ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಗೈರು: ಕಠಿಣ ಕ್ರಮದ ಎಚ್ಚರಿಕೆ

Last Updated 10 ಜುಲೈ 2013, 10:20 IST
ಅಕ್ಷರ ಗಾತ್ರ

ಚನ್ನಗಿರಿ: `ತಾಲ್ಲೂಕು ಪಂಚಾಯ್ತಿಯ ಸಾಮಾನ್ಯ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಗಳಿಗೆ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಸಭೆಗೆ ಗೈರು ಹಾಜರಾಗುವ ಪರಿಪಾಠ ಮುಂದುವರಿದಿದೆ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಜಿ.ಮರುಳಸಿದ್ದಪ್ಪ ಅಧಿಕಾರಿಗಳ ಮೇಲೆ ಹರಿಹಾಯ್ದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಅಧಿಕಾರಿಗಳು ಪದೇ ಪದೇ ಗೈರು ಹಾಜರಾದರೂ ಕೂಡಾ ತಾಲ್ಲೂಕು ಪಂಚಾಯ್ತಿ ಅವರ ಮೇಲೆ ಕ್ರಮ ಕೈಗೊಳ್ಳಲು ವಿಫಲವಾಗಿದೆ.  ನಾವು ಯಾರಿಂದ ಕಾಮಗಾರಿ ಪ್ರಗತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಪ್ರತಿ ತಿಂಗಳು 5ರಂದು ಪ್ರಗತಿ ಪರಿಶೀಲನಾ ಸಭೆ ಕಡ್ಡಾಯವಾಗಿ ನಡೆಯುವಂತಾಗಬೇಕು. ಇನ್ನು ಮುಂದೆ ಗೈರು ಹಾಜರಾದ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆಗೆ ಕಾಂಡಕೊರಕ ಹಾಗೂ ಗೊಣ್ಣೆ ಹುಳು ಬಾಧೆ ಕಾಡುತ್ತಿದೆ. ಇದಕ್ಕೆ ಪೋಷಕಾಂಶವುಳ್ಳ ಗೊಬ್ಬರವನ್ನು ಹಾಕದಿರುವುದು ಪ್ರಮುಖ ಕಾರಣ. ರೈತರು ತಮ್ಮ ಬೆಳೆಗಳಿಗೆ ಜಿಪ್ಸಂ, ಜಿಂಕ್ ಹಾಗೂ ಬೋರಾನ್ ಹಾಕಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ರಸಗೊಬ್ಬರ ಕೊರತೆ ತಾಲ್ಲೂಕಿನಲ್ಲಿ ಇಲ್ಲ ಎಂದು ಕೃಷಿ ಇಲಾಖೆ ಸಹಾಯಕ ಅಧಿಕಾರಿ ಮಿಥುನ್ ಸಭೆಗೆ ಮಾಹಿತಿ ನೀಡಿದರು.

ಪ್ರಸ್ತುತ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟಕ್ಕೆ ತಯಾರಿಸುವ ಸಾಂಬಾರಿನಲ್ಲಿ ತರಕಾರಿ ಇಲ್ಲದೇ ನೀರಿನಂತಹ ಸಾಂಬಾರು ನೀಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ತರಕಾರಿಗೆ ನೀಡುವ ಅನುದಾನ ಯಾವುದಕ್ಕೆ ಸಾಲದಂತಾಗಿದೆ. ಆದ್ದರಿಂದ ತರಕಾರಿ ಬೆಲೆ ಏರಿಕೆ ಯಾಗಿರುವುದರಿಂದ ತರಕಾರಿ ಖರೀದಿಸಲು ನೀಡುವ ಅನುದಾನ ಹೆಚ್ಚಿಸಬೇಕು.

ಅದೇ ರೀತಿ ಶಾಲೆಗಳಲ್ಲಿ ಶಾಲಾ ಕೈ ತೋಟಗಳನ್ನು ಮಾಡಿ, ಅಲ್ಲಿ ತರಕಾರಿ ಬೆಳೆದರೆ ಅನುಕೂಲವಾಗುತ್ತದೆ. ಶಾಲಾ ಕೈ ತೋಟ ಮಾಡಲು ಎಲ್ಲಾ ಶಾಲೆಗಳ ಮುಖ್ಯಸ್ಥರಿಗೆ ಆದೇಶ ಮಾಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿಗೆ ಉಪಾಧ್ಯಕ್ಷೆ ಆರ್.ಲಲಿತಾ ಸೂಚನೆ ನೀಡಿದರು.

ಸೂಳೆಕೆರೆ ಮೀನುಗಾರರ ಕೆರೆಯಾಗಿದ್ದು, ಸುಮಾರು 300ಕ್ಕಿಂತ ಹೆಚ್ಚು ಮೀನುಗಾರರು ರೂ. 1 ಸಾವಿರ ಪಾವತಿಸಿ ಲೈಸೆನ್ಸ್ ಪಡೆದುಕೊಂಡು ಮೀನನ್ನು ಹಿಡಿದು ಜೀವನ ಸಾಗಿಸುತ್ತಾರೆ. ಆದರೆ ಇಲ್ಲಿ ಹಿಡಿಯುವ ಮೀನನ್ನು ರೂ. 100ರಿಂದ ರೂ. 150ಕ್ಕೆ ಮಾರಾಟ ಮಾಡುತ್ತಾರೆ. ಇಲಾಖೆಯ ನಿಯಮದಂತೆ ರೂ. 25ಕ್ಕೆ ಒಂದು ಕೆ.ಜಿ ಮೀನನ್ನು ಮಾರಾಟ ಮಾಡಬೇಕು. ಈ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಗಮನಹರಿಸುವುದು ಉತ್ತಮ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಅವರಿಗೆ ತಿಳಿಸಲಾಯಿತು.

ಕಾಕನೂರು, ಹೆಬ್ಬಳಗೆರೆ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿದ್ದು, ಶೀಘ್ರವೇ ಈ ಗ್ರಾಮಗಳಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಬೇಕು. ಅದೇ ರೀತಿ ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿನಿಲಯಗಳಲ್ಲೂ ಶುಚಿತ್ವ ಹಾಗೂ ಸ್ವಚ್ಛತೆಯನ್ನು ಕಾಪಾಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಎಂದು ಕಾರ್ಯ ನಿರ್ವಹಣಾಧಿಕಾರಿ ಬಸವರಾಜಪ್ಪ  ಅಧಿಕಾರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT