ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಸಿಎಂ ಶೆಟ್ಟರ್ ಕಿವಿಮಾತು

Last Updated 16 ಜುಲೈ 2012, 9:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಸರ್ಕಾರಕ್ಕೆ ಉಳಿದಿರವುದು 10 ತಿಂಗಳ ಅವಧಿ, ಅದರಲ್ಲಿ ಮುಂದಿನ ಆರು ತಿಂಗಳು ಭರ್ಜರಿ ಬ್ಯಾಟಿಂಗ್ ಮಾಡಬೇಕಿದೆ. ಕೊನೆಯ ಇನ್ನಿಂಗ್ಸ್ ನಲ್ಲಿ ನೀವೆಲ್ಲಾ ಚುರುಕಾಗಿ ಕೆಲಸ ಮಾಡಿದರೆ ಹೆಚ್ಚು ಸ್ಕೋರ್ ಮಾಡಲು ಸಾಧ್ಯ~ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಸರ್ಕ್ಯೂಟ್‌ಹೌಸ್‌ನಲ್ಲಿ ಭಾನುವಾರ ಜಿಲ್ಲೆಯ ಬರ ಪರಿಸ್ಥಿತಿ ಹಿನ್ನೆಲೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ನನ್ನ ಅವಧಿಯಲ್ಲಿ ಜಿಲ್ಲೆಯ ಪ್ರತೀ ತಾಲ್ಲೂಕಿಗೂ ದೊಡ್ಡ ಯೋಜನೆಗಳನ್ನು ತರುವ ಉದ್ದೇಶವಿದೆ. ಯಾವ ಯೋಜನೆ ಅನುಷ್ಠಾನ ಅಗತ್ಯವಿದೆ. ಮೂಲ ಸೌಕರ್ಯಗಳ ಲಭ್ಯತೆ ಕುರಿತು ಯೋಜನಾ ವರದಿ ಸಿದ್ಧಗೊಳಿಸುವಂತೆ ಸೂಚಿಸಿದ ಶೆಟ್ಟರ್, ಇದೇ 21ರಂದು ಪುನಃ ಸಭೆ ನಡೆಸುವೆ ಆಗ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶೇ 50ರಷ್ಟು ಮಳೆ, 34ರಷ್ಟು ಬಿತ್ತನೆ: ಜಿಲ್ಲೆಯಲ್ಲಿ ಜುಲೈ ಎರಡನೇ ವಾರಕ್ಕೆ ವಾಡಿಕೆಯಂತೆ 236 ಮಿ.ಮೀ ಮಳೆಯಾಗಬೇಕಿತ್ತು. 129 ಮಿ.ಮೀ ಮಾತ್ರ ಮಳೆಯಾಗಿದೆ. ಶೇ 50ರಷ್ಟು ಮಳೆ ಕಡಿಮೆಯಾಗಿದೆ. ಕಳೆದ ವರ್ಷದ ಮುಂಗಾರು, ಹಿಂಗಾರು ಹಂಗಾಮಿನಲ್ಲಿಯೂ ಮಳೆಯ ಕೊರತೆಯಾಗಿದೆ.

ಈ ಬಾರಿ ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಇಟ್ಟುಕೊಂಡಿದ್ದರೂ 70 ಸಾವಿರ ಹೆಕ್ಟೇರ್ ಮಾತ್ರ ಬಿತ್ತನೆಯಾಗಿ ಶೇ 34ರಷ್ಟು ಮಾತ್ರ ಗುರಿ ಸಾಧನೆಯಾಗಿದೆ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಸಭೆಯಲ್ಲಿ ಮಳೆ ವೈಫಲ್ಯ ಬಿಚ್ಚಿಟ್ಟರು.

ಜಿಲ್ಲೆಯಲ್ಲಿ ಹೆಸರು ಬೆಳೆ ಈಗಾಗಲೇ ಸಂಪೂರ್ಣ ನಾಶವಾಗಿದೆ. ವಾರದೊಳಗಾಗಿ ಮಳೆಯಾಗದಿದ್ದಲ್ಲಿ ಗೋವಿನಜೋಳ, ಶೇಂಗಾ, ಸೋಯಾಬಿನ್ ಹಾಗೂ ಹತ್ತಿಯ ಪರಿಸ್ಥಿತಿಯೂ ಶೋಚನೀಯವಾಗಲಿದೆ ಎಂದರು.

ತೋಟಗಾರಿಕೆ ಬೆಳೆಗಳಾದ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬಿತ್ತನೆಯೂ ಆಗಿಲ್ಲ. 35 ಸಾವಿರ ಹೆಕ್ಟೇರ್ ಗುರಿ ಹೊಂದಲಾಗಿದ್ದ ಉಳ್ಳಾಗಡ್ಡಿ ಕೇವಲ 120 ಎಕರೆ ಮಾತ್ರ ಬಿತ್ತನೆಯಾಗಿದೆ. ಬಿತ್ತನೆ ಬೀಜ 20 ಸಾವಿರ ಕ್ವಿಂಟಲ್ ಶೇಖರಣೆ ಇದ್ದರೂ ಅದರಲ್ಲಿ 15 ಸಾವಿರ ಕ್ವಿಂಟಲ್ ಮಾರಾಟವಾಗಿದೆ ಆದರೆ ಬಿತ್ತನೆಯಾಗಿಲ್ಲ. 28 ಸಾವಿರ ಮೆಟ್ರಿಕ್‌ಟನ್ ರಸಗೊಬ್ಬರ ಜಿಲ್ಲೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.

7.4 ಕೋಟಿ ವಿಮಾ ಮೊತ್ತ: ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ವೈಫಲ್ಯ ಹೊಂದಿದ ಪರಿಣಾಮ ಜಿಲ್ಲೆಗೆ 7.4 ಕೊಟಿ ರೂಪಾಯಿ ವಿಮಾ ಮೊತ್ತ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೇ ರೈತರ ಖಾತೆಗಳಿಗೆ ಹಣ ಸಂದಾಯ ಮಾಡಲಾಗುವುದು.
 
ಈ ಬಾರಿಯ ಬೆಳೆ ವಿಮೆಯ ಪ್ರೀಮಿಯಂ ತುಂಬಲು ಜುಲೈ 31 ಕೊನೆಯ ದಿನಾಂಕವಾಗಿದೆ. ಬಿತ್ತನೆಯಾಗದ ಕಾರಣ ಕೃಷಿ ಇಲಾಖೆಯಿಂದ ರೈತರಿಗೆ ಬೆಳೆ ದೃಢೀಕರಣ ಪತ್ರ ನೀಡಲು ಆಗುತ್ತಿಲ್ಲ. ಪ್ರಿಮಿಯಂ ಹಣ ತುಂಬುವ ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಸಿಎಂಗೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ಕುಡಿಯುವ ನೀರಿನ ಸಮಸ್ಯೆ: ಕಳೆದೊಂದು ವರ್ಷದಿಂದ ನವಲಗುಂದ ತಾಲ್ಲೂಕಿನ 2, ಹುಬ್ಬಳ್ಳಿಯ 1 ಹಾಗೂ ಕುಂದಗೋಳ ತಾಲ್ಲೂಕಿನ 15 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ನವಲಗುಂದ ಹಾಗೂ ಕುಂದಗೋಳ ತಾಲ್ಲೂಕಿನ ಕೆರೆಗಳು ಸಂಪೂರ್ಣ ಬತ್ತಿವೆ.

ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕಾದ ಗ್ರಾಮಗಳ ಸಂಖ್ಯೆ ಇನ್ನೂ ಹೆಚ್ಚಲಿದೆ. ನವಲಗುಂದ ತಾಲ್ಲೂಕಿನಲ್ಲಿ ನೀರಿನ ಮೂಲ ಇಲ್ಲದ ಕಾರಣ ಹುಬ್ಬಳ್ಳಿಯಿಂದಲೇ ಮಲಪ್ರಭಾ ನೀರನ್ನು ಟ್ರ್ಯಾಕ್ಟರ್‌ಗಳ ಮೂಲಕ ಪೂರೈಸಬೇಕಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಹೆಸ್ಕಾಂ ಅಧಿಕಾರಿ ತರಾಟೆಗೆ: ನವಲಗುಂದ ತಾಲ್ಲೂಕು ಅಳಗವಾಡಿ ಹಾಗೂ ಹುಬ್ಬಳ್ಳಿ ತಾಲ್ಲೂಕು ಬಂಡಿವಾಡದಲ್ಲಿ ಕುಡಿಯುವ ನೀರು ಪೂರೈಕೆಗೆ ಕೊಳವೆ ಬಾವಿ ಕೊರೆದು ತಿಂಗಳು ಕರೆದರೂ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಹೆಸ್ಕಾಂ ಸೂಪರಿಟೆಂಡೆಂಟ್ ಎಂಜಿನಿಯರ್ ಬೆಂಡಿಗೇರಿ ಅವರನ್ನು ಶೆಟ್ಟರ್ ತರಾಟೆಗೆ ತೆಗೆದುಕೊಂಡರು.

ಮುಂದಿನ ವಾರ ತಾವು ಅಳಗವಾಡಿಗೆ ಭೇಟಿ ನೀಡಲಿದ್ದು, ಅಷ್ಟರೊಳಗೆ ಸಂಪರ್ಕ ಕಲ್ಪಿಸುವಂತೆ ತಾಕೀತು ಮಾಡಿದರು. ಮೇವು ಬ್ಯಾಂಕ್‌ಗಳಲ್ಲಿ ಉಚಿತವಾಗಿ ಮೇವು ನೀಡುವಂತೆ ರೈತರ ಒತ್ತಾಯವನ್ನು ಪರಿಶೀಲನೆ ಮಾಡುವಂತೆ ಹಾಗೂ ನವಲಗುಂದ ಎಪಿಎಂಸಿಯಲ್ಲಿ ತೆರೆದಿರುವ ಗೋಶಾಲೆಯ ರೀತಿ ಅಣ್ಣಿಗೇರಿ, ಧಾರವಾಡ, ಹುಬ್ಬಳ್ಳಿ, ಕುಂದಗೋಳದಲ್ಲಿ ಗೋಶಾಲೆ ಆರಂಭಿಸಲು ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಂಸದ ಪ್ರಹ್ಲಾದ ಜೋಶಿ,ಶಾಸಕರಾದ ವೀರಭದ್ರಪ್ಪ ಹಾಲಹರವಿ, ಪೊಲೀಸ್ ಆಯುಕ್ತ ಡಾ.ರಾಮಚಂದ್ರರಾವ್, ಮೇಯರ್ ಪಾಂಡುರಂಗ ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಮಲ್ಲಿಕಾರ್ಜುನ ಸಾವಕಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT