ್ಣಾ ಬಳಗದ ಅರವಿಂದ್ ಕೇಜ್ರಿವಾಲ ಅವರು, ಸರ್ಕಾರದ ಪ್ರಸ್ತಾವವಿದ್ದ ಕಾಗದ ಪತ್ರವನ್ನು ಪ್ರದರ್ಶಿಸಿ, ಇದರಲ್ಲಿ ಹೊಸತೇನೂ ಇಲ್ಲ ಮತ್ತು ತಂಡದ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದರು.

`ಸರ್ಕಾರದಿಂದ ನಾವು ಪ್ರಸ್ತಾವ ಸ್ವೀಕರಿಸಿದ್ದೇವೆ. ಆದರೆ ಅದು ಸರ್ಕಾರದ ಲೋಕಪಾಲ ಮಸೂದೆ ಮಾತ್ರ. ನಮ್ಮ ಯಾವುದೇ ಬೇಡಿಕೆಯನ್ನು ಅದರಲ್ಲಿ ಸೇರಿಸಿಲ್ಲ. ನಾಗರಿಕ ಸಮಿತಿ ಮತ್ತು ಸರ್ಕಾರದ ಮಧ್ಯೆ ಯಾವುದೇ ಒಪ್ಪಂದ ಆಗಿಲ್ಲ~ ಎಂದು ಅವರು ಅಣ್ಣಾ ಬೆಂಬಲಿಗರಿಗೆ ತಿಳಿಸಿದರು.

ಸರ್ಕಾರ ಮತ್ತು ನಾಗರಿಕ ಸಮಿತಿ ನಡುವೆ ಒಪ್ಪಂದ ಏರ್ಪಟ್ಟಿದೆಯೆಂಬ ಮಾಧ್ಯಮಗಳ ವರದಿಯನ್ನೂ ಅವರು ನಿರಾಕರಿಸಿದರು. `ಒಪ್ಪಂದ ವೇರ್ಪಟ್ಟಿದೆ ಎಂದು ಟಿವಿ ಚಾನೆಲ್‌ಗಳು ವರದಿ ಮಾಡುತ್ತಿವೆ. ಆದರೆ ಈ ವರದಿಗಳು ತಪ್ಪು. ಒಪ್ಪಂದ ಆಗಿಲ್ಲ~ ಎಂದರು.

ಬೆಳಿಗ್ಗೆ ಹಜಾರೆ ಅವರೊಂದಿಗೆ ಮಾತುಕತೆ ನಡೆಸಿದ ಇಂದೋರ್ ಮೂಲದ ಆಧ್ಯಾತ್ಮಿಕ ನಾಯಕ ಬೈಯೂಜಿ ಮಹಾರಾಜ್ ಅವರು ಎರಡೂ ಕಡೆ ಯಾವುದೇ ಒಪ್ಪಂದ ಸಾಧ್ಯವಾಗಿಲ್ಲ ಎಂದರು.

ಕೇಜ್ರಿವಾಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, `ಹೌದು ಎರಡು ಕಡೆ ಯಾವುದೇ ಒಪ್ಪಂದ ಆಗಿಲ್ಲ ಎಂಬುದು ನಿಜ~ ಎಂದು ಬೈಯೂಜಿ ಟಿವಿ ಚಾನೆಲ್‌ವೊಂದಕ್ಕೆ ತಿಳಿಸಿದರು. ಸೋಮವಾರ ಸಂಜೆ ವೇಳೆಗೆ ಒಪ್ಪಂದ ಸಾಧ್ಯವಾಗಬಹುದೇ ಎಂದು ಕೇಳಿದ್ದಕ್ಕೆ `ಆ ಬಗ್ಗೆ ನಾನೇನೂ ಹೇಳಲು ಸಾಧ್ಯವಿಲ್ಲ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT